Advertisement

ಬಿಜೆಪಿಯ ಹಿಂದುತ್ವ ಎದುರಿಸಲು ಒಗ್ಗಟ್ಟಾಗಿ

06:00 AM Jul 22, 2018 | Team Udayavani |

ಬೆಂಗಳೂರು: ಬಿಜೆಪಿಯ ಹಿಂದುತ್ವ ಎದುರಿಸಲು ಒಗ್ಗಟ್ಟಾಗಿ ಹೋರಾಡುವಂತೆ ಕಾಂಗ್ರೆಸ್‌ ನಾಯಕರು ಪಕ್ಷದ ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Advertisement

ನಗರದ ಗುರುನಾನಕ್‌ ಭವನದಲ್ಲಿ ನಡೆದ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್‌ ನಾಯಕರು, ವಿಧಾನಸಭೆ ಚುನಾವಣೆಯ ಸೋಲಿನಿಂದ ಧೃತಿಗೆಡದೆ ಲೋಕಸಭೆ ಚುನಾವಣೆಗೆ ಸನ್ನದ್ಧರಾಗುವಂತೆ ಕರೆ ನೀಡಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಐದು ವರ್ಷದಲ್ಲಿ ಅನೇಕ ಜನಪ್ರಿಯ ಯೋಜನೆಗಳನ್ನು ಕೊಟ್ಟಿದ್ದರೂ, ಬಿಜೆಪಿಯ ಸುಳ್ಳು ಹಿಂದುತ್ವದ ಅಪಪ್ರಚಾರದಿಂದ ಕಾಂಗ್ರೆಸ್‌ಗೆ ಹಿನ್ನಡೆಯಾಗುವಂತಾಯಿತು.

ನರೇಂದ್ರ ಮೋದಿ ಸರ್ಕಾರದ ವೈಫ‌ಲ್ಯಗಳನ್ನು ಪಟ್ಟಿ ಮಾಡಿ ಜನರಿಗೆ ಹೇಳಿದರೂ, ಬಿಜೆಪಿಯ ಭಾವನಾತ್ಮಕ ವಿಷಯಗಳ
ಮುಂದೆ ಪ್ರಯೋಜನವಾಗಲಿಲ್ಲ. ಆದರೆ, ಲೋಕಸಭೆ ಚುನಾವಣೆಯಲ್ಲಿ ಆ ರೀತಿ ಆಗುವುದಿಲ್ಲ. ಮೋದಿಯವರು ಕಳೆದ ಐದು ವರ್ಷದಲ್ಲಿ ಹೇಳಿದ್ದೇನು, ಮಾಡಿದ್ದೇನು ಎನ್ನುವುದನ್ನು ಜನರಿಗೆ ತಿಳಿಸುವ ಕೆಲಸವನ್ನು ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದರು.

ಪ್ರಧಾನಿ ಮೋದಿಯನ್ನು ನಾಟಕಕಾರ ಎಂದು ಬಣ್ಣಿಸಿದ ಅವರು, “ಅಂತಹ ನಾಟಕಕಾರನನ್ನು ನಾನು ನೋಡಿಯೇ ಇಲ್ಲ. ಆದರೆ, ಬಣ್ಣದ ಮಾತುಗಳಿಂದ ಜನರನ್ನು ಹೆಚ್ಚು ದಿನ ಮರಳು ಮಾಡಲು ಸಾಧ್ಯವಿಲ್ಲ. ಏಕೆಂದರೆ ಜನರಿಗೆ ಬೇಕಾಗಿರುವುದು ಕಾಮ್‌ ಕಿ ಬಾತ್‌, ಮನ್‌ ಕಿ ಬಾತ್‌ ಅಲ್ಲ’ ಎಂದರು.

Advertisement

ಕೇಂದ್ರ ಸರ್ಕಾರದಿಂದ ರಾಜ್ಯದ ರೈತರಿಗೆ ಕಳೆದ ಐದು ವರ್ಷದಲ್ಲಿ ಸಾಕಷ್ಟು ಅನ್ಯಾಯವಾಗಿದೆ. ಈ ಬಗ್ಗೆ ಪ್ರಧಾನಿಗೆ ಹಲವು ಬಾರಿ ಪತ್ರ ಬರೆದರೂ ಅವರಿಂದ ಉತ್ತರವೇ ಬರಲಿಲ್ಲ. ಕೇಂದ್ರದ ಯೋಜನೆಗಳು ಬೋಗಸ್‌ ಆಗಿರುವುದರಿಂದ ರಾಜ್ಯದ ಜನತೆಗೆ ಅದರಿಂದ ಜನತೆಗೆ ಯಾವುದೇ ಪ್ರಯೋಜನವಿಲ್ಲ ಎಂದರು.

ಚುನಾವಣೆ ಸಂದರ್ಭದಲ್ಲಿ ಮೋದಿ ರಾಜ್ಯ ಸರ್ಕಾರವನ್ನು ಪರ್ಸೆಂಟೇಜ್‌ ಸರ್ಕಾರ ಎಂದು ಟೀಕಿಸಿದರು. ಆದರೆ, ಲೋಕಪಾಲ್‌ ಮಸೂದೆ ಬಗ್ಗೆ ಇದುವರೆಗೂ ಚಕಾರ ಎತ್ತಿಲ್ಲ. ಬಿಜೆಪಿ ಸಮಾಜಕ್ಕೆ ಶಾಪವಾಗಿದ್ದು ಲೋಕಸಭೆ ಚುನಾವಣೆಯಲ್ಲಿ ಆ ಪಕ್ಷವನ್ನು ಸೋಲಿಸುವುದೇ ನಮ್ಮ ಗುರಿಯಾಗಬೇಕು ಎಂದು ಸೂಚಿಸಿದರು.

ಇದೇ ವೇಳೆ, ನಿಗಮ ಮಂಡಳಿಯಲ್ಲಿ ಕೇವಲ ಶಾಸಕರಿಗೆ ಅವಕಾಶ ಕೊಡದಂತೆ ಪದಾಧಿಕಾರಿಗಳು ಸಭೆಯಲ್ಲಿ ಒತ್ತಾಯ
ಮಾಡಿದ್ದು, ಪಕ್ಷದ ಕಾರ್ಯಕರ್ತರಿಗೂ ನಿಗಮ-ಮಂಡಳಿಯಲ್ಲಿ ಸ್ಥಾನ ಕಲ್ಪಿಸುವ ಭರವಸೆ ನೀಡಲಾಯಿತು ಎಂದು ತಿಳಿದು ಬಂದಿದೆ.

ಭಾನುವಾರ ನಡೆಯುವ ಸಿಡಬ್ಲೂéಸಿ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ಸಭೆಯ ಅಜೆಂಡಾ ಏನಿದೆ ಎಂದು ಗೊತ್ತಿಲ್ಲ. ಶಾಲಾ ಮಕ್ಕಳಿಗೆ ಉಚಿತ ಬಸ್‌ ಪಾಸ್‌ ನೀಡದಿರುವ ಬಗ್ಗೆ ಮಾಹಿತಿ ಯಿಲ್ಲ. ಜಮಖಂಡಿ ವಿಧಾನಸಭೆ ಉಪ ಚುನಾವಣೆಗೆ ಸಿದ್ದು ನ್ಯಾಮಗೌಡ ಅವರ ಪುತ್ರ ಆನಂದ ನ್ಯಾಮಗೌಡ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.
–  ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

ಶಾಸಕಾಂಗ ಪಕ್ಷದ ನಾಯಕರ ಬದಲಾವಣೆ ವಿಚಾರ ಇಲ್ಲ. ಆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಸಿದ್ದರಾಮಯ್ಯ ಹಾಗೂ
ಮಲ್ಲಿಕಾರ್ಜುನ ಖರ್ಗೆ ಸಿಡಬ್ಲೂéಸಿ ಸದಸ್ಯರಾಗಿರುವುದರಿಂದ ದೆಹಲಿಗೆ ಹೋಗುತ್ತಿದ್ದಾರೆ.

– ಡಾ.ಜಿ. ಪರಮೇಶ್ವರ್‌, ಉಪ ಮುಖ್ಯಮಂತ್ರಿ

ಲೋಕಸಭೆ ಚುನಾವಣೆಗೆ ಜೆಡಿಎಸ್‌ ಜೊತೆ ಮೈತ್ರಿ ಮಾಡಿಕೊಳ್ಳುವುದು ಹೈ ಕಮಾಂಡ್‌ಗೆ ಬಿಟ್ಟ ನಿರ್ಧಾರ. ಕೇಂದ್ರದಲ್ಲಿ ಅಧಿಕಾರ ಹಿಡಿಯುವುದೇ ನಮ್ಮ ಮಂತ್ರವಾಗಬೇಕು. ನಾಯಕರ ಹಿಂದೆ ತಿರುಗುವುದು ಬಿಟ್ಟು ಪಕ್ಷಕ್ಕಾಗಿ ದುಡಿಯಬೇಕು.
– ಕೆ.ಸಿ. ವೇಣುಗೋಪಾಲ್‌,
ರಾಜ್ಯ ಕಾಂಗ್ರೆಸ್‌ ಉಸ್ತುವಾರಿ

Advertisement

Udayavani is now on Telegram. Click here to join our channel and stay updated with the latest news.

Next