ಬೆಂಗಳೂರು: ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಪಕ್ಷದಲ್ಲಿ ಸ್ಪರ್ಧೆ ಆರಂಭವಾಗಿದ್ದು, ತೆರೆಮರೆಯಲ್ಲಿ ಆಕಾಂಕ್ಷಿಗಳಿಂದ ಹೈಕಮಾಂಡ್‌ನಲ್ಲಿ ಲಾಬಿ ಆರಂಭವಾಗಿದೆ.
ಚುನಾವಣೆ ಮುಗಿಯುತ್ತಿದ್ದಂತೆ ತಾವು ಎಷ್ಟು ದಿನ ಅಧ್ಯಕ್ಷ ಹುದ್ದೆಯಲ್ಲಿ ಇರುತ್ತೇನೋಗೊತ್ತಿಲ್ಲ. ಆದರೆ ಇರುವಷ್ಟು ದಿನಗಳಲ್ಲಿ ಭದ್ರ ಬುನಾದಿ ಹಾಕುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರು. ಈಗ ಅದರ ಮುಂದುವರಿದ ಭಾಗವಾಗಿ ಕೆಲವು ಸಚಿವರು ಸಹಿತ ನಾಯಕರು ತೆರವಾಗಲಿರುವ ಅಧ್ಯಕ್ಷ ಸ್ಥಾನಕ್ಕೆ ಈಗಿನಿಂದಲೇ ಟವಲ್ ಹಾಕುತ್ತಿದ್ದಾರೆ. ಮೇಲ್ಮನೆ ಚುನಾವಣೆ ಪೂರ್ಣಗೊಳ್ಳುತ್ತಿದ್ದಂತೆ ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ಚುರುಕುಗೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಒಬ್ಬರಿಗೆ ಒಂದು ಹುದ್ದೆ ನಿಯಮದಡಿ ವರ್ಷದ ಹಿಂದೆಯೇ ಡಿ.ಕೆ.ಶಿವಕುಮಾರ್ ಅವರ ಅವಧಿ ಮುಗಿಯುವುದಿತ್ತು. ಆದರೆ ಲೋಕಸಭಾ ಚುನಾವಣೆವರೆಗೂ ತಾವು ಮುಂದುವರಿಯುವುದಾಗಿ ಹೇಳಿದ್ದರಿಂದ ಈ ವಿಚಾರ ನೇಪಥ್ಯಕ್ಕೆ ಸರಿದಿತ್ತು. ಈಗ ಚುನಾವಣೆ ಮುಗಿದಿದ್ದು, ಸ್ವತಃ ಅಧ್ಯಕ್ಷರು ಕೂಡ ತೆರವಾಗುವ ಸುಳಿವು ನೀಡಿದ್ದಾರೆ. ಆ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದ್ದು, ಬಹಿರಂಗವಾಗಿಯೇ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಅದರಲ್ಲೂ ಮುಖ್ಯಮಂತ್ರಿ ಬಣದಿಂದ ಅಧ್ಯಕ್ಷ ಹುದ್ದೆಯ ಆಕಾಂಕ್ಷಿಗಳು ಹೆಚ್ಚಿದ್ದಾರೆ. ಈಗಾಗಲೇ ಸಚಿವರಾದ ಕೆ.ಎನ್. ರಾಜಣ್ಣ, ಡಾ| ಎಚ್.ಸಿ.ಮಹದೇವಪ್ಪ, ಎಂ.ಬಿ. ಪಾಟೀಲ್ ಈ ನಿಟ್ಟಿನಲ್ಲಿ ಉತ್ಸುಕರಾಗಿದ್ದಾರೆ.
ನನಗೂ ಆಸೆ ಇದೆ:
ಗುರುವಾರ ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ. ಪಾಟೀಲ್, ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ನಾನೇನೂ ಲಾಬಿ ಮಾಡಿಲ್ಲ. ಲಾಬಿ ಮಾಡುವ ಸಂದರ್ಭವೂ ಇಲ್ಲ. ಲೋಕಸಭೆ ಚುನಾವಣೆ ಬಳಿಕ ಇದು ಚರ್ಚೆಗೆ ಬರಲಿದೆ. ಪಕ್ಷದಲ್ಲಿ ಸಾಕಷ್ಟು ಮಂದಿ ಆಕಾಂಕ್ಷಿಗಳಿ¨ªಾರೆ. ಸಚಿವ ರಾಜಣ್ಣ ಕೂಡ ಹೇಳಿದ್ದಾರೆ. ಹೈಕಮಾಂಡ್ ಬಯಸಿದರೆ ಎಲ್ಲವೂ ಆಗುತ್ತದೆ. ಹೈಕಮಾಂಡ್ ಅಂತಿಮ ನಿರ್ಣಯ ಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.
ನಗರದಲ್ಲಿ ಇದೇ ವಿಚಾರವಾಗಿ ಮಾತನಾಡಿದ ಡಾ| ಎಚ್.ಸಿ.ಮಹದೇವಪ್ಪ, ನಾನು ಕೆಪಿಸಿಸಿ ಅಧ್ಯಕ್ಷನಾಗಬೇಕೆಂಬ ಆಸೆ ಇದೆ. ಎಲ್ಲರಿಗೂ ಮುಕ್ತ ಅವಕಾಶಗಳಿವೆ. ಅದರ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದ್ದು, ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಅದಕ್ಕೆ ನಾವೆಲ್ಲರೂ ಬದ್ಧ ಎಂದು ಹೇಳಿದರು.