Advertisement

ಸಚಿವರ ಭ್ರಷ್ಟಾಚಾರ ವಿರುದ್ಧ ಹೋರಾಟಕ್ಕೆ ಬದ್ಧ: ಲಕ್ಷ್ಮಣ್‌

02:56 PM Apr 18, 2022 | Team Udayavani |

ಮೈಸೂರು: ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರವನ್ನು ನಾಡಿನ ಪ್ರತಿ ಮನೆಮನೆಗೆ ತಲುಪಿಸುವ ಜತೆಗೆ, ಸಚಿವರ ಮೇಲಿರುವ ಭ್ರಷ್ಟಾಚಾರ ಆರೋಪಗಳ ಸಂಬಂಧ ಇಡಿ ತನಿಖೆಗೆ ಆಗ್ರಹಿಸಿ ಜಿಲ್ಲಾ ಮಟ್ಟದಲ್ಲಿ ಹೋರಾಟ ಮಾಡುತ್ತೇವೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ತಿಳಿಸಿದರು.

Advertisement

ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಲೈಂಗಿಕ ದೌರ್ಜನ್ಯ ಮತ್ತು ಶೇ. 40 ಕಮಿಷನ್‌ನಿಂದ ಇಬ್ಬರು ಮಂತ್ರಿಗಳು ರಾಜೀನಾಮೆ ಕೊಟ್ಟಿದ್ದಾರೆ. ಉಳಿದ ಐವರು ಸಚಿವರ ಮೇಲಿರುವ ಭ್ರಷ್ಟಾಚಾರದ ಆರೋಪಗಳ ವಿರುದ್ಧ ತನಿಖೆ ನಡೆಸುವಂತೆ ಹೋರಾಟ ಮಾಡಲಿದ್ದೇವೆ ಎಂದರು. ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣವನ್ನು ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಜತೆಗೆ ಈಶ್ವರಪ್ಪ ಅವರ ಮೇಲೆ ಭ್ರಷ್ಟಚಾರ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.

ಏ. 12ರಂದು ಮೈಸೂರಿನ 29 ಪಿಡಿಓಗಳು ಸೇರಿ ಒಟ್ಟು 153 ಪಿಡಿಓಗಳನ್ನು ವರ್ಗಾವಣೆ ಮಾಡಿದ್ದಾರೆ. ಹಣ ಪಡೆದು ತರಾತುರಿಯಲ್ಲಿ ವರ್ಗಾವಣೆ ಮಾಡಲಾಗಿದೆ. ಜತೆಗೆ ಲಕ್ಷ ಲಕ್ಷ ಹಣ ಪಡೆದು ಡಿಸಿ, ಎಸ್ಪಿ, ಆಯುಕ್ತರ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದರು.

ಸಚಿವರಾದ ಬಿ.ಸಿ.ಪಾಟೀಲ್‌, ಆರ್‌.ಅಶೋಕ್‌, ಡಾ.ಕೆ.ಸುಧಾಕರ್‌, ಡಾ.ಅಶ್ವತ್ಥನಾರಾಯಣ, ಗೋಪಾಲಯ್ಯ ಮತ್ತು ಶಶಿಕಲಾ ಜೊಲ್ಲೆ ಅವರ ಮೇಲೆ ಕಮಿಷನ್‌ ಮತ್ತು ಭ್ರಷ್ಟಾಚಾರದ ಆರೋಪಗಳಿವೆ. ಸಿಟಿ ರವಿ ಲೂಟಿ ರವಿ ಆಗಿದ್ದಾರೆ. ಅಧಿಕಾರಿಗಳು ಲಿಖಿತವಾಗಿ ಮುಖ್ಯ ಕಾರ್ಯದರ್ಶಿಗೆ ದೂರು ಕೊಟ್ಟಿದ್ದಾರೆ ಎಂದರು.

ನಗರ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಆರ್‌.ಮೂರ್ತಿ, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ಪ್ರಧಾನ ಕಾರ್ಯದರ್ಶಿ ಈಶ್ವರ ಚಕ್ಕಡಿ, ಸೇವಾದಳದ ಸಂಚಾಲಕ ಗಿರೀಶ್‌ ನಾಯಕ, ವಕ್ತಾರ ಕೆ.ಮಹೇಶ್‌ ಹಾಜರಿದ್ದರು.

Advertisement

ಈಶ್ವರಪ್ಪ ಅವರನ್ನು ಬಂಧಿಸಬೇಕು. ಭ್ರಷ್ಟಾಚಾರ ಆರೋಪದ ಪ್ರಕರಣಗಳ ತನಿಖೆ ನಡೆಸಬೇಕು. ಬೆಲೆ ಏರಿಕೆ ವಿರೋಧಿಸಿ ಏ. 20ರಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ಮತ್ತು ಮೆರವಣಿಗೆ ನಡೆಯಲಿದೆ. ಎಂ.ಲಕ್ಷ್ಮಣ್‌, ಕೆಪಿಸಿಸಿ ವಕ್ತಾರ.

Advertisement

Udayavani is now on Telegram. Click here to join our channel and stay updated with the latest news.

Next