ಬೈಲಹೊಂಗಲ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಪ್ಪಟ ದೇಶ ಭಕ್ತ. ಸ್ವಾಮಿನಿಷ್ಠೆ, ಸ್ವಾತಂತ್ರ ಪ್ರೇಮಿ ಈ ಗುಣಗಳು ಅವರಲ್ಲಿ ರಕ್ತಗತವಾಗಿದ್ದವು ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಸಮೀಪದ ಹಾರುಗೊಪ್ಪ ಗ್ರಾಮದಲ್ಲಿ ಶನಿವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.
ಕ್ರಾಂತಿವೀರ ರಾಯಣ್ಣ ಯುವಕರಿಗೆ, ಭಾರತಿಯರಿಗೆ, ಕನ್ನಡಿಗರಿಗೆ, ಸ್ಫೂರ್ತಿಯಾಗಿದ್ದು, ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ರಾಯಣ್ಣನ ಜೀವನ ಚರಿತ್ರೆ ಪ್ರತಿಯೊಬ್ಬ ಭಾರತೀಯನಿಗೆ ತಿಳಿಯಬೇಕು. ಜತೆಗೆ ರಾಯಣ್ಣ ಎಲ್ಲರಿಗೂ ಆದರ್ಶವಾಗಬೇಕು ಎಂದರು.
ನಾನು ಅಧಿಕಾರಕ್ಕೆ ಬಂದ ಒಂದೇ ತಾಸಿನಲ್ಲಿ ಎಲ್ಲ ಜಾತಿಯ ಬಡವರಿಗೆ 7 ಕೆಜಿ ಉಚಿತ ಅಕ್ಕಿ,(ಅನ್ನಭಾಗ್ಯ) ಕೃಷಿಭಾಗ್ಯ, ಪಶುಭಾಗ್ಯ, ನಿಗಮ ಮಂಡಳಿಯ ಸಾಲ ಮನ್ನಾ ಮಾಡಿದ್ದೇನೆ. ಬಿಜೆಪಿಯವರು ಜಾತಿ ವ್ಯವಸ್ಥೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಕ್ವೀಟ್ ಇಂಡಿಯಾ ಚಳುವಳಿಯನ್ನು ಕಾಂಗ್ರೆಸ್ ಆರಂಭಿಸಿದಾಗ, ಆರ್‌ಎಸ್‌ಎಸ್‌ನವರು 1925ರಲ್ಲಿ ಬ್ರಿಟಿಷರ ಜತೆ ಕೈ ಜೋಡಿಸಿದ್ದರು. ಆದರೆ ಮೋದಿಯವರು ಮಹಾನ ದೇಶ ಭಕ್ತಿಯ ಪಾಠ ಹೇಳುತ್ತಿರುವುದು ದುರದುಷ್ಟಕರ. 56 ಇಂಚಿನ ಎದೆ ಇದೆ ಎನ್ನುವ ಮೋದಿಯವರ ಎದೆಯೊಳಗೆ ತಾಯಿಯ ಹೃದಯ ಇರಬೇಕು. ಆಗ ಮಾತ್ರ ಜನರ ಕಷ್ಟ, ಸಮಸ್ಯೆ ಪರಿಹರಿಸಲು ಸಾಧ್ಯ ಎಂದರು.
ಧಾರವಾಡ ಮನ್ಸೂರ ರೇವಣ ಸಿದ್ದೇಶ್ವರಮಠದ ಬಸವರಾಜ ದೇವರು ಮಾತನಾಡಿ, ಸಾಮಾನ್ಯ ವಾಲಿಕಾರನಾಗಿದ್ದ ರಾಯಣ್ಣ ಭಾರತ ಸ್ವತಂತ್ರವಾಗಬೇಕು ಎಂಬ ಕನಸು ಕಂಡು, ದೇಶದ ಅಭಿವೃದ್ಧಿಗೆ ಪಣ ತೊಟ್ಟಿದ್ದ ದೇಶ ಭಕ್ತ. ಶಾಸಕ ಮಹಾಂತೇಶ ಕೌಜಲಗಿ ಮಂತ್ರಿಯಾಗುತ್ತಾರೆ. ಮರಳಿ ಬಸವಣ್ಣನವರ ಕಾಲ ಬರಬೇಕಾದರೆ ಸಿದ್ದರಾಮಯ್ಯ ಮತ್ತೂಮ್ಮೆ ಮುಖ್ಯಮಂತ್ರಿಯಾಗಬೇಕು ಎಂದರು.
ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನನ್ನ ಕ್ಷೇತ್ರದಲ್ಲಿ 230 ಕೋಟಿ ರೂ.ಗಳ ಕೆರೆ ತುಂಬಿಸುವ ಯೋಜನೆ, ರಾಯಣ್ಣ ಸೈನಿಕ ಶಾಲೆ, ರಾಯಣ್ಣ ಇತಿಹಾಸ, ರಾಯಣ್ಣ ರಾಕ್ ಗಾರ್ಡನ್ ವಿವಿಧ ಅಭಿವೃದ್ಧಿ ಕಾರ್ಯಗಳಾಗಿವೆ ಎಂದರು.
ಅರಭಾಂವಿ ಸಿದ್ದಸಂಸ್ಥಾನಮಠದ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕಿ ಅಂಜಲಿ ನಿಂಬಾಳ್ಕರ, ಬೆಳಗಾವಿ ಜಿಲ್ಲಾ ಯುವ ಕಾಂಗ್ರೆಸ್ ಯುವ ಘಟಕದ (ಗ್ರಾ)ಅಧ್ಯಕ್ಷ ಕಾರ್ತಿಕ ಪಾಟೀಲ, ಗ್ರಾಪಂ ಅಧ್ಯಕ್ಷೆ ಬಸನಗೌಡ ಪಾಟೀಲ, ನಿವೃತ್ತ ಮುಖ್ಯೋಪಾಧ್ಯಯ ಸಿ.ಬಿ. ಜಕ್ಕನ್ನವರ ಇದ್ದರು. ಡಾ| ಮಹಾಂತೇಶ ಕಳ್ಳಿಬಡ್ಡಿ, ಶಂಕಗೌಡ ಪಾಟೀಲ ಸ್ವಾಗತಿಸಿದರು.