Advertisement

ಕೆಪಿಎಸ್‌ಸಿ ಅಕ್ರಮ: 13 ಮಂದಿ ಬಂಧನ

06:00 AM Mar 24, 2018 | |

ಕಲಬುರಗಿ: ಕರ್ನಾಟಕ ಲೋಕಸೇವಾ ಆಯೋಗ ನಡೆಸಿದ ವಿವಿಧ ಹುದ್ದೆಗಳ ನೇಮಕಾತಿಯ ಸಿಇಟಿ ಪರೀಕ್ಷೆಯಲ್ಲಿ ಅಕ್ರಮ ಎಸಗುತ್ತಾ ಈಗಾಗಲೇ ನೂರಕ್ಕೂ ಹೆಚ್ಚು ಸರ್ಕಾರಿ ನೌಕರಿಯನ್ನು ಗಿಟ್ಟಿಸಿದ್ದ ಕುಖ್ಯಾತ ಜಾಲವನ್ನು ಕಲಬುರಗಿ ಪೊಲೀಸರು ಬೇಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಎಂಟು ಸರ್ಕಾರಿ ನೌಕರರು ಸೇರಿ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

Advertisement

ಫೆ.25ರಂದು ನಡೆದ ಕೆಪಿಎಸ್‌ಸಿ ಪ್ರಥಮ ದರ್ಜೆ ಸಹಾಯಕ ಹುದ್ದೆಗಳ ನೇಮಕಾತಿ ಪರೀಕ್ಷೆಯಲ್ಲಿ ಇಲ್ಲಿನ ರೋಜಾ ಪೊಲೀಸ್‌ ಠಾಣೆ ವ್ಯಾಪ್ತಿಯ ನ್ಯಾಷನಲ್‌ ಬಿ.ಎಡ್‌. ಕಾಲೇಜು ಹಾಗೂ ಗ್ಲೋಬಲ್‌ ಮಹಿಳಾ ಬಿ.ಎಡ್‌. ಕಾಲೇಜುಗಳಲ್ಲಿ ನಾಲ್ಕು ಪ್ರಶ್ನೆ ಪತ್ರಿಕೆಗಳು ಕಾಣೆಯಾಗಿದ್ದನ್ನು ಪರಿಶೀಲಿಸಿದಾಗ ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಮೋಸ ಮಾಡಿ ಅಕ್ರಮ ಅಂಕ ಪಡೆದು ನೌಕರಿ ಭಾಗ್ಯ ಕಲ್ಪಿಸುವ ಜಾಲದ ಸುಳಿವು ಪತ್ತೆಯಾಗಿತ್ತು. 

ಕೂಲಂಕಶವಾಗಿ ತನಿಖೆ ನಡೆದಾಗ 8 ಸರ್ಕಾರಿ ನೌಕರರು ಸೇರಿ 13 ಮಂದಿ ತಂಡದ ಕೃತ್ಯ ಬಯಲಿಗೆ ಬಂದಿದೆ. ಈಗ ತಂಡದ ಸದಸ್ಯರೆನ್ನೆಲ್ಲ ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಪಿ ಶಶಿಕುಮಾರ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಮಹಿಮುದ್‌ ನದಾಫ್‌, ನಾಗರಾಜ ಟೆಂಗಳಿ, ಡಾ.ಕಾಮ್ರಾನ್‌ ಕೈಸರ್‌, ಅಬ್ದುಲ್‌ ನಜೀಬ್‌, ಹಜರತ್‌ ಅಲಿ ನದಾಫ್‌, ಇಮಾಮ್‌ಸಾಬ ನದಾಫ್‌, ಸಲೀಂ ಅಲಿ ಹಾಗೂ ನಾಸೀರ್‌, ತಮಜೀತ ಪಟೇಲ್‌ ಹಾಗೂ ಎರಡೂ ಕಾಲೇಜುಗಳ ಪ್ರಾಚಾರ್ಯರಾದ ಡಾ.ರೆಹಾನ್‌ ಬೇಗಂ, ಡಾ.ಹುಮೆರಾ ಬೇಗಂ ಎಂಬುವವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಫೆ.27ರಂದು ಚಂದ್ರಕಾಂತ ಹರಳಯ್ಯ, ಭೀಮರಾಯ ಹೂವಿನಹಳ್ಳಿ ಅವರನ್ನು ವಶಕ್ಕೆ ಪಡೆಯಲಾಗಿತ್ತು.

ಆರೋಪಿಗಳು ಎರಡು ಕಾರು, ಆರು ಬೈಕ್‌, ಒಂದು ಪ್ಲಾಟ್‌ ಖರೀದಿಸಿದ್ದಾರೆ. ಅಲ್ಲದೇ, ವಿದೇಶ ಪ್ರವಾಸ ಕೈಗೊಂಡು ಖರ್ಚು ಮಾಡಿದ್ದಾರೆ. ಆರೋಪಿಗಳಿಂದ ಈಗಾಗಲೇ ಅಭ್ಯರ್ಥಿಗಳ ಪ್ರವೇಶ ಪತ್ರ, ರುಜು ಹಾಕಿದ ಖಾಲಿ ಚೆಕ್‌, ಅಭ್ಯರ್ಥಿಗಳ ಮೂಲ ದಾಖಲಾತಿ ಹಾಗೂ ಅಂಕಪಟ್ಟಿ, 5 ಲಕ್ಷ ರೂ.ಜಪ್ತಿ ಮಾಡಲಾಗಿದೆ. ತನಿಖೆಯ ಮೇಲ್ವಿಚಾರಣೆಯನ್ನು ಅಪರ ಪೊಲೀಸ್‌ ಅಧೀಕ್ಷಕರು ಮಾಡುತ್ತಿದ್ದು, ಹೆಚ್ಚಿನ ತನಿಖೆಗಾಗಿ ಸಹಾಯಕ ಪೊಲೀಸ್‌ ಅಧೀಕ್ಷಕ ಲೋಕೇಶ ನಿಜೆ ಅವರನ್ನು ನಿಯೋಜಿಸಲಾಗಿದೆ ಎಂದು ಶಶಿಕುಮಾರ ತಿಳಿಸಿದರು.

Advertisement

ಅಕ್ರಮ ಹೇಗೆ ನಡೆಯುತ್ತಿತ್ತು?
ಸೂಕ್ತ ಪರೀಕ್ಷಾ ಕೇಂದ್ರಗಳನ್ನು ಗುರುತಿಸಿ ಆ ಕೇಂದ್ರದಲ್ಲಿ ಗೈರು ಹಾಜರಾಗುವ ಅಭ್ಯರ್ಥಿಗಳ ಪ್ರಶ್ನೆ ಪತ್ರಿಕೆಯನ್ನು ಹೊರಗೆ ತರಲಾಗುತ್ತಿತ್ತು. ತದನಂತರ ನುರಿತ ತಜ್ಞರಿಂದ ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳಿಗೆ ಪೂರೈಸುತ್ತಿದ್ದರು. ಅವಧಿ ಮುಗಿದ ನಂತರ 15 ನಿಮಿಷದೊಳಗೆ ಉಳಿದಿರುವ ಎಲ್ಲ ಪ್ರಶ್ನೆಗಳಿಗೆ ಟಿಕ್‌ ಹಾಕುವಂತೆ ವ್ಯವಸ್ಥೆ ಮಾಡುತ್ತಿದ್ದರು. ಇದಾಗದಿದ್ದರೆ ಅರ್ಥವಾಗುವ ಪ್ರಶ್ನೆಗಳಿಗೆ ಮಾತ್ರ ಟಿಕ್‌ ಹಾಕಿ ಕೆಪಿಎಸ್‌ಸಿ ಅಧೀನದಲ್ಲಿರುವಾಗಲೇ ಬಂಡಲ್‌ಗ‌ಳನ್ನು ಬಿಚ್ಚಿ ಉಳಿದ ಪ್ರಶ್ನೆಗಳಿಗೆ ಟಿಕ್‌ ಹಾಕುವ ಮುಖಾಂತರವೂ ಈ ಟೀಮ್‌ ಕಾರ್ಯ ನಿರ್ವಹಿಸುತ್ತಿತ್ತು.

100 ಸರ್ಕಾರಿ ನೌಕರಿ ಭಾಗ್ಯ!
2013ರಿಂದ ನಡೆಯುತ್ತಾ ಬಂದಿರುವ ಕೆಪಿಎಸ್‌ಸಿಯ ಎಸ್‌ಡಿಎ, ಎಫ್‌ಡಿಎ, ವಾರ್ಡ್‌ನ್‌, ವಾಣಿಜ್ಯ ತೆರಿಗೆ ಇನ್ಸ್‌ಪೆಕ್ಟರ್‌, ಬಿಲ್‌ ಕಲೆಕ್ಟರ್‌, ಸಹಾಯಕ ಶಿಕ್ಷಕ ಹುದ್ದೆ ಸೇರಿದಂತೆ ನಮೂನೆಯ ನೂರಕ್ಕೂ ಹೆಚ್ಚು ಹುದ್ದೆಗಳನ್ನು ಅಕ್ರಮವಾಗಿ ದೊರಕಿಸಿ ಕೊಡಲಾಗಿದೆ. ಬಂಧಿತ ಕುಖ್ಯಾತರು ತಮ್ಮ ಸಂಬಂಧಿಕರಿಗೆಲ್ಲರಿಗೂ ನೌಕರಿ ಕೊಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next