Advertisement

ದಿನಕ್ಕೆ 10 ಕೋಟಿ ರೂ. ಸಂಗ್ರಹ

04:28 PM Jul 03, 2023 | Team Udayavani |

ಮೈಸೂರು:  ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಣಂಗೂರು ಬಳಿ ಸಾರ್ವಜನಿಕರ ವಿರೋಧದ ನಡುವೆಯೂ ಟೋಲ್‌ ಸಂಗ್ರಹಿಸುತ್ತಿರುವುದು ಹಗಲು ದರೋಡೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಟೀಕಿಸಿದರು.

Advertisement

ಕಾಂಗ್ರೆಸ್‌ ಭವನದಲ್ಲಿ ಭಾನುವಾರ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ, ಮೈಸೂರಿಂದ ಬೆಂಗಳೂರು ಹೋಗೋಕೆ 660 ರೂ. ಕೊಡ ಬೇಕು. ಮರಳಿ ಬರಲು ಅಷ್ಟೇ ಪಾವತಿಸಬೇಕು. ಮಂಡ್ಯ ಬಳಿ ಪ್ರವೇಶಕ್ಕೆ 330 ರೂ., ರಾಮನಗರ ಬಳಿ ನಿರ್ಗಮನಕ್ಕೆ 330 ರೂ. ಕೊಡಬೇಕಿದೆ. ಇದು ದರೋಡೆಯಲ್ಲವೇ ಎಂದು ಪ್ರಶ್ನಿಸಿದರು.

ಇತರೆ ರಾಜ್ಯಗಳಲ್ಲಿ ಒಂದು ಕಿ.ಮೀ.ಗೆ 1 ರೂ. 48 ಪೈಸೆ ಟೋಲ್‌ ದರ ಇದೆ. ಆದರೆ, ಕರ್ನಾಟಕದಲ್ಲಿ 1 ಕಿ.ಮೀ.ಗೆ 3 ರೂ. 80 ಪೈಸೆ ವಸೂಲಿ ಮಾಡಲಾಗುತ್ತಿದೆ. ಇಲ್ಲಿಯವರೆಗೂ ಎಕ್ಸ್‌ ಪ್ರಸ್‌ ವೇನಲ್ಲಿ 456 ಅಪಘಾತವಾಗಿದ್ದು, 189 ಜನರು ಮೃತಪಟ್ಟಿದ್ದಾರೆ ಎಂದು ವಿವರಿಸಿದರು. ರೋಡ್‌ ರಾಬರಿ: ಈ ರಸ್ತೆಯಲ್ಲಿ ಪ್ರತಿನಿತ್ಯ 1 ಲಕ್ಷ ವಾಹನಗಳು ದಿನಕ್ಕೆ ಸಂಚರಿಸುವುದಾಗಿ ಅಂದಾಜು ಮಾಡಲಾಗಿದೆ. 2 ಟೋಲ್‌ಗ‌ಳಿಂದ ದಿನಕ್ಕೆ 10 ಕೋಟಿ ರೂ. ಸಂಗ್ರಹ ಆಗುತ್ತದೆ. 30 ವರ್ಷಕ್ಕೆ ಟೋಲ್‌ ಸಂಗ್ರಹಕ್ಕೆ ಟೆಂಡರ್‌ ನೀಡಲಾಗಿದೆ. ವರ್ಷಕ್ಕೆ 3,650 ಕೋಟಿಯಂತೆ 10 ವರ್ಷಕ್ಕೆ 36,500 ಕೋಟಿ ರೂ. ಸಂಗ್ರಹ ಆಗುತ್ತದೆ. 30 ವರ್ಷಕ್ಕೆ 1 ಲಕ್ಷ ಕೋಟಿ ರೂ. ಸಂಗ್ರಹ ಮಾಡಲಾಗುತ್ತದೆ. ಆದರೆ, ರಸ್ತೆಗೆ ಖರ್ಚು ಮಾಡಿರುವ ವೆಚ್ಚ 9,550 ಕೋಟಿ ರೂ. ಇದು ಕೇಂದ್ರ ಸರ್ಕಾರದ ರೋಡ್‌ ರಾಬರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೂರನೇ ವ್ಯಕ್ತಿಯಿಂದ ಟೋಲ್‌ ಸಂಗ್ರಹ: ಸ್ಕೈ ಲಾರ್ಜ್‌ ಕಂಪನಿಗೆ ಟೋಲ್‌ ಸಂಗ್ರಹಕ್ಕೆ ಟೆಂಡರ್‌ ನೀಡಲಾಗಿದೆ. ಎಷ್ಟು ಲಕ್ಷಕ್ಕೆ ಇವರಿಗೆ ಟೆಂಡರ್‌ ನೀಡಲಾಗಿದೆ. ದಿನನಿತ್ಯ ಸಂಗ್ರಹ ಆಗುತ್ತಿರುವುದು 10 ಕೋಟಿ ರೂ., ಆದರೆ, ಸರ್ಕಾರ ಟೆಂಡರ್‌ ಕೊಟ್ಟಿರುವುದು 59 ಲಕ್ಷ ರೂ. ಸಂಗ್ರಹಿಸಲು, ರಸ್ತೆ ನಿರ್ಮಾಣ ಮಾಡಿರೋ ಸಂಸ್ಥೆಗೆ ಟೆಂಡರ್‌ ನೀಡಿಲ್ಲ. ಮೂರನೇ ವ್ಯಕ್ತಿಯನ್ನು ಟೋಲ್‌ ಸಂಗ್ರಹಕ್ಕೆ ಬಿಡಲಾಗಿದೆ ಎಂದು ಆರೋಪಿಸಿದರು.

ನೀರಿನ ಅಭಾವ: ರಾಜ್ಯದಲ್ಲಿ ಮಳೆಯ ಅಭಾವ ಇದೆ. ಜುಲೈ ತಿಂಗಳಿಂದ ಮಳೆ ಯಾಗುವ ಸಾಧ್ಯತೆ ಇದೆ. ಸದ್ಯ ಕುಡಿಯುವ ನೀರಿಗೆ ಸಮಸ್ಯೆ ಆಗುವ ವಾತಾವರಣ ಇದೆ. ನಾಲ್ಕು ಜಲಾನಯನ ಪ್ರದೇಶಗಳಾದ ಕಾವೇರಿ, ಕಬಿನಿ, ಹಾರಂಗಿ, ಹೇಮಾವತಿಯಲ್ಲಿ 7 ಟಿಎಂಸಿ ನೀರು ಮಾತ್ರ ಸಂಗ್ರಹ ಇದೆ ಎಂದು ಹೇಳಿದರು.

Advertisement

ಮೂರೂವರೆ ಟಿಎಂಸಿ ನೀರು ಬೇಕು: ಕೆ. ಆರ್‌.ಎಸ್‌ನಲ್ಲಿ 2.825, ಹಾರಂಗಿಯಲ್ಲಿ 1.556, ಕಬಿನಿಯಲ್ಲಿ 0.68, ಹೇಮಾವತಿಯಲ್ಲಿ 2 ಟಿಎಂಸಿ ನೀರಿದೆ. ಬೆಂಗಳೂರು ನಗರ ಒಂದಕ್ಕೆ ಮೂರೂವರೆ ಟಿಎಂಸಿ ನೀರು ಬೇಕು. ಹಾಸನ, ಮಡಿಕೇರಿ, ಮೈಸೂರು ಚಾಮರಾಜನಗರ, ರಾಮ ನಗರ, ಮಂಡ್ಯ, ತುಮಕೂರು, ಬೆಂಗಳೂರು ಗ್ರಾಮಾಂತರಕ್ಕೆ ಎರಡೂವರೆ ಟಿಎಂಸಿ ನೀರು ಬೇಕು ಎಂದು ಹೇಳಿದರು.

ತಮಿಳುನಾಡಿಗೆ ನೀರು ಬಿಡಲಾಗಲ್ಲ: ಕೃಷಿಗೆ 5 ಟಿಎಂಸಿ ನೀರು ಅಗತ್ಯವಿದ್ದು, ನಾವೂ ತಮಿಳು ನಾಡಿಗೆ 3.5 ಟಿಎಂಸಿ ನೀರು ಬಿಡಬೇಕು. ನಮ್ಮಲಿ ಇರೋದು 7 ಟಿಎಂಸಿ ನೀರು ಮಾತ್ರ. ತಮಿಳುನಾಡಿಗೆ ನೀರು ಬಿಟ್ಟರೆ ಬಹಳ ಸಮಸ್ಯೆ ಆಗುತ್ತದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲಾಗಲ್ಲ. ಕೇಂದ್ರ ಸರ್ಕಾರ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.

ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ನಗರ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಕಾರ್ಯದರ್ಶಿ ಗಿರೀಶ್‌, ಮಾಧ್ಯಮ ವಕ್ತಾರ ಎಂ.ಮಹೇಶ್‌ ಹಾಜರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next