Advertisement

ಮಾ. 20, 21: ಎಂಜಿಎಂ ಕೃಷಿ ಸಮ್ಮಿಲನ : ವಿದ್ಯಾರ್ಥಿಗಳಲ್ಲಿ ಕೃಷಿ ಆಸಕ್ತಿ ಮೂಡಿಸುವ ಪ್ರಯತ್ನ

10:52 PM Mar 17, 2021 | Team Udayavani |

ಉಡುಪಿ: ಎಂ.ಜಿ.ಎಂ ಕಾಲೇಜಿನ ಮಾನವಿಕ ಹಾಗೂ ಭಾಷಾ ವಿಭಾಗಗಳು, ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ ಕ್ರಾಸ್‌ ಮತ್ತು ಐಕ್ಯುಎಸಿ ಸಹಯೋಗ ದಲ್ಲಿ ಮಾ. 20 ಮತ್ತು 21ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6ರ ವರೆಗೆ ಎರಡು ದಿನಗಳ ಕೃಷಿ ಸಮ್ಮಿಲನ, ಸ್ಥಳೀಯ ಕೃಷಿ ಬದುಕು ಮತ್ತು ಉತ್ಪನ್ನಗಳ ಅವಲೋಕನ ಎಂಬ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಡಾ| ದೇವಿದಾಸ್‌ ಎಸ್‌. ನಾಯ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ಜಿಲ್ಲೆಯ ಕೃಷಿಕರಿಂದ ಕೃಷಿ ಉತ್ಪನ್ನಗಳ ಪ್ರದರ್ಶನ, ಮಾರಾಟ ಮತ್ತು ವಿವಿಧ ವಿಷಯಗಳ ಕುರಿತು ತಜ್ಞರಿಂದ, ಸಾಧಕ ಕೃಷಿಕರಿಂದ ಮಾಹಿತಿ ಮಾಲಿಕೆ ನಡೆಯಲಿದೆ. ಬೆಳೆಯುವವರಿಂದಲೇ ನೇರವಾಗಿ ಗ್ರಾಹಕರಿಗೆ ಹಣ್ಣು, ತರಕಾರಿ, ಸಸಿ, ಬೀಜ ಹಾಗೂ ಮಣ್ಣಿನ ಮಡಿಕೆ, ಬುಟ್ಟಿ ಮತ್ತಿತರ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಕೊಳ್ಳುವ ಅವಕಾಶವಿದೆ. ಕೈತೋಟ, ತಾರಸಿ ಕೃಷಿ, ಕಸಿ ಕಟ್ಟುವಿಕೆ ಮತ್ತು ಅಂಗಾಂಶ ಕೃಷಿಗಳ ಪ್ರಾತ್ಯಕ್ಷಿಕೆ ನಡೆಯಲಿದೆ. ಕಲಾವಿದ, ಕೃಷಿ ಪ್ರೇಮಿ ಪುರುಷೋತ್ತಮ ಅಡ್ವೆ ನೇತೃತ್ವದಲ್ಲಿ ಕಾಡುತ್ಪತ್ತಿಗಳ ಪರಿಚಯ ಹಾಗೂ ಮೌಲ್ಯವರ್ಧನೆಯ ಕುರಿತು ವಿವಿಧ ಪ್ರಯೋಗಗಳಿಗೆ ಚಾಲನೆ ದೊರೆಯಲಿದೆ.
ಮಾ. 20ರ ಬೆಳಗ್ಗೆ 10 ಗಂಟೆಗೆ ಜಿ.ಪಂ. ಸಿಇಒ ಡಾ| ನವೀನ್‌ ಭಟ್‌ ವೈ. ಕೃಷಿ ಸಮ್ಮಿಲನವನ್ನು ಉದ್ಘಾಟಿಸಲಿದ್ದಾರೆ. ಹಿರಿಯ ವಿಜ್ಞಾನಿ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ| ಧನಂಜಯ, ಪ್ರಗತಿ ಪರ ಕೃಷಿಕ ನಟರಾಜ್‌ ಹೆಗ್ಡೆ, ರಾಷ್ಟ್ರೀಯ ಸಾಧನಾಶೀಲ ಕೃಷಿಕ ಪ್ರಶಸ್ತಿ ಪುರಸ್ಕೃತ ಕುದಿ ಶ್ರೀನಿವಾಸ ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮಾ. 20ರಂದು ಬೆಳಗ್ಗಿನಿಂದ ಮಂಗಳೂರಿನ ಪಶು ವೈದ್ಯ ಡಾ| ಮನೋಹರ ಉಪಾಧ್ಯ ಅಂಗಳದಾಚೆಯೂ ಆರೋಗ್ಯ, ಪ್ರಗತಿಪರ ಕೃಷಿಕ ಕುದಿ ಶ್ರೀನಿವಾಸ ಭಟ್‌ ಸಮಗ್ರ ಕೃಷಿ ಪದ್ಧತಿಯಿಂದ ಅಧಿಕ ಆದಾಯ, ಶಂಕರಪುರದ ಪ್ರಯೋಗಶೀಲ ಕೃಷಿಕ ಜೋಸೆಫ್ ಲೋಬೋ ತಾರಸಿ ಕೃಷಿಯಲ್ಲಿ ವಿನೂತನ ಪ್ರಯೋಗ, ನಿಟ್ಟೂರು ಹೈಸ್ಕೂಲಿನ ನಿವೃತ್ತ ಮುಖ್ಯೋಪಾಧ್ಯಾಯ ಮುರಳಿ ಕಡೆಕಾರ್‌ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ಕುರಿತು ಮಾತನಾಡಲಿ¨ªಾರೆ. ಮಾರ್ಚ್‌ 21ರಂದು ಬೆಳಗ್ಗಿನಿಂದ ಆಯುರ್ವೇದ ವೈದ್ಯ ಡಾ| ಶ್ರೀಧರ ಬಾಯರಿ ಔಷಧ ಸಸ್ಯಗಳಿಂದ ಆರೋಗ್ಯ ರಕ್ಷಣೆ, ಅಜೆಕಾರಿನ ಪ್ರಗತಿಪರ ಕೃಷಿಕ ನಾರಾಯಣ ನಾಯ್ಕ ನಿಂಬೆ ಕೃಷಿ, ಸವಾಲು ಮತ್ತು ಸಾಧನೆ, ಕಲಾವಿದ ಮತ್ತು ಕೃಷಿ ಪ್ರೇಮಿ ಪುರುಷೋತ್ತಮ ಅಡ್ವೆ ಸಾಂಪ್ರದಾಯಿಕ ಕೃಷಿ ಪದ್ಧತಿಯ ದಾಖಲೀಕರಣ, ಪೇತ್ರಿ ಅನ್ನಪೂರ್ಣ ನರ್ಸರಿಯ ಪ್ರಸಾದ್‌ ಭಟ್‌ ಅಂಗಾಂಶ ಕೃಷಿಯ ಕುರಿತು ಮಾತನಾಡಲಿದ್ದಾರೆ.

ಸುಮಾರು ಸಾವಿರ ಸಾರ್ವಜನಿಕರು, 50 ಕೃಷಿಕರು ಭಾಗವಹಿಸುವ ನಿರೀಕ್ಷೆ ಇದೆ. ಕೋವಿಡ್‌ ನಿಯಮ ಕಡ್ಡಾಯ ವಾಗಿ ಪಾಲಿಸಲಾಗುವುದು ಎಂದು ಪ್ರಾಂಶು ಪಾಲರು ತಿಳಿಸಿದರು. ಐಕ್ಯುಎಸಿ ಸಂಯೋಜಕ ಅರುಣ್‌ ಕುಮಾರ್‌ ಬಿ., ಮಾನವಿಕ ವಿಭಾಗದ ಡಾ|ಲಕ್ಷ್ಮೀ ನಾರಾಯಣ ಕಾರಂತ್‌ ಉಪಸ್ಥಿತರಿದ್ದರು. ಪತ್ರಿಕೋದ್ಯಮ ವಿಭಾಗದ ಮಂಜುನಾಥ ಕಾಮತ್‌ ಸ್ವಾಗತಿಸಿದರು.

ಹಡಿಲು ಗದ್ದೆಯಲ್ಲಿ ಬೇಸಾಯ, ಸಂತೆಯ ಇಂಗಿತ
– ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಕೃಷಿ ಪ್ರೇಮ ಬಿತ್ತುವ ಪ್ರಯತ್ನ. ಕಾಲೇಜಿನ ವತಿಯಿಂದ ಹಡಿಲು ಬಿದ್ದ ಗದ್ದೆಗಳಲ್ಲಿ ವ್ಯವಸಾಯ ಮಾಡುವ ಇಂಗಿತ. ವಿದ್ಯಾರ್ಥಿಗಳಲ್ಲಿ ಪರಿಣಾಮ ಬೀರಿ ಮನೆಗಳಲ್ಲಿ ತರಕಾರಿ ಬೆಳೆದು ಹೆಚ್ಚುವರಿಯಾಗಿ ಉಳಿದರೆ ಮುಂದೆ ಶನಿವಾರದ ಸಂತೆಯನ್ನೂ ಏರ್ಪಡಿಸುವ ಸಾಧ್ಯತೆ.

Advertisement

– ವಿದ್ಯಾರ್ಥಿಗಳಿಂದ ರೂ. 10ಕ್ಕೆ ವಿವಿಧ ತರಕಾರಿ ಬೀಜಗಳ ಮಾರಾಟ.

– ಕಾಟು ಮಾವು, ತಾಳಿಬೊಂಡ, ಪುನರ್ಪುಳಿ ಮೊದಲಾದ ಸ್ಥಳೀಯ ಹಣ್ಣಿನ ಐಸ್‌ ಕ್ಯಾಂಡಿ ಮಾರಾಟದ ಪ್ರಯೋಗ.

– ಸಾಂಪ್ರದಾಯಿಕ ಮತ್ತು ಗ್ರಾಮೀಣ ಸಸ್ಯಾಹಾರಿ ಆಹಾರ ಮಳಿಗೆ

– ಪುರುಷೋತ್ತಮ ಅಡ್ವೆ ನೇತೃತ್ವದಲ್ಲಿ ಕಾಡುತ್ಪತ್ತಿಗಳ ಪರಿಚಯ ಹಾಗೂ ಮೌಲ್ಯವರ್ಧನೆಯ ಕುರಿತು ವಿವಿಧ ಪ್ರಯೋಗಗಳಿಗೆ ಚಾಲನೆ.

– ಅಂಗಾಂಶ ಕೃಷಿಯ ಪ್ರಾತ್ಯಕ್ಷಿಕೆ

Advertisement

Udayavani is now on Telegram. Click here to join our channel and stay updated with the latest news.

Next