ಬೆಂಗಳೂರು: ‘ಮಾಧ್ಯಮಗಳು ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಪ್ರಭಾವಿ ಸಚಿವರ ಪಾತ್ರ ಇದೆ ಎಂದು ಬಿಚ್ಚಿಟ್ಟಿದ್ದಾರೆ., ಕುಂಬಳಕಾಯಿ ಕಳ್ಳ ಅಂದ್ರೆ ಅಶ್ವತ್ಥ್ ನಾರಾಯಣ್ ಹೆಗಲು ಮುಟ್ಟಿ ನೋಡಿಕೊಂಡಿದ್ದೇಕೆ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿರುಗೇಟು ನೀಡಿದ್ದಾರೆ.
ಸೋಮವಾರ ಸುದ್ದಿಗೋಷ್ಠಿ ನಡೆಸಿ ಈ ಪ್ರಕರಣದ ವಿಚಾರವಾಗಿ ನನ್ನ ವಿರುದ್ಧ ದಾಖಲೆ ಇದ್ದರೆ ಶಿವಕುಮಾರ್ ಅವರು ಪ್ರಕಟಿಸಲಿ ಎಂದು ಸಚಿವ ಅಶ್ವಥ್ ನಾರಾಯಣ್ ಅವರು ನೀಡಿರುವ ಹೇಳಿಕೆ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ‘ಅವರು ದೊಡ್ಡವರು, ದೊಡ್ಡವರಾಗಬೇಕು ಎಂದುಕೊಂಡಿರುವವರು. ಅವರ ವಿಚಾರವನ್ನು ನಾನು ಬಿಚ್ಚಿಡಲಿಲ್ಲ. ಮಾಧ್ಯಮಗಳು ಮಾಗಡಿಯ ಮೂವರು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಹೇಳಿದಾಗ ಸಂತೋಷವಾಗಿತ್ತು. ಆನಂತರ ನಮ್ಮ ಪಕ್ಷದಲ್ಲಿದ್ದ ಕಾರ್ಯಕರ್ತರ ಕುಟುಂಬದವರು ಆಗಿದ್ದಾರೆ ಎಂದು ಹೇಳಿದ್ದು ಕೇಳಿ ಖುಷಿ ಆಯ್ತು. ಪರಿಸ್ಥಿತಿ ಹೀಗಿರುವಾಗ ಅನುಮಾನಗಳೆಲ್ಲವೂ ತಮ್ಮ ವಿರುದ್ಧವೇ ತಿರುಗುತ್ತಿದೆ ಎಂದು ಸಚಿವರು ಯಾಕೆ ಭಾವಿಸುತ್ತಿದ್ದಾರೆ?’ ಎಂದು ಪ್ರಶ್ನಿಸಿದರು.
ಅಧಿಕಾರದ ದರ್ಪ ಹಾಗೂ ಭ್ರಷ್ಟಾಚಾರ ಡಿ.ಕೆ. ಶಿವಕುಮಾರ್ ಅವರ ಕುಟುಂಬದಲ್ಲಿದೆ ಎಂಬ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ಹೆಣದಲ್ಲಿ ಹಣ, ಸಹಾಯಕ ಪ್ರಾಧ್ಯಾಪಕ ಹುದ್ದೆ ಅಕ್ರಮ ಇವುಗಳನ್ನೆಲ್ಲಾ ನಾನು ಮಾಡಿದ್ದೀನಾ? ಈಗ ಸಾಲು ಸಾಲು ಹಗರಣಗಳು ಬೆಳಕಿಗೆ ಬಂದವಲ್ಲಾ? ಅದನ್ನು ನಾವು ಮಾಡಿದ್ದೇವಾ? ನಮ್ಮ ಸರ್ಕಾರದಲ್ಲಿ ಈ ರೀತಿ ಆಗಿದೆಯಾ? ನಾವು ಕೇಳುತ್ತಿರುವುದು ಪಿಎಸ್ಐ ಅಕ್ರಮದ ಬಗ್ಗೆ ತನಿಖೆ ಮಾಡಿ, ನಂತರ ತೀರ್ಮಾನಿಸಿ ಎಂದು. ದರ್ಶನ್ ಗೌಡಗೆ ನೊಟೀಸ್ ಜಾರಿ ಮಾಡಿದ್ದೀರಿ. ಅವನ ವಿಚಾರಣೆ ಮಾಡಿದ ವರದಿ ಬಂದಿಲ್ಲ. ಆತ ಏಕಾಏಕಿ ಬಿಡುಗಡೆಯಾದ ಎಂದರೆ ಆತ ನಿರ್ದೋಷಿ ಎಂದು ಸಾಬೀತಾಯ್ತಾ? ಅವನ ವಿರುದ್ಧ ಯಾವ ರೀತಿ ತನಿಖೆ ನಡೆದಿದೆ? ಆತ ವಿಚಾರಣೆ ಮುಕ್ತನಾಗಲು ಯಾರು ಕಾರಣ? ಇದರ ಹಿನ್ನೆಲೆ ಏನು?ಯಾರು? ಮಾಧ್ಯಮಗಳು ನಿಮಗೆ ಬರುವ ಮಾಹಿತಿ ಎಲ್ಲಿಂದ ಬಂದಿದೆ ಎಂದು ಮೂಲದ ಬಗ್ಗೆ ಹೇಳುತ್ತೀರಾ? ನಾವು ನಮಗೆ ಯಾರು ಕರೆ ಮಾಡಿ ಹೇಳಿದ್ದಾರೆ ಎಂದು ಹೇಳಲು ಸಾಧ್ಯವೇ? ಸಮಯ ಬಂದಾಗ ಅದನ್ನೂ ಮಾಡುತ್ತೇವೆ’ ಎಂದರು.
ಇದನ್ನೂ ಓದಿ : ಪಿಎಸ್ಐ ಅಕ್ರಮದಲ್ಲಿ ಸಂಬಂಧಿ ಶಾಮೀಲು ಆರೋಪ : ಡಾ. ಅಶ್ವತ್ಥ್ ನಾರಾಯಣ್ ಕಿಡಿ
ರಾಮನಗರಕ್ಕೂ ಶಿವಕುಮಾರ್ ಅವರಿಗೂ ಸಂಬಂಧವಿಲ್ಲ, ಅಮಿತ್ ಶಾ ಬರುತ್ತಾರೆ ಎಂಬ ಕಾರಣಕ್ಕೆ ಈ ರೀತಿ ಪೂರ್ವನಿಯೋಜಿತ ಷಡ್ಯಂತ್ರ ಮಾಡಲಾಗಿದೆ ಎಂಬ ಸುಧಾಕರ್ ಅವರ ಆರೋಪಕ್ಕೆ ಕುರಿತು ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು, ‘ನಾನು ಹಳ್ಳಿಯವನು. ದೊಡ್ಡಾಲಹಳ್ಳಿ ಕೆಂಪೇಗೌಡನ ಮಗ ಶಿವಕುಮಾರ್. ಹಳ್ಳಿಯಿಂದ ಇಲ್ಲಿಗೆ ಬಂದು ರಾಜಕಾರಣ ಮಾಡುತ್ತಿದ್ದೇನೆ. ಅವರು ರಾಮನಗರ ಸ್ವಚ್ಛ ಮಾಡಲು ಬಂದಿದ್ದಾರೆ, ಮಾಡಲಿ ಸಂತೋಷ’ ಎಂದರು.
ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದು ಭಯಪಡುತ್ತಿದ್ದಾರೆ, ಇನ್ನು ಮುಖ್ಯಮಂತ್ರಿ ಆದರೆ ಇನ್ನೆಷ್ಟು ಭಯ ಪಡಬೇಡ ಎಂಬ ಹೇಳಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಾನು ಗಡಗಡನೆ ನಡುಗುತ್ತಿದ್ದೇನೆ. ಈಗಲೂ ಭಯವಾಗುತ್ತಿದೆ’ ಎಂದು ಛೇಡಿಸಿದರು.
ಡಿ.ಕೆ. ಶಿವಕುಮಾರ್ ಅವರ ಬಗ್ಗೆ ಪ್ರತಿನಿತ್ಯ ಬಂಡವಾಳ ಬಿಚ್ಚಿಡುತ್ತೇನೆ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಮೊದಲು ಅವರು ವಿವಿಧ ನೇಮಕಾತಿ ಅಕ್ರಮದಲ್ಲಿ ಯುವಕರಿಗೆ ಆಗುತ್ತಿರುವ ಅನ್ಯಾಯವನ್ನು ತಡೆಯಲಿ, ನಂತರ ಉಳಿದ ವಿಚಾರ ಮಾತನಾಡೋಣ’ ಎಂದರು.