ಕಲಬುರಗಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನೂತನ ಅಧ್ಯಕ್ಷ ಡಿ.ಕೆ. ಶಿವಕುಮಾರ, ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ ಹಾಗೂ ಸಲೀಂ ಅಹ್ಮದ್ ಅವರ ಪದಗ್ರಹಣ ಸಮಾರಂಭ ವೀಕ್ಷಣೆಗೆ ಜಿಲ್ಲಾದ್ಯಂತ 300ಕ್ಕೂ ಹೆಚ್ಚು ಕಡೆಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಬೆಂಗಳೂರಿನಲ್ಲಿ ಗುರುವಾರ ನಡೆದ ಕೆಪಿಸಿಸಿ ಸಾರಥಿಗಳು “ಪ್ರತಿಜ್ಞಾ” ಎಂಬ ಹೆಸರಲ್ಲಿ ಅಧಿಕಾರ ಸ್ವೀಕರಿಸಿದರು. ಈ ಕಾರ್ಯಕ್ರಮವನ್ನು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಮತ್ತು ವಾರ್ಡ್, ತಾಲೂಕು, ಹೋಬಳಿ ಹಾಗೂ ಗ್ರಾಪಂ ಮಟ್ಟದಲ್ಲಿ ಎಲ್‌ಇಡಿ ಪರದೆ, ಟಿವಿ ಹಾಗೂ ಝೂಮ್ ಆ್ಯಪ್ ಬಳಸಿ ಮುಖಂಡರು, ಕಾರ್ಯಕರ್ತರು ವೀಕ್ಷಿಸಿದರು. ಹಲವರು ತಮ್ಮ ಊರುಗಳಲ್ಲಿಯೇ ಸುದ್ದಿ ವಾಹಿನಿಗಳ ನೇರಪ್ರಸಾರದ ವೀಕ್ಷಣೆ ಮಾಡಿದರು. ಕಾರ್ಯಕ್ರಮಕ್ಕೂ ಮುನ್ನ ಚೀನಾ ಗಡಿಯಲ್ಲಿ ಹುತಾತ್ಮರಾದ 20 ಯೋಧರನ್ನು ಸ್ಮರಿಸಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿì ಶಂಕರ ದೊಡ್ಡಿ, ವೆನಿಲ್ಲಾ ಸೂರ್ಯವಂಶಿಕ, ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಪ್ರಚಾರ ಸಮಿತಿ ಅಧ್ಯಕ್ಷ ಜಗನ್ನಾಥ ಗೋಧಿ, ಮಾಜಿ ಎಂಎಲ್‌ಸಿ ಅಲ್ಲಂಪ್ರಭು ಪಾಟೀಲ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನೀಲಕಂಠ ಮೂಲಗೆ ಹಾಗೂ ಮತ್ತಿತರರು ದೊಡ್ಡ ಟಿವಿ ಪರದೆ ಮೂಲಕ ಕಾರ್ಯಕ್ರಮ ವೀಕ್ಷಿಸಿದರು.
ಕಾಂಗ್ರೆಸ್ ಮುಖಂಡರಾದ ಅಲಂ ಖಾನ್, ಡಾ| ಕಿರಣ ದೇಶಮುಖ, ಮಹಾಂತಪ್ಪ ಸಂಗಾವಿ, ಈರಣ್ಣ ಝಳಕಿ, ಲತಾ ರವಿ ರಾಠೊಡ, ಸಂಗೀತಾ ಪಾಟೀಲ, ಭೀಮರಾವ್ ತೇಗಲತಿಪ್ಪಿ, ಶಾಂತಪ್ಪ ಕೂಡಲಗಿ, ಚೇತನಕುಮಾರ ಗೋನಾಯಕ ಮತ್ತಿತರರು ಇದ್ದರು.
ವಾರ್ಡ್ ನಂ.46ರ ರಾಜಾಪುರ ಬಡಾವಣೆಯಲ್ಲಿ ಮಾಜಿ ಪಾಲಿಕೆ ಸದಸ್ಯ ರಾಹುಲ್ ಹೊನ್ನಳ್ಳಿ ನೇತೃತ್ವದಲ್ಲಿ ಡಿ.ಕೆ. ಶಿವುಕುಮಾರ ಅವರ 55 ಅಡಿ ಎತ್ತರದ ಭಾವಚಿತ್ರ ಸ್ಥಾಪಿಸಿ ಹೂವಿನ ಹಾರ ಹಾಕಲಾಯಿತು. ಕಪನೂರನಲ್ಲಿ ಡಿಕೆಶಿ ಹಾಗೂ ರಾಜ್ಯಸಭೆ ಸದಸ್ಯ ಡಾ| ಮಲ್ಲಿಕಾರ್ಜುನ ಖರ್ಗೆ ಅವರ ಕಟೌಟ್‌ಗೆ ಮಾಜಿ ಪಾಲಿಕೆ ಸದಸ್ಯ ರಾಜಕುಮಾರ ಕಪನೂರ ನೇತೃತ್ವದಲ್ಲಿ ಹಾಲಿನ ಅಭಿಷೇಕ ಮಾಡಲಾಯಿತು.