Advertisement
ಈ ನಿರ್ಧಾರವನ್ನು ಹಿಂಪಡೆದು, ಯುಪಿಎಸ್‍ಸಿಯ ಮಾದರಿಯಲ್ಲಿ ಲಿಖಿತ ಪರೀಕ್ಷೆಯ ಒಟ್ಟು ಅಂಕಗಳ ಶೇ.12.5 ರಷ್ಟನ್ನು ನಿಗದಿಪಡಿಸಿ ವ್ಯಕ್ತಿತ್ವ ಪರೀಕ್ಷೆಯನ್ನು ನಡೆಸುವ ಕುರಿತು ಕ್ರಮ ಕೈಗೊಳ್ಳಬೇಕೆಂದು ಹಾಗೂ ಈಗ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯಬೇಕೆಂದು ಅವರು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
Related Articles
Advertisement
ಜಗತ್ತಿನಲ್ಲಿ ಗುಣ ಮಟ್ಟದ ಆಯ್ಕೆಯ ವಿಚಾರದಲ್ಲಿ ತನ್ನ ಶ್ರೇಷ್ಠತೆಯನ್ನು ಉಳಿಸಿಕೊಂಡಿರುವ ಕೇಂದ್ರ ಲೋಕ ಸೇವಾ ಆಯೋಗವು 1750 ಅಂಕಗಳಿಗೆ ಲಿಖಿತ ಪರೀಕ್ಷೆಗೆ ಹಾಗೂ 275 ಅಂಕಗಳನ್ನು ವ್ಯಕ್ತಿತ್ವ ಪರೀಕ್ಷೆಗೆ ಅಳವಡಿಸಿಕೊಂಡಿದೆ. ವ್ಯಕ್ತಿತ್ವ ಪರೀಕ್ಷೆಗಳಿಗಾಗಿ ಹಲವು ರಾಜ್ಯಗಳು ಭಿನ್ನ ಭಿನ್ನ ಮಾದರಿಗಳನ್ನು ಅಳವಡಿಸಿಕೊಂಡಿವೆ. ಉದಾಹರಣೆಗೆ ಅಸ್ಸಾಂನಲ್ಲಿ-275, ಪಶ್ಚಿಮ ಬಂಗಾಳ-200, ಬಿಹಾರ-120, ಉತ್ತರ ಕಾಂಡ-200, ಉತ್ತರ ಪ್ರದೇಶ-100, ಗುಜರಾತ್-100, ಮಹಾರಾಷ್ಟ್ರ-100, ಮಧ್ಯಪ್ರದೇಶ-175, ಪಂಜಾಬ್-150 ಮತ್ತು ತಮಿಳುನಾಡು ರಾಜ್ಯವು 100 ಅಂಕಗಳನ್ನು ನಿಗದಿಪಡಿಸಿಕೊಂಡಿದೆ. ಯು.ಪಿ.ಎಸ್.ಸಿ.ಯಲ್ಲಿ ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಯ ನಡುವಿನ ಅನುಪಾತ ಶೇ.15.71 ರಷ್ಟಿದೆ. ನಮ್ಮ ರಾಜ್ಯದಲ್ಲಿ 200 ಅಂಕಗಳಿಗೆ ವ್ಯಕ್ತಿತ್ವ ಪರೀಕ್ಷೆ ಇರುತ್ತಿತ್ತು. ಆನಂತರ 04-06-2020 ರಲ್ಲಿ 200 ಅಂಕಗಳ ಬದಲಿಗೆ 50 ಅಂಕಗಳಿಗೆ ಕಡಿತಗೊಳಿಸಲಾಯಿತು.
2020 ಕ್ಕಿಂತ ಮೊದಲು 1750 ಅಂಕಗಳಿಗೆ ಲಿಖಿತ ಪರೀಕ್ಷೆ ಮತ್ತು 200 ಅಂಕಗಳಿಗೆ ವ್ಯಕ್ತಿತ್ವ ಪರೀಕ್ಷೆ ಇರುತ್ತಿತ್ತು. ಈಗ 18-02-2022 ರಂದು ಕೆಪಿಎಸ್‍ಸಿಯ ಜೊತೆ ಸಮಾಲೋಚಿಸದೆ ಏಕಾಏಕಿಯಾಗಿ ಸರ್ವಾಧಿಕಾರಿ ಪ್ರವೃತ್ತಿಯಿಂದ ವ್ಯಕ್ತಿತ್ವ ಪರೀಕ್ಷೆಯ ಅಂಕಗಳನ್ನು 25 ಕ್ಕೆ ಇಳಿಸಲಾಗಿದೆ. ಇದರಿಂದಾಗಿ ಲಿಖಿತ ಪರೀಕ್ಷೆ ಮತ್ತು ವ್ಯಕ್ತಿತ್ವ ಪರೀಕ್ಷೆಗಳ ಅಂಕಗಳ ನಡುವಿನ ಅನುಪಾತ ಶೇ.2 ಕ್ಕೆ ಇಳಿಸಿದಂತಾಗಿದೆ.
ಸಾಂವಿಧಾನಿಕ ಸಂಸ್ಥೆಗಳಾದ ಲೋಕ ಸೇವಾ ಆಯೋಗಗಳು ಭಾರತದ ಸಂವಿಧಾನದ ಅನುಚ್ಛೇದ-315 ರಡಿ ರಚಿತವಾಗಿವೆ. ಅನುಚ್ಛೇದ-320 ರಡಿ ಆಯೋಗಗಳು ಕಾರ್ಯನಿರ್ವಹಣೆ ಮಾಡುತ್ತವೆ. ಸರ್ಕಾರಗಳು ನೇಮಕಾತಿ ಇತ್ಯಾದಿಗಳ ಕುರಿತು ನಿಯಮಗಳನ್ನು ರಚಿಸುವ ಅಧಿಕಾರವನ್ನು ಹೊಂದಿವೆಯಾದರೂ ಲೋಕಸೇವಾ ಆಯೋಗದ ಜೊತೆ ಸಮಾಲೋಚನೆ ನಡೆಸಿಯೇ ನಿಯಮಗಳನ್ನು ರೂಪಿಸುವುದು ಸಾಂವಿಧಾನಿಕ ಸಂಸ್ಥೆಗಳಿಗೆ ನೀಡುವ ಗೌರವವಾಗಿರುತ್ತದೆ. ಆದರೆ ಬಿಜೆಪಿ ಸರ್ಕಾರಗಳು ಅಧಿಕಾರಕ್ಕೆ ಬಂದ ಮೇಲೆ ಸಾಂವಿಧಾನಿಕ ಸಂಸ್ಥೆಗಳನ್ನು ನಿರಂತರವಾಗಿ ದಮನ ಮಾಡುತ್ತಿವೆ ಎಂಬ ಆರೋಪವನ್ನು ಇನ್ನಷ್ಟು ಗಟ್ಟಿಗೊಳಿಸಲೆಂಬಂತೆ ಕೆಪಿಎಸ್‍ಸಿಯ ವಿಚಾರದಲ್ಲೂ ರಾಜ್ಯ ಸರ್ಕಾರ ನಡೆದುಕೊಳ್ಳುತ್ತಿದೆ.
ಕೆಪಿಎಸ್‍ಸಿಯ ಮೂಲಕ ಆಯ್ಕೆಯಾಗುವ ಅಧಿಕಾರಿಗಳು ಕನಿಷ್ಠ 30 ವರ್ಷಗಳ ಕಾಲ ರಾಜ್ಯದ ತಾಲ್ಲೂಕು, ಉಪ ವಿಭಾಗ, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳಾಗಿ ಕೆಲಸ ಮಾಡುತ್ತಾರೆ. ಗ್ರಾಮೀಣ, ಅರೆ ಗ್ರಾಮೀಣ, ಪಟ್ಟಣ, ನಗರ ಪ್ರದೇಶಗಳಲ್ಲಿನ ರೈತರು, ಪಶು ಪಾಲಕರು, ಬಡವರು, ಹಿಂದುಳಿದವರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು, ಕುಶಲಕರ್ಮಿಗಳು, ಕಾರ್ಮಿಕರು ಹೀಗೆ ವಿವಿಧ ಸಾಮಾಜಿಕ ಗುಂಪುಗಳ ಜೊತೆ ಅವರು ಮಾತೃ ಹೃದಯದಿಂದ ನಡೆದುಕೊಳ್ಳಬೇಕಾಗುತ್ತದೆ. ವಿವಿಧ ಸಾಮಾಜಿಕ, ಧಾರ್ಮಿಕ, ಭಾಷಿಕ ಗುಂಪುಗಳ ಹಿನ್ನೆಲೆಯ ಅರಿವು ಇರಬೇಕಾಗುತ್ತದೆ. ಅರಿವು ಮತ್ತು ತಿಳುವಳಿಕೆಗಳು ಇರಬೇಕಾಗುತ್ತದೆ. ಈ ರೀತಿಯ ವ್ಯಕ್ತಿತ್ವ ಪುಸ್ತಕಗಳಿಂದ ಬರುವಂಥದ್ದಲ್ಲ. ವಿವಿಧ ಸಾಮಾಜಿಕ ಗುಂಪುಗಳ ಕುರಿತು ಹೆಚ್ಚು ತಿಳುವಳಿಕೆ ಮತ್ತು ಕರುಣೆ ಇರಬೇಕಾಗುತ್ತದೆ. ಅಭ್ಯರ್ಥಿಗಳು ಹೆಚ್ಚು ಅಂಕಗಳನ್ನು ಗಳಿಸುವುದರ ಕುರಿತು ನಮಗೆಲ್ಲರಿಗೂ ಗೌರವವಿದೆ. ಅದರ ಜೊತೆಯಲ್ಲಿಯೇ ಒಂದು ತಾಲ್ಲೂಕನ್ನು, ಉಪ ವಿಭಾಗ, ಜಿಲ್ಲೆ ಹಾಗೂ ರಾಜ್ಯವನ್ನು ಮುನ್ನಡೆಸಬೇಕಾದ ನಾಯಕತ್ವದ ಗುಣವು ಸಹ ಅಧಿಕಾರಿಯಾಗುವವರಿಗೆ ಇರಬೇಕಾಗುತ್ತದೆ. ಈ ರೀತಿಯ ಗುಣ ಇದೆಯೇ ಇಲ್ಲವೇ ಎಂಬುದು ಲಿಖಿತ ಪರೀಕ್ಷೆಯ ಮೂಲಕ ಗಳಿಸುವ ಅಂಕಗಳಿಂದ ಮಾತ್ರ ನಿರ್ಧಾರವಾಗುವುದಿಲ್ಲ. ಕರುಣೆ, ಸಾಮಾನ್ಯ ಜ್ಞಾನ, ನಾಯಕತ್ವದ ಗುಣ ಮುಂತಾದ ಸ್ವಭಾವಗಳು ಕಾರ್ಯಾಂಗದ ಪ್ರಮುಖ ಭಾಗವಾಗುವ ‘ಎ’ ಮತ್ತು ‘ಬಿ’ ಶ್ರೇಣಿಯ ಅಧಿಕಾರಿಯಾಗುವವರಿಗೆ ಇದೆಯೊ ಇಲ್ಲವೊ ಎಂಬುದನ್ನು ವ್ಯಕ್ತಿತ್ವ ಪರೀಕ್ಷೆಯ ಮೂಲಕ ನಿರ್ಧರಿಸಬೇಕಾಗುತ್ತದೆ.
ಆಡಳಿತ ನಡೆಸುವಾಗ ಪದೇ ಪದೇ ಉಂಟಾಗುವ ಹಲವು ರೀತಿಯ ಬಿಕ್ಕಟ್ಟುಗಳನ್ನು ಸಂದರ್ಭಗಳ ಸೂಕ್ಷ್ಮತೆ ಮತ್ತು ಹಿನ್ನೆಲೆಗಳನ್ನು ಅರಿತು ಅವುಗಳನ್ನು ನಿಭಾಯಿಸಬೇಕಾಗುತ್ತದೆ. ಈ ಕಾರಣಕ್ಕಾಗಿಯೇ ಕೇಂದ್ರ ಲೋಕ ಸೇವಾ ಆಯೋಗವು ಇಂದಿಗೂ ಕೂಡಾ 275 ಅಂಕಗಳಿಗೆ ವ್ಯಕ್ತಿತ್ವ ಪರೀಕ್ಷೆ ನಡೆಸುತ್ತದೆ.