ಕೆ.ಆರ್.ಪೇಟೆ: ತಾಲೂಕಿನ ಹೊಸಹೊಳಲು ಮೇಲ್ಗಾಲುವೆ ನಿರ್ಮಾಣ ಕಾಮಗಾರಿ ನಡೆಸುತ್ತಿರುವ ಹೇಮಾವತಿ ನೀರಾವರಿ ಅಧಿಕಾರಿಗಳು ಭೂಮಿ ಕಳೆದುಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡದೇ ಏಕಾಏಕಿ ರೈತರ ಜಮೀನಿನಲ್ಲಿ ಬೆಳೆದಿರುವ ತೆಂಗು, ಅಡಿಕೆ ಮತ್ತಿತರರ ಗಿಡಮರ ಕಡಿದು ಕಾಮಗಾರಿ ನಡೆಸುತ್ತಿದ್ದು, ಕೂಡಲೇ ರೈತರಿಗೆ ಹಣ ಬಿಡುಗಡೆ ಮಾಡಬೇಕು ಎಂದು ವಕೀಲ ಹಾಗೂ ವಡ್ಡರಹಳ್ಳಿ ಧನಂಜಯ ಒತ್ತಾಯಿಸಿದರು.
ಹೊಸಹೊಳಲು ಮೇಲ್ಗಾಲುವೆ ವ್ಯಾಪ್ತಿಯಲ್ಲಿ ನಾಲೆ ನಿರ್ಮಾಣ ಮಾಡುತ್ತಿರುವುದರಿಂದ ನಷ್ಟ ಅನುಭವಿಸುತ್ತಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಹೇಮಾವತಿ ನೀರಾವರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಮಾತನಾಡಿದರು.
ರೈತರು ಕಳೆದ 20 ವರ್ಷಗಳ ಹಿಂದೆ ಆರಂಭವಾಗಿರುವ ಸಹೊಳಲು ಮೇಲ್ಗಾಲುವೆ ಕಾಮಗಾರಿ ಇದೂವರೆಗೂ ಪೂರ್ಣಗೊಳಿಸಿಲ್ಲ. ಜೊತೆಗೆ 20 ವರ್ಷಗಳಿಂದಲೂ ಕಾಲುವೆಯಿಂದ ಭೂಮಿ ಕಳೆದುಕೊಂಡಿರವ ರೈತರಿಗೆ ಸೂಕ್ತ ಪರಿಹಾರ ನೀಡಿರುವುದಿಲ್ಲ ಎಂದು ಹೇಳಿದರು.
ಅಲ್ಲದೆ, ಈಗ ಏಕಾಏಕಿ ಪರಿಹಾರ ನೀಡದೇ ಇದ್ದರೂ ರೈತರ ಅನುಮತಿ ಇಲ್ಲದೆ, ರೈತರು ಬೆಳೆದ ಮರಗಿಡಗಳನ್ನು ಕಡಿದು ಕಾಮಗಾರಿ ಮಾಡುತ್ತಿರುವುದು ಅಧಿಕಾರಿಗಳ ದಬ್ಟಾಳಿಕೆ ಎತ್ತಿ ತೋರಿಸುತ್ತದೆ ಎಂದು ಆರೋಪಿಸಿದ ಧನಂಜಯ, ಹೇಮಾವತಿ ನೀರಾವರಿ ಅಧಿಕಾರಿಗಳು ಕೂಡಲೇ ರೈತರಿಗೆ ಸೂಕ್ತ ಪರಿಹಾರ ನೀಡಿದ ಬಳಿಕ ಕಾಮಗಾರಿ ಕೈಗೆತ್ತಿಕೊಳ್ಳಬೇಕು ಎಂದು ಆಗ್ರಹಿಸಿದರು.
ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸುವೆ: ಚೌಡೇನಹಳ್ಳಿಯಿಂದ ಮುದುಗೆರೆವರೆಗೆ 300 ಮಂದಿ ರೈತರಿಗೆ ಸೇರಿದ ಭೂಮಿ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಅವರಲ್ಲಿ 200 ಮಂದಿಗೆ ಅತ್ಯಂತ ಕಡಿಮೆ ಪರಿಹಾರ ನೀಡಲಾಗಿದೆ. ಉಳಿದ 100 ರೈತರಿಗೆ ಯಾವುದೇ ಪರಿಹಾರ ನೀಡಿಲ್ಲ. ಈ ಸಂಬಂಧ ಐದು ತಿಂಗಳ ಹಿಂದೆ ವೈಜ್ಞಾನಿಕ ಪರಿಹಾರ ನೀಡುವಂತೆ ರಾಜ್ಯ ಹೈಕೋರ್ಟ್ ಮೂರು ತಿಂಗಳ ಒಳಗೆ ಪರಿಹಾರ ನೀಡುವಂತೆ ಆದೇಶ ಹೊರಡಿಸಿತ್ತು. ಕೋರ್ಟ್ ಆದೇಶ ಪಾಲಿಸದ ಜಿಲ್ಲಾಧಿಕಾರಿಗಳು, ಭೂಸ್ವಾಧೀನಾಧಿಕಾರಿ ಹಾಗೂ ಸಂಬಂಧಪಟ್ಟ ವಿಭಾಗದ ಎಂಜಿನಿಯರ್ ಅವರಿಗೆ ಹೈಕೋರ್ಟ್ 2 ಬಾರಿ ನೋಟಿಸ್ ಜಾರಿ ಮಾಡಿದರೂ ನ್ಯಾಯಾಲಯದ ಆದೇಶ ಪಾಲನೆ ಮಾಡದೆ ಕಾಮಗಾರಿ ನಡೆಸುತ್ತಿರುವುದು ಸರಿಯಲ್ಲ. ಈಗ ಹೈಕೋರ್ಟ್ ಆದೇಶ ಉಲ್ಲಂಘನೆ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುವುದಾಗಿ ಧನಂ ಜಯ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯ ತಿಮ್ಮೇಗೌಡ, ರೈತರಾದ ತಮ್ಮಣ್ಣಗೌಡ, ಸ್ವಾಮಿ, ರಾಜದಾಸಯ್ಯ, ಆಶಾ, ಸೌಮ್ಯ, ಜಯಮ್ಮ, ಮಂಜೇಗೌಡ, ಜವರದಾಸಯ್ಯ, ಶಿವಯ್ಯ, ಸಂಜೀವ, ವೆಂಕಟೇಶ್ ಮತ್ತಿತರರು ಭಾಗವಹಿಸಿದ್ದರು.