ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಮಹಿಳಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಶಾಲೆಟ್ ಪಿಂಟೋ ಸಹಿತ ಮೂವರು ಅಂತಿಮ ರೇಸ್‌ನಲ್ಲಿದ್ದಾರೆ. ಪಟ್ಟ ಈ ಬಾರಿ ಜಿಲ್ಲೆಗೆ ಒಲಿಯುವುದೇ ಎನ್ನುವ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ.
ಈ ಸ್ಥಾನ ಇಲ್ಲಿಯವರೆಗೆ ಜಿಲ್ಲೆಗೆ ಲಭಿಸಿಲ್ಲ. ಹೀಗಾಗಿ ಜಿಲ್ಲೆಗೆ ನೀಡಬೇಕು ಎನ್ನುವ ಒತ್ತಾಯ ಒಂದೆಡೆಯಾದರೆ, ಮತ್ತೂಂದೆಡೆ ಸ್ಥಾನದ ಆಕಾಂಕ್ಷಿಯಾದ ಶಾಲೆಟ್ ಕೂಡ ಪ್ರಯತ್ನಿಸುತ್ತಿದ್ದಾರೆ.
ಪ್ರಸ್ತುತ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಟಾಳ್ಕರ್ ಶಾಸಕಿಯಾಗಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ಎಂಬ ನಿಯಮದಡಿ ಈ ಹುದ್ದೆಗೆ ಹೊಸ ನೇಮಕಾತಿ ಆಗಬೇಕಿದೆ. ಎಐಸಿಸಿ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಆರಂಭಿಸಿದ್ದು, 70ಕ್ಕೂ ಅಧಿಕ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಇವರಲ್ಲಿ 15 ಮಂದಿಯನ್ನು ಎಐಸಿಸಿ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ ಸುಶ್ಮಿತಾ ದೇವ್ ಅವರು ಕಳೆದ ವಾರ ಹೊಸದಿಲ್ಲಿಯಲ್ಲಿ ಸಂದರ್ಶನ ನಡೆಸಿದ್ದಾರೆ.
ಅಂತಿಮವಾಗಿ ಶಾಲೆಟ್ ಪಿಂಟೋ, ಪುಷ್ಪಾ ಅಮರನಾಥ್, ಡಾ| ನಾಗಲಕ್ಷ್ಮೀ, ಶಾರದಾ ಗೌಡ, ಭಾರತಿ ಶಂಕರ್ ಅವರನ್ನು ಆಯ್ಕೆ ಮಾಡಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಪಟ್ಟಿ ಕಳುಹಿಸಿದ್ದರು. ರಾಹುಲ್ ಗಾಂಧಿಯವರು ಕಳೆದ ಶನಿವಾರ ಈ ಐದು ಮಂದಿಯ ಸಂದರ್ಶನ ನಡೆಸಿದ್ದು, ಅಂತಿಮ ಪಟ್ಟಿಯನ್ನು ಎಐಸಿಸಿ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಎಐಸಿಸಿ ಕರ್ನಾಟಕ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರಿಗೆ ಕಳುಹಿಸಿದ್ದಾರೆ. ಇವರು ರಾಜ್ಯ ನಾಯಕರ ಜತೆ ಸಮಾಲೋಚನೆ ನಡೆಸಿ ಓರ್ವರನ್ನು ಆಯ್ಕೆ ಮಾಡುವರು. ಈ ಪೈಕಿ ಶಾಲೆಟ್ ಪಿಂಟೋ ಸೇರಿದಂತೆ ಮೈಸೂರು ಜಿ.ಪಂ. ಮಾಜಿ ಅಧ್ಯಕ್ಷೆ ಪುಷ್ಪಾ ಅಮರನಾಥ್, ದಂತ ವೈದ್ಯೆ ಡಾ| ನಾಗಲಕ್ಷ್ಮೀ ಅವರ ಹೆಸರು ಮುಂಚೂಣಿಯಲ್ಲಿವೆ ಎಂದು ಮೂಲಗಳು ತಿಳಿಸಿವೆ. ಈ ಮೂವರೂ ರಾಜ್ಯದ ಪ್ರಭಾವಿ ನಾಯಕರ ಮೂಲಕ ಪಕ್ಷದ ವರಿಷ್ಠರಿಗೆ ಒತ್ತಡ ತರಲಾಗುತ್ತಿದೆ ಎನ್ನಲಾಗಿದೆ. ಶಾರದಾ ಗೌಡ, ಭಾರತಿ ಶಂಕರ್ ಕೂಡ ಪ್ರಯತ್ನನಿರತರಾಗಿದ್ದಾರೆ. ಉಪಚುನಾವಣೆ ಮುಗಿದ ಮೇಲೆ ಹೊಸಬರ ಆಯ್ಕೆ ನಡೆಯುವ ಸಾಧ್ಯತೆಗಳಿವೆ.