ಹೊಸಪೇಟೆ: ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಅವರನ್ನು ಯಾವುದೇ ಕಾರಣಕ್ಕೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಬಾರದು ಎಂದು ಆಗ್ರಹಿಸಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು, ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್ ಅವರ ಕಾರು ತಡೆದು ಘೇರಾವ್ ಹಾಕಿದ ಘಟನೆ ನಗರದಲ್ಲಿ ಗುರುವಾರ ನಡೆಯಿತು.
ಫೆ.10ರಂದು ನಗರದಲ್ಲಿ ಆಯೋಜಿಸಲಿರುವ ಎಸ್‌ಟಿ ಸಮಾವೇಶದಲ್ಲಿ ಭಾಗಿಯಾಗಲು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆ ಆಗಮಿಸಿದ ವೇಳೆ ಈ ಘಟನೆ ನಡೆದಿದೆ.
ಹೊಸಪೇಟೆಯ ಮುನ್ಸಿಫಲ್ ಹೈಸ್ಕೂಲ್ ಮೈದಾನದಲ್ಲಿ ಸ್ಥಳ ಪರಿಶೀಲನೆಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಾ| ಜಿ.ಪರಮೇಶ್ವರ್ ಎದುರು ಕಾಂಗ್ರೆಸ್ ಕಾರ್ಯಕರ್ತರು ಆನಂದ್‌ಸಿಂಗ್‌ಗೆ ಡೌನ್ ಡೌನ್, ಧಿಕ್ಕಾರ ಧಿಕ್ಕಾರ ಎಂದು ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿ ಕಾಂಗ್ರೆಸ್ ಸಂಘಟನೆ ಮಾಡಿದ ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡಬೇಕು. ಆನಂದ್‌ಸಿಂಗ್‌ಗೆ ನೀಡಬಾರದು ಎಂದು ಆಗ್ರಹಿಸಿದರು.
ಡಾ| ಜಿ.ಪರಮೇಶ್ವರ್ ಅವರ ಕಾರು ತಡೆದ ಕಾರ್ಯಕರ್ತರನ್ನು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಚದುರಿಸಿದರು. ನಂತರ ಪ್ರವಾಸಿ ಮಂದಿರದಲ್ಲಿ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಲು ಹೋದ ಕಾರ್ಯಕರ್ತರನ್ನು ಪೊಲೀಸರು ಗೇಟಿನಲ್ಲಿ ತಡೆದರು. ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಸಹಕಾರಿ ಸಚಿವ ರಮೇಶ ಜಾರಕಿಹೊಳಿ ಸೇರಿದಂತೆ ಇತರೆ ಮುಖಂಡರು ಹೆಲಿಕಾಪ್ಟರ್ ಮೂಲಕ ತಾಲೂಕು ಕ್ರೀಡಾಂಗಣಕ್ಕೆ ಆಗಮಿಸುತ್ತಿದ್ದಂತಯೇ ಸ್ಥಳದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು, ಪಕ್ಷದ ಆಕಾಂಕ್ಷಿಗಳಿಗೆ ಮುಂದಿನ ಚುನಾವಣೆಗೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.
ಶಾಸಕ ಆನಂದಸಿಂಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡುವ ಸಿದ್ಧತೆ ನಡೆದಿದೆ. ಇದರಿಂದಾಗಿ ಪಕ್ಷದ ಪ್ರಮಾಣಿಕರ ಕಾರ್ಯಕರ್ತರಿಗೆ ಅನ್ಯಾಯವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಸಚಿವ ರಮೇಶ ಜಾರಕಿಹೊಳೆ, ಕೆಪಿಸಿಸಿ ರಾಜ್ಯ ಕಾರ್ಯದರ್ಶಿ ಗುಜ್ಜಲ ರಘು, ಶಾಸಕರಾದ ಪರಮೇಶ್ವರ್ ನಾಯ್ಕ, ಈ.ತುಕಾರಾಂ, ಜಿಲ್ಲಾಧ್ಯಕ್ಷ ಶಿವಯೋಗಿ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎನ್. ಎಫ್.ಇಮಾಮ್ ನಿಯಾಜಿ, ಮುಖಂಡರಾದ ಗುಜ್ಜಲ್ ನಾಗರಾಜ, ಎಲ್.ಸಿದ್ದನಗೌಡ, ಅಯ್ನಾಳಿ ತಿಮ್ಮಪ್ಪ, ಹುಡಾ ಅಧ್ಯಕ್ಷ ವೆಂಕಟೇಶರೆಡ್ಡಿ ಇತರರಿದ್ದರು.