ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದಿಂದ ರಾಜ್ಯದ ವಿವಿಧ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳು, ಬೆಂಗಳೂರು ನಗರದ ಸಿವಿಲ್ ನ್ಯಾಯಾಲಯ, ಲಘು ವ್ಯವಹಾರಗಳ ನ್ಯಾಯಾಲಯಗಳಲ್ಲಿನ ಎಫ್ಡಿಎ ಮತ್ತು ಎಸ್‌ಡಿಎ ಹುದ್ದೆಗಳ ನೇಮಕಾತಿಗೆ ಆನ್‌ಲೈನ್ ಅರ್ಜಿ ಸಲ್ಲಿಸುವವರ ಗೋಳು ಮುಗಿಯುತ್ತಿಲ್ಲ.
ಅರ್ಜಿ ಸಲ್ಲಿಕೆಯ ಕೊನೇ ದಿನಾಂಕ ಈಗಾಗಲೇ ಒಂದು ಬಾರಿ ವಿಸ್ತರಣೆಯಾಗಿದೆ. ಆದರೂ ಕಳೆದ ನಾಲ್ಕೈದು ದಿನಗಳಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆಕಾಂಕ್ಷಿಗಳು ಪರದಾಡುತ್ತಿದ್ದಾರೆ. ಅರ್ಜಿ ಸಲ್ಲಿಸಲು ಆಯೋಗದ ವೆಬ್‌ಸೈಟ್ ಪ್ರವೇಶಿಸಿದರೆ “ಸರ್ವರ್ ಡೌನ್ ಎಂಬ ಸಿದಟಛಿ ಉತ್ತರ ಸಿಗುತ್ತದೆ. ಕಂಪ್ಯೂಟರ್ ಮುಂದೆ ಗಂಟೆಗಟ್ಟಲೆ ಕಾದು ಕುಳಿತರೂ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಅಭ್ಯರ್ಥಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಗಳು, ಬೆಂಗಳೂರು ನಗರದ ಸಿವಿಲ್ ನ್ಯಾಯಾಲಯ ಹಾಗೂ ಲಘು ವ್ಯವಹಾರಗಳ ನ್ಯಾಯಾಲಯಗಳಲ್ಲಿನ 844 ಪ್ರಥಮ ದರ್ಜೆ ಸಹಾಯಕ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಅರ್ಜಿ ಆಹ್ವಾನಿಸಿ 2019ರ ಫೆ.11ರಂದು ಅಧಿಸೂಚನೆ ಹೊರಡಿಸಲಾಗಿತ್ತು.
ಅರ್ಜಿ ಸಲ್ಲಿಸಲು 2019ರ ಮಾ.12 ಕೊನೆ ದಿನಾಂಕ ಆಗಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಿಧಾನ ಆಗಿದ್ದರಿಂದ ಕೊನೆ ದಿನಾಂಕವನ್ನು ಮಾ.20ರವರೆಗೆ ವಿಸ್ತರಿಸಲಾಯಿತು. ಆದರೂ, ಗೋಳು ಇನ್ನೂ ಮುಗಿದಿಲ್ಲ.
ದಿನಾಂಕ ಮತ್ತೇ ವಿಸ್ತರಣೆ?: ತಾಂತ್ರಿಕ ಸಮಸ್ಯೆ ಸರಿಪಡಿಸಿಕೊಂಡು ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಆಗುತ್ತಿರುವ ತೊಂದರೆ ನಿವಾರಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಿ, ಅರ್ಜಿ ಸಲ್ಲಿಕೆಯ ದಿನಾಂಕವನ್ನು ಮಾ.20ರವರೆಗೆ ವಿಸ್ತರಿಸಲಾಗಿತ್ತು. ಆದರೆ, ಈಗಲೂ ಸಮಸ್ಯೆ ಮುಂದುವರಿದಿದ್ದರೆ, ಪರಿಶೀಲಿಸಿ ಸಂಬಂಧ ಪಟ್ಟವರಿಗೆ ತಾಕೀತು ಮಾಡಲಾಗುವುದು. ಪ್ರತಿಯೊಬ್ಬರಿಗೂ ಅರ್ಜಿ ಸಲ್ಲಿಸಲು ಅವಕಾಶ ನೀಡಲೇಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ತಾಂತ್ರಿಕ ಸಮಸ್ಯೆ ಹಾಗೆಯೇ ಇದ್ದರೆ ಅರ್ಜಿ ಸಲ್ಲಿಕೆಯ ದಿನಾಂಕ
ವಿಸ್ತರಣೆಯ ಬಗ್ಗೆ ಪರಿಶೀಲಿಸಲಾಗುವುದು ಎಂದು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ಆರ್.ಆರ್. ಜನ್ನು
“ಉದಯವಾಣಿ’ಗೆ ತಿಳಿಸಿದ್ದಾರೆ.