Advertisement

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತೆರೆಮರೆ ಕಸರತ್ತು

10:12 AM Dec 12, 2019 | Lakshmi GovindaRaj |

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್‌ ಗುಂಡೂರಾವ್‌ ರಾಜೀನಾಮೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ತೆರೆ ಮರೆಯ ಕಸರತ್ತು ನಡೆದಿದ್ದು, ಪ್ರಮುಖವಾಗಿ ಮೇಲ್ವರ್ಗದ ಸಮುದಾಯಗಳನ್ನು ಪಕ್ಷದ ಕಡೆಗೆ ಸೆಳೆಯಲು ಒಕ್ಕಲಿಗ ಅಥವಾ ಲಿಂಗಾಯತ ಸಮುದಾಯದ ನಾಯಕರಿಗೆ ಜವಾಬ್ದಾರಿ ವಹಿಸಬೇಕೆಂಬ ಬೇಡಿಕೆ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಹೀಗಾಗಿ ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್‌ ಹಾಗೂ ಎಂ.ಬಿ.ಪಾಟೀಲರ ಹೆಸರು ಮುಂಚೂಣಿಯಲ್ಲಿ ಕೇಳಿ ಬರುತ್ತಿವೆ.

Advertisement

ಮೊದಲಿನಿಂದಲೂ ಕಾಂಗ್ರೆಸ್‌ ಪಕ್ಷ ಹಿಂದುಳಿದವರು, ದಲಿತರು ಹಾಗೂ ಅಲ್ಪ ಸಂಖ್ಯಾತ ಸಮುದಾಯದವರನ್ನೇ ಹೆಚ್ಚಾಗಿ ನೆಚ್ಚಿಕೊಂಡಿದ್ದು, ಆ ಲೆಕ್ಕಾಚಾರದಲ್ಲಿಯೇ ಪಕ್ಷದ ನಾಯಕತ್ವ ಹಾಗೂ ಪಕ್ಷ ಅಧಿಕಾರದಲ್ಲಿದ್ದಾಗ ಆ ಸಮುದಾಯದ ನಾಯಕರನ್ನು ಗಮನದಲ್ಲಿಟ್ಟುಕೊಂಡು ಅಧಿಕಾರ ಹಂಚಿಕೆ ಮಾಡುತ್ತ ಬಂದಿರುವುದು. ರಾಜ್ಯದಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಎರಡೂ ಪ್ರಮುಖ ಸಮುದಾಯಗಳು ಕಾಂಗ್ರೆಸ್‌ನಿಂದ ದೂರವಾಗುವಂತೆ ಮಾಡಿದೆ ಎಂಬ ಅಭಿ ಪ್ರಾಯ ಎರಡೂ ಸಮುದಾಯದ ಕಾಂಗ್ರೆಸ್‌ ನಾಯಕರು ಪಕ್ಷದ ವೇದಿಕೆಯಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆಂದು ತಿಳಿದು ಬಂದಿದೆ.

ನಿರ್ಲಕ್ಷ್ಯದ ಇತಿಹಾಸ: ರಾಜ್ಯ ಕಾಂಗ್ರೆಸ್‌ನಲ್ಲಿ ರಾಜ್ಯದ ಎರಡು ಪ್ರಮುಖ ಸಮುದಾಯಗಳನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿದೆ. 80ರ ದಶಕದಿಂದ ವೀರೇಂದ್ರ ಪಾಟೀಲರ ನಂತರ ಕಾಂಗ್ರೆಸ್‌ನಲ್ಲಿ ಲಿಂಗಾಯತ ಸಮುದಾಯವನ್ನು ತೆರೆಗೆ ಸರಿಸಲಾಯಿತು ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಆ ನಂತರ ಲಿಂಗಾಯತ ಸಮುದಾಯ ಜನತಾ ಪರಿವಾರದ ಬೆನ್ನಿಗೆ ನಿಂತು, ನಂತರ ಯಡಿಯೂರಪ್ಪ ನಾಯಕತ್ವದಲ್ಲಿ ಬಿಜೆಪಿ ಬೆನ್ನಿಗೆ ನಿಂತಿದೆ ಎನ್ನುವ ಮಾತು ಕಾಂಗ್ರೆಸ್‌ನಲ್ಲಿನ ಲಿಂಗಾಯತ ನಾಯಕರ ವಾದವಾಗಿದೆ.

ಅದೇ ರೀತಿ ಮಾಜಿ ಸಿಎಂ ಎಸ್‌.ಎಂ.ಕೃಷ್ಣ ನಂತರ ಕಾಂಗ್ರೆಸ್‌ನಲ್ಲಿ ಒಕ್ಕಲಿಗ ಸಮುದಾಯಕ್ಕೂ ಪ್ರಥಮ ಪ್ರಾಧಾನ್ಯತೆ ನೀಡದೇ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಮಾತಗಳು ಕೇಳಿ ಬರುತ್ತಿವೆ. ಅದೇ ಕಾರಣಕ್ಕೆ ಒಕ್ಕಲಿಗ ಸಮುದಾಯವೂ ಕಾಂಗ್ರೆಸ್‌ ಕಡೆಗೆ ಒಲವು ತೋರದೇ ಜೆಡಿಎಸ್‌ ಪಕ್ಷಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆಂಬ ಅಭಿಪ್ರಾಯ ಆ ಸಮುದಾಯದ ನಾಯಕರಲ್ಲಿದೆ. ಅದೇ ಕಾರಣಕ್ಕೆ ಎರಡೂ ಪ್ರಮುಖ ಸಮುದಾಯಗಳ ನಾಯಕರನ್ನು ಪಕ್ಷದಲ್ಲಿ ಎರಡನೇ ದರ್ಜೆಯ ಸ್ಥಾನಗಳಿಗೆ ಮಾತ್ರ ಮಾನ್ಯತೆ ನೀಡಲಾಗುತ್ತಿದೆ ಎಂಬ ಬೇಸರವೂ ಆ ಸಮುದಾಯಗಳ ನಾಯಕರಲ್ಲಿ ಮೂಡಿದೆ ಎನ್ನಲಾಗುತ್ತಿದೆ.

ಡಿಕೆಶಿ ವರ್ಸಸ್‌ ಎಂಬಿಪಿ: ಉಪ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ದಿನೇಶ್‌ ಗುಂಡೂರಾವ್‌ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದು, ಇನ್ನೂ ಈ ಬಗ್ಗೆ ಹೈಕಮಾಂಡ್‌ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಆದರೆ, ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್‌ ಹಾಗೂ ಎಂ.ಬಿ.ಪಾಟೀಲರ ನಡುವೆ ಒಬ್ಬರಿಗೆ ಜವಾ ಬ್ದಾರಿ ನೀಡಬೇಕೆಂಬ ಮಾತುಗಳು ಪಕ್ಷದ ವಲಯದಲ್ಲಿ ಕೇಳಿ ಬರುತ್ತಿವೆ. ಡಿ.ಕೆ.ಶಿವಕುಮಾರ್‌ ಅವರು ಅಕ್ರಮ ಹಣ ವರ್ಗಾ ವಣೆ ಆರೋಪದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆಯಾಗಿರುವುದರಿಂದ ಅವರಿಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಪಕ್ಷದ ಒಂದು ವಲಯದಲ್ಲಿ ಆಕ್ಷೇಪವಿದೆ. ಆದರೆ, ಕಾಂಗ್ರೆಸ್‌ಗೆ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯಲು ಡಿ.ಕೆ.ಶಿವಕುಮಾರ್‌ ಅವ ರಿಂದ ಮಾತ್ರ ಸಾಧ್ಯ ಎಂಬ ಅಭಿಪ್ರಾಯ ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ.

Advertisement

ಡಿ.ಕೆ.ಶಿವಕುಮಾರ್‌ ವಿರುದ್ಧದ ಆರೋಪ ಸಾಬೀತಾಗದೇ ಇರುವುದರಿಂದ ಅವರು ಜೈಲಿಗೆ ಹೋದ ನಂತರ ಒಕ್ಕಲಿಗ ಸಮುದಾಯಕ್ಕೆ ಅವರ ಮೇಲೆ ಅನುಕಂಪ ಹೆಚ್ಚಾಗಿದ್ದು, ಅದು ಪಕ್ಷದ ಕಡೆಗೆ ಸಮುದಾಯವನ್ನು ಸೆಳೆಯಲು ಅವರಿಗೆ ಅನುಕೂಲವಾಗುವ ಸಾಧ್ಯತೆ ಯಿದೆ ಎಂಬ ಅಭಿಪ್ರಾಯ ಕಾಂಗ್ರೆಸ್‌ನ ಒಕ್ಕಲಿಗ ಸಮುದಾಯದ ನಾಯಕರಲ್ಲಿ ಕೇಳಿ ಬರುತ್ತಿದೆ. ಒಂದು ವೇಳೆ ಹೈಕಮಾಂಡ್‌ ಮಟ್ಟದಲ್ಲಿ ಒಕ್ಕಲಿಗ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕೆಂಬ ಅಭಿ ಪ್ರಾಯ ಕೇಳಿ ಬಂದರೆ, ಮಾಜಿ ಸಚಿವ ಹಾಗೂ ಸಿದ್ದರಾಮಯ್ಯ ಆಪ್ತ ಕೃಷ್ಣ ಬೈರೇಗೌಡ ಅವರ ಹೆಸರೂ ಮುಂಚೂಣಿಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನು ವೀರಶೈವ ಲಿಂಗಾಯತ ಸಮುದಾಯದಲ್ಲಿ ಕಾಂಗ್ರೆಸ್‌ನಲ್ಲಿ ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್‌ ಅವರಿಗೆ ಜವಾಬ್ದಾರಿ ವಹಿಸಬೇಕೆಂಬ ಬೇಡಿಕೆ ಪಕ್ಷದಲ್ಲಿ ರುವ ಆ ಸಮುದಾಯದ ನಾಯಕರಿಂದ ಕೇಳಿ ಬರು ತ್ತಿದೆ. ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಸಮುದಾಯದ ಸಂಘ ಟನೆಯಲ್ಲಿ ಪ್ರಮುಖ ಪಾತ್ರ ವಹಿಸಿರುವುದು ಅವರ ಮೇಲೆ ಸಮುದಾಯದ ನಂಬಿಕೆ ಹೆಚ್ಚುವಂತೆ ಮಾಡಿದೆ ಎನ್ನಲಾಗುತ್ತಿದೆ. ಹೀಗಾಗಿ ಅವರಿಗೆ ಪಕ್ಷದ ಜವಾಬ್ದಾರಿ ವಹಿಸಿದರೆ, ಪಕ್ಷದಿಂದ ವಿಮುಖವಾಗಿರುವ ವೀರಶೈವ ಲಿಂಗಾಯತ ಸಮುದಾಯವನ್ನು ಸೆಳೆಯಬಹುದು ಎನ್ನುವುದು ಅವರ ವಾದ.

ಇವರಿಗೆ ಪರ್ಯಾಯವಾಗಿ ಹಾಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಅವರಿಗೂ ಅವಕಾಶ ನೀಡಬಹುದೆಂಬ ಚರ್ಚೆ ನಡೆಯುತ್ತಿದ್ದು, ವೀರಶೈವ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಸಂದರ್ಭದಲ್ಲಿ ಎರಡೂ ವರ್ಗಗಳೊಂದಿಗೆ ಸಮ ನ್ವಯತೆಯಿಂದ ನಡೆದುಕೊಂಡರು ಎನ್ನುವ ಕಾರಣಕ್ಕೆ ಅವರನ್ನು ಪರಿಗಣಿಸಬಹುದು ಎನ್ನುವುದು ವೀರಶೈವ ಲಿಂಗಾಯತ ನಾಯಕರ ಒಂದು ಗುಂಪಿನ ವಾದವಾಗಿದೆ.

ಎರಡು ಹುದ್ದೆಯ ಮೇಲೆ ಎಚ್ಕೆ, ಪರಂ ಕಣ್ಣು: ಮಾಜಿ ಸಚಿವ ಎಚ್‌.ಕೆ.ಪಾಟೀಲ್‌ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಇಬ್ಬರೂ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ತಮ್ಮ ಹಿರಿ ತನದ ಆಧಾರದಲ್ಲಿ ಈ ಬಾರಿ ಹೈಕಮಾಂಡ್‌ ಅಧ್ಯಕ್ಷ ಅಥವಾ ಶಾಸಕಾಂಗ ಪಕ್ಷದ ನಾಯಕನ ಸ್ಥಾನ ನೀಡುವ ವಿಶ್ವಾಸವನ್ನು ಎಚ್‌.ಕೆ.ಪಾಟೀಲ್‌ ಹೊಂದಿದ್ದು, ಪರಮೇಶ್ವರ್‌ ಕೂಡ ಮತ್ತೂಂದು ಬಾರಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಶಾಸಕಾಂಗ ಪಕ್ಷದ ನಾಯಕನ ಸ್ಥಾನವನ್ನಾದರೂ ಹೈಕಮಾಂಡ್‌ ನೀಡುತ್ತದೆ ಎಂಬ ಆಶಾಭಾವನೆ ಇಟ್ಟುಕೊಂಡಿದ್ದಾರೆ.

* ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next