ಮೈಸೂರು: ಹಿರಿಯ ಐಪಿಎಸ್ ಅಧಿಕಾರಿಗಳು ಸೇರಿ ಹಲವು ರಾಜಕಾರಣಿಗಳ ಜುಟ್ಟು ಸ್ಯಾಂಟ್ರೋ ರವಿ ಕೈಯಲ್ಲಿದೆ. ಅದಕ್ಕಾಗಿಯೇ ಸರ್ಕಾರ ಆತನ ವಿರುದ್ಧ ಯಾವುದೇ ಮೊಕದ್ದಮೆಗಳನ್ನು ದಾಖಲಿಸಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಐಪಿಎಸ್ ಅಧಿಕಾರಿಗಳು ಸೇರಿ ವರ್ಗಾವಣೆ ದಂಧೆಯಲ್ಲಿ 300 ಕೋಟಿ ರೂ. ವ್ಯವಹಾರದ ನಂಟು ಹೊಂದಿರುವ ಮಾನವ ಕಳ್ಳಸಾಕಣೆದಾರ ಸ್ಯಾಂಟ್ರೋ ರವಿ ಬಳಿ ಹತ್ತಿರ ಅನೇಕರ ಜುಟ್ಟು, ಜನಿವಾರ ಇರುವ ಕಾರಣದಿಂದಲೇ ರಾಜ್ಯಸರ್ಕಾರಕ್ಕೆ ಭಯ ಶುರುವಾಗಿದೆ. ಸ್ಯಾಂಟ್ರೋ ರವಿಯನ್ನು ಮಾನವ ಕಳ್ಳಸಾಕಣೆದಾರ ಎನ್ನುವುದಕ್ಕೆ ಪೊಲೀಸ್ ಇಲಾಖೆಯಲ್ಲಿ ಯಾವುದೇ ದಾಖಲೆಗಳು ಇಲ್ಲ. ಆತನ ಮಾಜಿ ಪತ್ನಿ ನೀಡಿರುವ ದೂರಿನ ಆಧಾರದ ಮೇಲೆ ಅತ್ಯಾಚಾರ, ಅಟ್ರಾಸಿಟಿ ಮೊಕದ್ದಮೆ ದಾಖಲಿಸಲಾಗಿದೆಯೇ ಹೊರತು ಸರ್ಕಾರದಿಂದ ಯಾವುದೇ ಕೇಸ್ ಹಾಕಿಲ್ಲ ಎಂದರು.
ಬಿಜೆಪಿಯ ಮಹಾ ನಾಯಕರ ಚರಿತ್ರೆ ಸ್ಯಾಂಟ್ರೋ ರವಿ ಕೈಯಲ್ಲಿದೆ. ಅದನ್ನ ಮರೆಮಾಚಲು ಆರಗ ಜ್ಞಾನೇಂದ್ರ ಗುಜರಾತ್‌ಗೆ ತೆರಳಿದ್ದರಾ?. ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಸ್ಯಾಂಟ್ರೋ ರವಿ ಅಹಮದಾಬಾದ್ ನಗರದಲ್ಲಿ ವಾಸ್ತವ್ಯ ಹೂಡಿದ್ದ ಸ್ಥಳ 300 ಮೀಟರ್ ವ್ಯತ್ಯಾಸದಲ್ಲಿದೆ. ಗೃಹ ಸಚಿವರು ಸರ್ಕಾರಿ ಕಾರ್ಯಕ್ರಮಕ್ಕೆ ತೆರಳಿದ್ದರೇ ಅಥವಾ ಯಾರ ಹೆಸರಿನಲ್ಲಿ ಟಿಕೆಟ್ ಬುಕ್ಕಿಂಗ್ ಆಗಿತ್ತು. ಹಾಗೆಯೇ ರವಿ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ ಮೇಲೆ ಪುಣೆಯಿಂದ ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ತೆರಳುವಾಗ ನಿಲ್ದಾಣದಲ್ಲಿ ಸ್ಕ್ಯಾನ್ ಮಾಡಿದಾಗ ಗೊತ್ತಾಗಲಿಲ್ಲವೇ ಎನ್ನುವ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು.
ವರ್ಗಾವಣೆ ದಂಧೆಯಲ್ಲಿ 300 ಕೋಟಿ ರೂ. ವ್ಯವಹಾರ ನಡೆದಿದೆ. ಬಾಂಬೆಗೆ ತೆರಳಿದ್ದವರು ಸೇರಿದಂತೆ ಪ್ರತಿಷ್ಠಿತ ಅಧಿಕಾರಿಗಳ, ಮುಖಂಡರ ಮಕ್ಕಳ ವಿಡಿಯೋಗಳು ಇರುವುದರಿಂದ ಸರ್ಕಾರವನ್ನು ನಿದ್ದೆಗೆಡಿಸಿದೆ. ಅದಕ್ಕಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಯಾಂಟ್ರೋ ರವಿ ಕೇಸನ್ನು ಹೈ ಪ್ರೊಫೈಲ್ ಪ್ರಕರಣವಂತೆ ಪರಿಗಣಿಸಲು ಕಾರಣವಾಗಿದೆ ಎಂದು ದೂರಿದರು.
ಮೈಸೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯ್‌ಕುಮಾರ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಮೈಸೂರು ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಂ.ಶಿವಣ್ಣ, ವಕ್ತಾರ ಕೆ.ಮಹೇಶ್, ಜಿಪಂ ಮಾಜಿ ಸದಸ್ಯ ಕೆ.ಮಾರುತಿ ಇದ್ದರು.
ಕ್ರೆಡಿಟ್ ಕಾಂಗ್ರೆಸ್‌ಗೆ ಸಲ್ಲಬೇಕು : ರಾಜ್ಯದ 1.4 ಕೋಟಿ ಜನರಿಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುವುದು. ಕಳೆದ ಮೂರು ವರ್ಷಗಳಲ್ಲಿ ಎಂಟು ಬಾರಿ ದರ ಏರಿಕೆ ಮಾಡಲಾಗಿದೆ. ಹಾಗಾಗಿ, ಬಡವರಿಗೆ ಅನುಕೂಲವಾಗುವಂತಹ ದಿಟ್ಟ ತೀರ್ಮಾನ ಮಾಡಲು ಪಕ್ಷದ ಮುಖಂಡರು ಘೋಷಣೆ ಮಾಡಿದ್ದಾರೆ ಎಂದರು.
ಮೈಸೂರು-ಬೆಂಗಳೂರು ನಡುವಿನ ದಶಪಥ ರಸ್ತೆ ಕಾಂಗ್ರೆಸ್‌ಗೆ ಕ್ರೆಡಿಟ್ ಸಲ್ಲಬೇಕು ಹೊರತು ಪ್ರತಾಪ್ ಸಿಂಹ ಅವರಿಗೆ ಅಲ್ಲ. ಕಾಂಗ್ರೆಸ್ ಅವಧಿಯಲ್ಲಿ ಮಾಡಿದ್ದನ್ನು ತಮ್ಮದೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದರು.