ಕೆ.ಆರ್.ಪೇಟೆ: 29ರಂದು ಪುರಸಭೆಯ 23 ವಾರ್ಡುಗಳಿಗೆ ಚುನಾವಣೆಗೆ ಸ್ಪರ್ಧಿಸಲು 72 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಆದರೆ ರಾಜಕೀಯ ಮುಖಂಡರ ಹಾಗೂ ಹಿತೈಷಿಗಳ ಒತ್ತಡಕ್ಕೆ ಮಣಿದು 10 ಮಂದಿ ತಮ್ಮ ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ 23 ಜೆಡಿಎಸ್, 23 ಕಾಂಗ್ರೆಸ್, 5 ಬಿಜೆಪಿ, 1 ಕೆಪಿಜೆಪಿ, 1 ರೈತ ಸಂಘ ಅಭ್ಯರ್ಥಿಗಳು ಹಾಗೂ 9 ಮಂದಿ ಪಕ್ಷೇತರರು ಸೇರಿ 62 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.
ಸುದ್ದಿಯಲ್ಲಿರುವ 6 ವಾರ್ಡ್: ಪುರಸಭೆಯ 6 ವಾರ್ಡ್‌ಗಳಲ್ಲಿ ಜಿದ್ದಾಜಿದ್ದಿನ ಪೈಪೋಟಿ ಇದೆ. ವಾರ್ಡ್ ಸಂಖ್ಯೆ 1, 6, 8, 17, 19 ಮತ್ತು 21 ಇವುಗಳಲ್ಲಿ ಪ್ರಭಾವಿಗಳು ಸ್ಪರ್ಧೆ ಮಾಡಿರುವು ದರಿಂದ ಎಲ್ಲರ ಗಮನ ಸೆಳೆಯುತ್ತಿವೆ. 1ನೇ ವಾರ್ಡ್‌ನಲ್ಲಿ ಮಾಜಿ ಶಾಸಕ ಪುಟ್ಟಸ್ವಾಮಿ ಗೌಡರ ಪುತ್ರ ಪ್ರವೀಣ್, ಜೆಡಿಎಸ್ ಬಂಡಾಯ ಅಭ್ಯರ್ಥಿಗಳ ಜೊತೆಗೆ ಕಾಂಗ್ರೆಸ್‌ನ ಹಿರಿಯ ಮುಖಂಡ ಬಸವೇಗೌಡ ಕಣದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ.
ಬಂಡಾಯ ಬಾವುಟ: 6ನೇ ವಾರ್ಡ್‌ನಲ್ಲಿ ಹಾಲಿ ಸದಸ್ಯ ದಿನೇಶ್ ಪತ್ನಿ ಶೋಭಾ ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ್ದರೆ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಚಂದ್ರಶೇಖರ್ ಪುತ್ರ ಪುರಸಭಾ ಮಾಜಿ ಅಧ್ಯಕ್ಷ ಕೆ.ಟಿ.ಶಿವಪ್ಪನವರ ನಾದಿನಿ ಜಯಂತಿನಟರಾಜ್ ಸ್ಪರ್ಧಿಸಿದ್ದಾರೆ. ಇಲ್ಲಿ ಮಾಜಿ ಶಾಸಕರು ಮತ್ತು ಹಾಲಿ ಶಾಸಕರ ಪ್ರತಿಷ್ಠೆ ನಿಂತಿದೆ. 8ನೇ ವಾರ್ಡ್‌ನಲ್ಲಿ ಹ್ಯಾಟ್ರಿಕ್ ಗೆಲುವು ಕಂಡಿದ್ದ ಕೆ.ಸಿ.ಮಂಜುನಾಥ್ ಕಾಂಗ್ರೆಸ್‌ನಿಂದ, ಹಾಲಿ ಸದಸ್ಯ ಕೆ.ವಿನೋದ್‌ಕುಮಾರ್ ಜೆಡಿಎಸ್‌ನಿಂದ, 8ನೇ ವಾರ್ಡ್‌ನ ಮಗನಂತೆ ಇರುವ ಮೈಲಾರಿ ರವಿ ಬಿಜೆಪಿಯಿಂದ ಹಾಗೂ ಕಂಠಿಕುಮಾರ್ ಬಂಡಾಯ ಜೆಡಿಎಸ್ ಅಭ್ಯರ್ಥಿಯಾಗಿದ್ದಾರೆ. 17ನೇ ವಾರ್ಡ್‌ನಲ್ಲಿ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಕೆ.ಆರ್.ಹೇಮಂತ್‌ಕುಮಾರ್ ಬಂಡಾಯವಾಗಿ ಕಣದಲಿದ್ದಾರೆ.
ಸ್ವಾಭಿಮಾನ, ಪ್ರತಿಷ್ಠೆ: ಇನ್ನು ಮಾಜಿ ಶಾಸಕ ಚಂದ್ರಶೇಖರ್ ಸೋದರಳಿಯ ಮಾಜಿ ಪುರಸಭಾ ಅಧ್ಯಕ್ಷ ಕೆ.ಟಿ.ಚಕ್ರಪಾಣಿ, ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಿಂದಲೇ ಅನುಮೋದನೆ ಪಡೆದು ಟಿಕೆಟ್ ಪಡೆದುಕೊಂಡಿದ್ದಾರೆ ಎಂದು ಹೇಳಿರುವ ಹಾಲಿ ಸದಸ್ಯ ಕೆ.ಎಸ್.ಸಂತೋಷ್‌ಕುಮಾರ್ ಕಣದಲ್ಲಿದ್ದಾರೆ. ಇಲ್ಲಿ ಬಂಡಾಯಗಾರಿಗೆ ಸ್ವಾಭಿಮಾನ, ಕಾಂಗ್ರೆಸ್‌ಗೆ ಕ್ಷೇತ್ರ ಉಳಿಸಿಕೊಳ್ಳುವುದು ಮತ್ತು ಜೆಡಿಎಸ್‌ಗೆ ಪ್ರತಿಷ್ಠೆ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. 19ನೇ ವಾರ್ಡ್‌ನಲ್ಲಿ ಮಾಜಿ ಶಾಸಕರ ಸಹೋದರ ಹಾಗೂ ಮಾಜಿ ಪುರಸಭಾಧ್ಯಕ್ಷ ಕಣಕ್ಕಿಳಿಸಿರುವುದರಿಂದ ಹಾಗೂ ಅವರನ್ನು ಸೋಲಿಸಲೇಬೇಕು ಎಂದು ಮಾಜಿ ಪುರಸಭಾ ಅಧ್ಯಕ್ಷ ಎಚ್.ಕೆ.ಅಶೋಕ್ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷಕ್ಕೆ ಸೇರಿರುವುದು ಪುರಸಭೆಯ ಚುನಾವಣಾ ಹೋರಾಟದ ಕಿಚ್ಚನ್ನು ಹೆಚ್ಚಿಸಿದೆ.
ಅಬ್ಬರದ ಪ್ರಚಾರ: 21ನೇ ವಾರ್ಡ್‌ನಲ್ಲಿ ಶಾಸಕರ ಆಪ್ತ ಎಚ್.ಆರ್.ಲೋಕೇಶ್ ಮತ್ತು ಸರಳ ಸಜ್ಜನ ರಾಜಕಾರಣಿ ಮಾಜಿ ತಾಪಂ ಸದಸ್ಯ ಎಚ್.ವಿಶ್ವನಾಥ್ ಕಣದಲ್ಲಿದ್ದಾರೆ. ಪಟ್ಟಣದಲ್ಲಿರುವ ಈ ಆರೂ ವಾರ್ಡ್‌ಗಳಲ್ಲಿಯೂ ಅಭ್ಯರ್ಥಿಗಳಿಗಿಂತ ರಾಜಕೀಯ ಮುಖಂಡರು, ಶಾಸಕರು ಮತ್ತು ಮಾಜಿ ಶಾಸಕರು ಪ್ರತಿಷ್ಠ ಮುಖ್ಯವಾಗಿದೆ. ಎಲ್ಲರ ಕಣ್ಣು 6 ಕ್ಷೇತ್ರಗಳ ಮೇಲಿದ್ದು, ಈ ವಾರ್ಡ್‌ಗಳಲ್ಲಿ ಅಬ್ಬರದ ಪ್ರಚಾರದ ನಡುವೆ ಹಣವೂ ಹರಿದಾಡುತ್ತಿದೆ.
ಬಂಡಾಯ ಶಮನ: ಕಾಂಗ್ರೆಸ್ ಪಕ್ಷದಿಂದ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಹೋದರ ಕೆ.ಬಿ.ಪ್ರಕಾಶ್ ಪತ್ನಿ ಪಂಕಜಾ ಪ್ರಕಾಶ್ ಅವರಿಗೆ 4ನೇ ವಾರ್ಡಿನ ಕಾಂಗ್ರೆಸ್ ಟಿಕೆಟ್ ನೀಡಿದ್ದನ್ನು ವಿರೋಧಿಸಿ, ಕೆ.ಬಿ.ಚಂದ್ರಶೇಖರ್‌ರ ಮತ್ತೋರ್ವ ಸಹೋದರ ಕೆ.ಬಿ.ವಿವೇಕ್ ಪತ್ನಿ ಯಮುನಾವಿವೇಕ್ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಕಾಂಗ್ರೆಸ್ ನಾಯಕ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಸಂಧಾನದ ಮೂಲಕ ಬಂಡಾಯ ಶಮನಗೊಳಿಸಿದ್ದಾರೆ.
ಕಣದಿಂದಲೇ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ: 19ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಪ್ರಶಾಂತ್‌ಕುಮಾರ್ ತಮ್ಮ ನಾಮಪತ್ರ ವಾಪಸ್ ಪಡೆದು ಅಚ್ಚರಿ ಮೂಡಿಸಿದ್ದಾರೆ.
● ಎಚ್.ಬಿ.ಮಂಜುನಾಥ್