ಬೆಂಗಳೂರು: ಕೂಸು ಹುಟ್ಟುವ ಮುನ್ನವೇ ಕುಲಾವಿ ಎಂಬಂತೆ ಕೆಪಿಎಸ್‌ಸಿನಲ್ಲಿ ಇನ್ನಷ್ಟೇ ಆರಂಭವಾಗಬೇಕಿರುವ ನೇಮಕಾತಿಯಲ್ಲಿ ಅಕ್ರಮಕ್ಕೆ ಈಗಾಗಲೇ ವೇದಿಕೆ ಸಿದ್ಧವಾಗಿದೆ..!
ಹೌದು, ಅಕ್ರಮಗಳನ್ನೇ ಹೊದ್ದುಕೊಂಡಿರುವ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (ಕೆಪಿಎಸ್‌ಸಿ) ಇದೀಗ ಮತ್ತೆ ಅದೇ ವಾಸನೆ ಬಡಿಯಲಾರಂಭಿಸಿದ್ದು, ಮುಂದಿನ ಫೆಬ್ರವರಿಯಲ್ಲಿ ನಡೆಯಲಿರುವ 832 ಎಫ್ಡಿಎ ಹಾಗೂ ಎಸ್‌ಡಿಎ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಪ್ರಮಾಣದಲ್ಲಿ ಅಕ್ರಮ ಎಸಗಲು ಜಾಲವೊಂದು ರಾಜ್ಯದಲ್ಲಿ ಸಕ್ರಿಯವಾಗಿದೆ.
ಎಫ್ಡಿಎ ಮತ್ತು ಎಸ್‌ಡಿಎ ಹುದ್ದೆಗಳ ನೇಮಕಾತಿಗೆ ಫೆಬ್ರವರಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದ್ದು, ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ಹಿಡಿದು ನೇಮಕಾತಿಯ ಆದೇಶ ಪ್ರತಿ ಕೈಗೆ ನೀಡುವರೆಗಿನ ಪ್ರತಿ ಹಂತಕ್ಕೆ ಬೇರೆ-ಬೇರೆ “ದರ’ಗಳನ್ನು ನಿಗದಿಪಡಿಸಿಕೊಂಡಿರುವ ಈ ಜಾಲ, ಉದ್ಯೋಗಕಾಂಕ್ಷಿಗಳಿಂದ ಲಕ್ಷಗಳ ಲೆಕ್ಕದಲ್ಲಿ ಮುಂಗಡ ಪಡೆದುಕೊಳ್ಳಲು ಬಲೆ ಬೀಸಿ ಕುಳಿತಿರುವ ಮಾಹಿತಿ “ಉದಯವಾಣಿ’ಗೆ ಲಭ್ಯವಾಗಿದೆ.
ನೇಮಕಾತಿ ಅಕ್ರಮ, ಭ್ರಷ್ಟಾಚಾರದ ಪ್ರಕರಣಗಳಿಂದಾಗಿ ಕಳೆದ ಹಲವು ವರ್ಷಗಳಿಂದ ವಿವಾದದ ಸುತ್ತಲೇ ಕೆಪಿಎಸ್‌ಸಿ ಸುತ್ತಾಡುವಂತಾಗಿದೆ. ಅದರ ಸುಧಾರಣೆಗೆ ಏನೇ ಕ್ರಮ, ಯಾವುದೇ ವರದಿಗಳನ್ನು ಜಾರಿಗೆ ತಂದರೂ, ಅಲ್ಲಿನ ಪರಿಸ್ಥಿತಿ ಮಾತ್ರ ಬದಲಾಗುವ ಲಕ್ಷಣಗಳು ಕಾಣುತ್ತಿಲ್ಲ. 1998, 99, 2004 ಹಾಗೂ 2011ರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿಯಲ್ಲಿ ನಡೆದ ಅಕ್ರಮ, 2015ರಲ್ಲಿ ನಡೆದ ಎಫ್ಡಿಎ, ಎಸ್‌ಡಿಎ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಆದ ಗೊಂದಲಗಳ ಕಾರಣಕ್ಕೆ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದ್ದ ಕೆಪಿಎಸ್‌ಸಿಯಲ್ಲಿ ಇದೀಗ ಮತ್ತೂಂದು ಅಕ್ರಮದ ಮುನ್ಸೂಚನೆ ಸಿಗಲಾರಂಭಿಸಿದೆ.
ಎಫ್ಡಿಎ, ಎಸ್‌ಡಿಎ ಹುದ್ದೆಗಳ ನೇಮಕಾತಿಗೆ ಇನ್ನೂ ಲಿಖೀತ ಸ್ಪರ್ಧಾತ್ಮಕ ಪರೀಕ್ಷೆಯೇ ನಡೆದಿಲ್ಲ. ಅದಾಗಲೇ ಸಕ್ರಿಯಗೊಂಡಿರುವ ವಂಚಕರ ಜಾಲ, ವಿವಿಧ ಆಮಿಷಗಳನ್ನು ಒಡ್ಡಿ ಅಮಾಯಕ ಉದ್ಯೋಗಕಾಂಕ್ಷಿಗಳನ್ನು ತನ್ನ ಬಲೆಗೆ ಹಾಕಿಕೊಳ್ಳಲಾರಂಭಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಿಂತ ಮುಂಚೆ ಇಂತಿಷ್ಟು ಕೊಡಿ, ಉತ್ತರಗಳನ್ನು ಮೊದಲೇ ನಿಮಗೆ ತಲುಪಿಸುತ್ತೇವೆ. ವ್ಯಕ್ತಿತ್ವ ಪರೀಕ್ಷೆ ಹಾಗೂ ಮೌಖೀಕ ಸಂದರ್ಶನ ಹಂತದಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರನ್ನು ನೇರವಾಗಿ ಭೇಟಿ ಮಾಡಿಸಿ ವ್ಯವಹಾರ ಕುದುರಿಸುತ್ತೇವೆ. ಎಲ್ಲ ಮುಗಿದು ನೇಮಕಾತಿ ಆದೇಶ ನಿಮ್ಮ ಕೈಗೆ ಸಿಕ್ಕ ಮೇಲೆ ಬಾಕಿ “ಪೇಮೆಂಟ್’ ಕೊಡಿ ಅನ್ನುವ “ಆಫರ್’ಗಳನ್ನು ಮಧ್ಯವರ್ತಿಗಳು ಮುಂದಿಡುತ್ತಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬರುತ್ತಿವೆ. ಈಗಾಗಲೇ ಈ ಜಾಲ ಕೆಲವು ಉದ್ಯೋಗಾಂಕ್ಷಿಗಳನ್ನು ಸಂಪರ್ಕಿಸಿದೆ.
ರಾಜ್ಯ ಸಿವಿಲ್ ಸೇವೆಯಡಿ ಪ್ರಥಮ ದರ್ಜೆ ಸಹಾಯಕರು (ಎಫ್ಡಿಎ) ಹಾಗೂ ಆಹಾರ ನಿಗಮದಲ್ಲಿನ ಹಿರಿಯ ಸಹಾಯಕರ 442 ಹುದ್ದೆಗಳು, ಅದೇ ರೀತಿ ದ್ವಿತೀಯ ದರ್ಜೆ ಸಹಾಯಕರು (ಎಸ್‌ಡಿಎ) ಹಾಗೂ ಕಿರಿಯ ಸಹಾಯಕರ 381 ಸೇರಿ ಒಟ್ಟು 832 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ 2016ರ ಡಿ. 6ರಂದು ಅಧಿಸೂಚನೆ ಹೊರಡಿಸಿದೆ. ಅರ್ಜಿ ಸಲ್ಲಿಸಲು 2017ರ ಜ. 4 ಕೊನೆ ದಿನ ಇತ್ತು. ಎಫ್ಡಿಎ/ಹಿರಿಯ ಸಹಾಯಕರ ಹುದ್ದೆಗಳಿಗೆ ಫೆ. 5 ಮತ್ತು ಎಸ್‌ಡಿಎ/ಕಿರಿಯ ಸಹಾಯಕರ ಹುದ್ದೆಗಳಿಗೆ ಫೆ. 12ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಆದರೆ, ಈ ನೇಮಕಾತಿ ಪ್ರಕ್ರಿಯೆಯನ್ನು ಅಕ್ರಮಗೊಳಿಸುವ ಪ್ರಯತ್ನದಲ್ಲಿ ಈಗಾಗಲೇ ಜಾಲವೊಂದು “ಕಾರ್ಯಕ್ಷೇತ್ರ’ಕ್ಕೆ ಇಳಿದಿದೆ.
ಯಾವುದಕ್ಕೆ ಎಷ್ಟೆಷ್ಟು: ಎಫ್ಡಿಎಗೆ 20ರಿಂದ 25 ಲಕ್ಷ ರೂ. ಹಾಗೂ ಎಸ್‌ಡಿಎಗೆ 10ರಿಂದ 15 ಲಕ್ಷ ರೂ. ಪ್ಯಾಕೇಜ್ ನಿಗದಿಪಡಿಸಲಾಗಿದೆ. ಇದರಲ್ಲಿ ಎಫ್ಡಿಎ ಆಕಾಂಕ್ಷಿಗಳು ಪರೀಕ್ಷೆಗಿಂತ ಮುಂಚೆ 7 ಲಕ್ಷ ರೂ. ಕೊಡಬೇಕು. ಅದೇ ರೀತಿ ಎಸ್‌ಡಿಎ ಅಕಾಂಕ್ಷಿಗಳು 5 ಲಕ್ಷ ಕೊಡಬೇಕು. ಹಣ ನೀಡಿದ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಉತ್ತರಗಳನ್ನು ಮುಂಚಿತವಾಗಿ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ಜಾಲ ಭರವಸೆ ಕೊಟ್ಟಿದೆ. ಎಫ್ಡಿಎ ಮತ್ತು ಎಫ್ಡಿಎ ಆಕಾಂಕ್ಷಿಗಳ ಮುಂದಿನ ಕೆಲಸ ಖಾತರಿಗೊಳಿಸಲು ನೇರವಾಗಿ ಕೆಪಿಎಸ್‌ಸಿ ಸದಸ್ಯರನ್ನು ಭೇಟಿ ಮಾಡಿದ ಅವರ ಬಳಿಯೇ ವ್ಯವಹಾರ ಕುದುರಿಸುವ ಭರವಸೆ ನೀಡುತ್ತಿರುವ ಮಧ್ಯವರ್ತಿಗಳು, ಕೆಲಸ ಪೂರ್ಣ ಆದ ಮೇಲೆ ಉಳಿದ ಹಣ ನೀಡಬಹುದು ಎಂದು ಉದ್ಯೋಗಕಾಂಕ್ಷಿಗಳಿಗೆ ಹೇಳುತ್ತಿರುವುದಾಗಿ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.
– ರಫೀಕ್ ಅಹ್ಮದ್