ಮಂಗಳೂರು: ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಯೋಜನೆಯಡಿ ತಾಲೂಕು ಮಟ್ಟದಲ್ಲಿ, ಜಿಲ್ಲಾ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ವಿವಿಧ ಬೆಳೆಗಳಲ್ಲಿ ಬೆಳೆ ಸ್ಪರ್ಧೆ ನಡೆಸಿ ಪ್ರತಿ ಬೆಳೆಗೂ ಮೂರು ಬಹುಮಾನ ನೀಡಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರಿನಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗೆ ಭತ್ತ ಬೆಳೆಯನ್ನು ಆಯ್ಕೆ ಮಾಡಲಾಗಿದೆ.
ಅರ್ಹತೆ
ಅರ್ಜಿದಾರ ಕ್ರಿಯಾಶೀಲ ಕೃಷಿಕನಾಗಿರಬೇಕು. ಅರ್ಜಿ ಯೊಂದಿಗೆ ಪಹಣಿ ಪತ್ರಿಕೆ, ಶುಲ್ಕ ಪಾವತಿಸಿದ್ದಕ್ಕೆ ಚಲನ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತ ರಾದಲ್ಲಿ ಜಾತಿ ಪ್ರಮಾಣಪತ್ರ, ರೈತರ ಛಾಯಾಚಿತ್ರ-ಸಾಮಾನ್ಯ ವರ್ಗದ ರೈತರು 100 ರೂ. ಪಾವತಿಸಬೇಕು. ಅರ್ಜಿ ಸಲ್ಲಿಸಲು ಸೆ. 15 ಕೊನೆಯ ದಿನವಾಗಿರುತ್ತದೆ.
ಕೃಷಿ ಪಂಡಿತ ಪ್ರಶಸ್ತಿಗೆ ಭಾಗವಹಿಸುತ್ತಿರುವವರು ಬೆಳೆ ಪದ್ಧತಿ, ಸಮಗ್ರ ಕೃಷಿ ಪದ್ಧತಿ ಬೆಳೆ ಪದ್ಧತಿಗಳು ಮತ್ತು ಬೆಳೆ ವೈವಿಧ್ಯ, ಸಾವಯವ ಕೃಷಿ, ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿ, ನೀರಿನ ಸಮರ್ಥ ಬಳಕೆ ಇನ್ನಿತರ ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಕುರಿತ ವಿಭಾಗಗಳಲ್ಲಿ ಅರ್ಜಿಗಳನ್ನು ಸಂಬಂಧಿತ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರಗಳು/ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.