ಬೀದರ: ನಗರದ ಹೋಟೆಲ್ ಕಸ್ತೂರಿ ಇಂಟರ್‌ನ್ಯಾಷನಲ್ ಸೇರಿದಂತೆ ಜಿಲ್ಲೆಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗುರುವಾರ ಕೆಪಿಸಿಸಿ ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ ಹಾಗೂ ಸಲೀಂ ಅಹಮ್ಮದ್ ಅವರ ಪದಗ್ರಹಣ ಹಾಗೂ ಸಂವಿಧಾನ ಪೀಠಿಕೆ ಪ್ರಮಾಣವಚನ ಸಮಾರಂಭದ ನೇರ ಪ್ರಸಾರ ವ್ಯವಸ್ಥೆ ವೀಕ್ಷಣೆ ಕಾರ್ಯಕ್ರಮ ನಡೆಯಿತು.
ಬೃಹತ್ ಎಲ್‌ಇಡಿ ಪರದೆಗಳನ್ನು ಅಳವಡಿಸಿ, ಝೂಮ್ ಆ್ಯಪ್ ಮೂಲಕ ಬೆಂಗಳೂರಿನಲ್ಲಿ ನಡೆದ ಸಮಾರಂಭದ ನೇರ ಪ್ರಸಾರ ವೀಕ್ಷಿಸಲಾಯಿತು. ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸೇರಿ ಜಿಲ್ಲೆಯಲ್ಲಿ ಸಾವಿರಾರು ಜನ ವೀಕ್ಷಿಸಿದರು. ನಗರದ ಹೋಟೆಲ್ ಕಸ್ತೂರಿ ಇಂಟರ್‌ನ್ಯಾಷನಲ್‌ನಲ್ಲಿ ನಡೆದ ವೀಕ್ಷಣೆ ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ ಮಾತನಾಡಿ, ಕೆಪಿಸಿಸಿಗೆ ಡಿ.ಕೆ. ಶಿವಕುಮಾರ ರಾಜ್ಯಾಧ್ಯಕ್ಷರಾಗಿ ನೇಮಕ ಆದ ಮೇಲೆ ಪಕ್ಷದಲ್ಲಿ ಹೊಸ ಚೈತನ್ಯ ಮೂಡಿದೆ. ಕಲ್ಯಾಣ ಕರ್ನಾಟಕ ಭಾಗದ ನಾಯಕ ಈಶ್ವರ ಖಂಡ್ರೆಯವರನ್ನು ಮತ್ತೂಂದು ಅವಧಿಗೆ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಸಂತಸ ತಂದಿದ್ದು, ಈ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಉಬೇದುಲ್ಲಾ ಶರೀಫ್ ಮಾತನಾಡಿ, ಕಾಂಗ್ರೆಸ್ ಬರೀ ಅಧಿಕಾರಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಸ್ವಾತಂತ್ರÂಕ್ಕಾಗಿ ಹೋರಾಡಿದ ಪಕ್ಷವಾಗಿದೆ ಎಂದು ತಿಳಿಸಿದರು.
ಜಿಪಂ ಅಧ್ಯಕ್ಷೆ ಗೀತಾ ಚಿದ್ರಿ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಮಾಜಿ ಎಂಎಲ್‌ಸಿ ಕೆ. ಪುಂಡಲೀಕ, ಪ್ರಮುಖರಾದ ಎಂ.ಎ. ಸಮಿ, ಪಂಡಿತ ಚಿದ್ರಿ, ಅಮೃತರಾವ್ ಚಿಮೋಡೆ, ವಿಜಯಕುಮಾರ ಪಾಟೀಲ ಗಾದಗಿ, ವೆಂಕಟರಾವ್ ಶಿಂಧೆ, ಭೋಜಪ್ಪಾ ಮೆಟಗೆ, ಜಾರ್ಜ್ ಫರ್ನಾಂಡಿಸ್, ಎಂ.ಡಿ. ಮಿಸ್ಬಾ ಇತರರು ಇದ್ದರು.
ಇದಕ್ಕೂ ಮುನ್ನ ದೇಶದ 20 ಜನ ಹುತಾತ್ಮ ಯೋಧರನ್ನು ಸ್ಮರಿಸಿ, 2 ನಿಮಿಷಗಳ ಮೌನ ಆಚರಣೆ ಮಾಡಲಾಯಿತು.