Advertisement

ಕೆ.ಆರ್‌.ನಗರ: ಎಲ್ಲೆಲ್ಲೂ ಮತ ಲೆಕ್ಕಾಚಾರ

05:53 PM Apr 22, 2019 | Team Udayavani |

ಕೆ.ಆರ್‌.ನಗರ: ಬೇಸಿಗೆಯ ಬಿರು ಬಿಸಿಲಿಗಿಂತ ಹೆಚ್ಚು ಕಾವು ಪಡೆದುಕೊಂಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಮತದಾನದ ನಂತರ ಸೋಲು ಗೆಲುವಿನ ಲೆಕ್ಕಾಚಾರ ಮತ್ತು ಬಾಜಿ ರಾಜಕೀಯ ಬಿರುಸಿನಿಂದ ನಡೆಯುತ್ತಿದೆ.

Advertisement

ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮೈತ್ರಿ ಕೂಟದ ಅಭ್ಯರ್ಥಿ ನಿಖೀಲ್ಕುಮಾರಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿರುವ ಕ್ಷೇತದಲ್ಲಿ ಯಾರು ಗೆಲ್ಲುತ್ತಾರೆ?, ಕೆ.ಆರ್‌.ನಗರದಲ್ಲಿ ಎಷ್ಟು ಮತಗಳ ಮುನ್ನಡೆ ಪಡೆಯುತ್ತಾರೆ ಎಂಬ ಚರ್ಚೆಗಳು ನಡೆಯುತ್ತಿವೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿವೃದ್ಧಿ ಕಾರ್ಯಗಳು ಮತ್ತು ಕ್ಷೇತ್ರದ ಶಾಸಕರೂ ಆಗಿರುವ ರೇಷ್ಮೆ ಮತ್ತು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಜನಪರ ಕೆಲಸಗಳು ಜೆಡಿಎಸ್‌ಗೆ ಆಸರೆಯಾಗಿದ್ದರೆ, ಪಕ್ಷೇತರ ಅಭ್ಯರ್ಥಿ ಸುಮಲತಾ ಕಾಂಗ್ರೆಸ್‌ ಮತಗಳು, ಅಂಬರೀಶ್‌, ದರ್ಶನ್‌, ಯಶ್‌ ಅಭಿಮಾನಿಗಳು ಹಾಗೂ ಮಹಿಳಾ ಮತದಾರರನ್ನು ನೆಚ್ಚಿಕೊಂಡಿದ್ದಾರೆ.

ಕಾಂಚಾಣ ಸದ್ದು: ಚುನಾವಣೆ ಘೋಷಣೆಯಾದ ಆರಂಭದಲ್ಲಿ ಸ್ವಲ್ಪ ಹಿಂದಿದ್ದ ಜೆಡಿಎಸ್‌ ಪಕ್ಷ ಮತದಾನಕ್ಕೆ ಎರಡು ದಿನ ಬಾಕಿ ಇರುವಂತೆ ಕಾಂಚಾಣದ ಸದ್ದು ಮಾಡಿದ್ದರಿಂದ ಮೋಲ್ನೋಟಕ್ಕೆ ಸುಮಲತಾ ಅವರಿಗಿಂತ ಹೆಚ್ಚು ಮತಗಳನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುವ ಸಾಧ್ಯತೆ ಕಾಣುತ್ತಿದೆ.

ನಿಖೀಲ್ಕುಮಾರಸ್ವಾಮಿಗೆ ಕ್ಷೇತ್ರದಲ್ಲಿ ಹೆಚ್ಚು ಮತ ಕೊಡಿಸಬೇಕು ಎಂದು ಸಚಿವ ಸಾ.ರಾ.ಮಹೇಶ್‌ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡು ಕೆಲಸ ಮಾಡಿರುವುದು ಅವರಿಗೆ ವರದಾನವಾಗಲಿದ್ದು, ಇದರ ಜತೆಗೆ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚು ಶ್ರಮ ವಹಿಸಿರುವುದು ಗಮನಾರ್ಹ.

Advertisement

ಸುಮಲತಾ ಪರವಾಗಿ ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ ಮತ್ತು ಅವರ ಬೆಂಬಲಿಗರ ಪಡೆ ಹಗಲಿರುಳು ದುಡಿದಿದ್ದು, ಜೆಡಿಎಸ್‌ ಪಕ್ಷಕ್ಕಿಂತ ಹೆಚ್ಚು ಮತ ಪಡೆಯುವ ಉಮೇದಿಯಲ್ಲಿದ್ದಾರೆ. ಇದರ ಜತೆಗೆ ಅವರಿಗೆ ಮಹಿಳೆಯರ ಮತಗಳು ಹೆಚ್ಚಾಗಿ ಬಂದಿವೆ ಎಂಬ ನಿರೀಕ್ಷೆ ಇದೆ.

ಬೆಟ್ಟಿಂಗ್‌ ಭರಾಟೆ: ನಿಖೀಲ್ಕುಮಾರಸ್ವಾಮಿ ಮತ್ತು ಸುಮಲತಾ ಅಂಬರೀಶ್‌ ನಡುವೆ ಯಾರು ಗೆಲ್ಲುತ್ತಾರೆ ಮತ್ತು ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಲೀಡ್‌ ಪಡೆಯವವರಾರು ಎಂದು ಅಲ್ಲಲ್ಲಿ ಚರ್ಚೆ ನಡೆಯುತ್ತಿರುವುದರೊಟ್ಟಿಗೆ ಸಣ್ಣ ಪುಟ್ಟದಾಗಿ ಬಾಜಿ ನಡೆಯುತ್ತಿದ್ದು ಮೇ 23ರೊಳಗೆ ಮತ್ತಷ್ಟು ಬಾಜಿ ಹೆಚ್ಚಾಗಿ ನಡೆಯುವ ಸಾಧ್ಯತೆ ಇದೆ.

ಫ‌ಲಿತಾಂಶದ್ದೇ ಚರ್ಚೆ: ತಾಲೂಕಾದ್ಯಂತ ಈಗ ಟೀ ಅಂಗಡಿ, ಹೋಟೆಲ್, ಸಾರ್ವಜನಿಕ ಸ್ಥಳಗಳು ಮತ್ತು ಹಳ್ಳಿಗಳ ಅರಳಿ ಕಟ್ಟೆಗಳ ಮೇಲೆ ಮಂಡ್ಯ ಲೋಕಸಭಾ ಕ್ಷೇತ್ರದ ಸಂಭವನೀಯ ಫ‌ಲಿತಾಂಶದ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ.

ಮತದಾನದ ವಿವರ: ಕೆ.ಆರ್‌.ನಗರ ವಿಧಾನ ಸಭಾ ಕ್ಷೇತ್ರದಲ್ಲಿ ಒಟ್ಟು 2,06,222 ಮಂದಿ ಮತದಾರರಿದ್ದು, ಈ ಪೈಕಿ 1,63,547 ಮಂದಿ ಮತ ಚಲಾಯಿಸಿದ್ದು, ಶೇ.79.31ರಷ್ಟು ಮತದಾನವಾಗಿದೆ.

ಅದರಲ್ಲಿ 82,716 ಪುರುಷರು, 80,829 ಮಹಿಳಾ ಮತದಾರರು. ಇದು ಕಳೆದ ಲೋಕಸಭಾ ಚುನಾವಣೆಗಿಂತ ಶೇ.6ರಷ್ಟು ಹೆಚ್ಚು ಮತದಾನದ ದಾಖಲೆ ಮಾಡಿದೆ.
ಜಿ.ಕೆ.ನಾಗಣ್ಣ

Advertisement

Udayavani is now on Telegram. Click here to join our channel and stay updated with the latest news.

Next