ಬೆಂಗಳೂರು: ಮುಖ್ಯಮಂತ್ರಿಗಳೇ ನೀವು ಬೆಂಗಳೂರು ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದು, ಬೆಂಗಳೂರಿನ ರಸ್ತೆಗಳಲ್ಲಿ ಎಷ್ಟು ಗುಂಡಿಗಳಿವೆಯೋ ಗೊತ್ತಿಲ್ಲ. ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಎರಡು ವರ್ಷದಲ್ಲಿ 18 ಜನ ಸತ್ತಿದ್ದು, ಈ ಮೂಲಕ ನೀವು ಜನತೆಗೆ ಮರಣ ಭಾಗ್ಯ ನೀಡಿದ್ದೀರಿ. ಇದು ಬೆಂಗಳೂರಿಗೆ ನೀವು ಕೊಟ್ಟಿರುವ ಕೊಡುಗೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸರ್ಕಾರವನ್ನು ಟೀಕಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಇಂದು ಬೆಂಗಳೂರು ನಗರಕ್ಕೆ ಇಷ್ಟು ದೊಡ್ಡ ಶಕ್ತಿ, ರಾಜ್ಯಕ್ಕೆ ಗೌರವ ಬಂದಿದ್ದರೆ ಅದು ಕಾಂಗ್ರೆಸ್ ಸರ್ಕಾರದಿಂದ. ಬಿಜೆಪಿ ಸರ್ಕಾರ ಬಂದ ನಂತರ ರಾಜ್ಯ ಅತಿ ಭ್ರಷ್ಟ ರಾಜ್ಯ ಎಂಬ ಕುಖ್ಯಾತಿ ಪಡೆದಿದೆ. ಇದನ್ನು ತೊಡೆದು ಹಾಕಿ ಮತ್ತೆ ರಾಜ್ಯವನ್ನು ನಂಬರ್ 1 ಮಾಡಲು ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸಾಧ್ಯ ಎಂದರು.
ಧಮ್ ಇದ್ದರೆ ಉತ್ತರ ಕೊಡಿ: ನಿನ್ನೆ ಮುಖ್ಯಮಂತ್ರಿಗಳು ಸಾಕಷ್ಟು ವಿಚಾರ ಮಾತನಾಡಿದ್ದಾರೆ. ಅವರು ಯಾತ್ರೆ, ಸಮಾವೇಶ ಮಾಡುತ್ತಿದ್ದಾರೆ. ಅವರು ಧಮ್ಮು ತಾಕತ್ತು ಇದ್ದರೆ ನಿಲ್ಲಿಸಿ ಎಂದು ಸವಾಲು ಹಾಕಿದ್ದಾರೆ. ಅವರ ಸವಾಲಿಗೆ ಪ್ರತ್ಯುತ್ತರ ನೀಡಲು ನಾನು ಸಿದ್ಧನಾಗಿದ್ದೇನೆ ಎಂದರು.
ನಾವು ಕಳೆದ ಎರಡು ತಿಂಗಳಿಂದ ನೀವು ಕೊಟ್ಟ ಮಾತಿನಂತೆ ನಡೆಯುತ್ತಿದ್ದೀರಾ ಎಂದು ಪ್ರತಿನಿತ್ಯ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಮುಖ್ಯಮಂತ್ರಿಗಳೇ, ನಿಮಗೆ ಧಮ್ ಇದ್ದರೆ, ಈ ಪ್ರಶ್ನೆಗಳಿಗೆ ಉತ್ತರ ನೀಡಿ. ಕಾಂಗ್ರೆಸ್ ಮಾಡಬಾರದನ್ನು ಮಾಡಿದೆ, ಎಲ್ಲದರ ತನಿಖೆ ಮಾಡುತ್ತೇವೆ ಎಂದು ಹೇಳುತ್ತಿದ್ದೀರಿ. ಮುಖ್ಯಮಂತ್ರಿಗಳೇ ನಿಮಗೆ ಧಮ್ ಇದ್ದರೆ ನಮ್ಮ ಕಾಲ ಹಾಗೂ ನಿಮ್ಮ ಸರ್ಕಾರದ ಅವಧಿಯಲ್ಲಿನ ಪ್ರಕರಣಗಳ ತನಿಖೆಗೆ ಆಯೋಗ ರಚಿಸಿ ಎಂದು ಸವಾಲು ಹಾಕಿದರು.
ಇದನ್ನೂ ಓದಿ:13 ಲಕ್ಷ ರೂ.ಇನಾಮು ಹೊತ್ತಿದ್ದ ಇಬ್ಬರು ನಕ್ಸಲರ ಎನ್‌ಕೌಂಟರ್
ಈ ಸರಕಾರದ 40% ಕಮಿಷನ್ ಭ್ರಷ್ಟಾಚಾರಕ್ಕೆ ಪಕ್ಕದ ಕ್ಷೇತ್ರದ ಪೊಲೀಸ್ ಇನ್ಸ್ ಪೆಕ್ಟರ್ ಬಲಿಯಾಗಿದ್ದಾರೆ. ಅವರ ಮನೆಗೆ ಭೇಟಿ ನೀಡಲು ನಾನು ಹಾಗೂ ರಾಮಲಿಂಗಾ ರೆಡ್ಡಿ ಅವರು ನಿರ್ಧರಿಸಿದ್ದೇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಎಂಟಿಬಿ ನಾಗರಾಜ್ ಅವರು 70-80 ಲಕ್ಷ ಕೊಟ್ಟು ಬಂದರೆ ಇನ್ನೇನಾಗುತ್ತದೆ ಎಂದು ಹೇಳಿದ್ದಾರೆ. ಹೀಗಾಗಿ ಇದು ಹೃದಯಾಘಾತದ ಸಾವಲ್ಲ, ಸರ್ಕಾರದ ಕೊಲೆ ಎಂದು ಹೇಳಲು ಬಯಸುತ್ತೇನೆ. ಯುವಕರಿಗೆ ಉದ್ಯೋಗ ನೀಡಲು, ಪೋಸ್ಟಿಂಗ್ ಮಾಡಲು ಲಂಚ ಪಡೆಯಲಾಗಿದ್ದು, ಎಲ್ಲ ಹಂತದಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.