Advertisement

KPCC ಪ್ರಚಾರ ಸಮಿತಿ: ಶೀಘ್ರ “ಕಾಯಕಲ್ಪ”

10:46 PM Sep 03, 2023 | Team Udayavani |

ಬೆಂಗಳೂರು: ಕೆಪಿಸಿಸಿ ಪ್ರಚಾರ ಸಮಿತಿಯ ಕಾರ್ಯಚಟುವಟಿಕೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿರುವ ಸಮಿತಿ ಅಧ್ಯಕ್ಷ ಹಾಗೂ ಸಚಿವ ಎಂ.ಬಿ. ಪಾಟೀಲ್‌, ಶೀಘ್ರದಲ್ಲೇ ಪೂರ್ಣಪ್ರಮಾಣದಲ್ಲಿ ವಿಸ್ತರಿಸಿ ಸಕ್ರಿಯಗೊಳಿಸುವುದಾಗಿ ಹೇಳಿದ್ದಾರೆ.

Advertisement

ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪಕ್ಷದ ಪ್ರಚಾರ ಸಮಿತಿಗಳ ಪದಾಧಿಕಾರಿಗಳಿಗೆ ರವಿವಾರ ಕೆಪಿಸಿಸಿ ಕಚೇರಿಯ ಭಾರತ್‌ ಜೋಡೊ ಸಭಾಂಗಣದಲ್ಲಿ ಏರ್ಪಡಿಸಿದ್ದ ಅಭಿನಂದನೆ ಸಮಾರಂಭ ಹಾಗೂ ಲೋಕಸಭಾ ಚುನಾವಣ ಪೂರ್ವತಯಾರಿ ಸಭೆಯಲ್ಲಿ ಅವರು ಮಾತನಾಡಿದರು.

ಕೆಪಿಸಿಸಿ ಪ್ರಚಾರ ಸಮಿತಿ ಸದ್ಯಕ್ಕೆ ಹೊಂದಿರುವ ಕಾರ್ಯ ಚಟುವಟಿಕೆಗಳು ಸಮಾಧಾನಕರವಾಗಿಲ್ಲ. ಇನ್ನಷ್ಟು ಪರಿ ಣಾಮಕಾರಿಯಾಗಿ ಕಾರ್ಯನಿರ್ವಹಿಸುವ ಅಗತ್ಯವಿದೆ. ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟು ಸಮಿತಿಯನ್ನು ಪೂರ್ಣಪ್ರಮಾಣದಲ್ಲಿ ವಿಸ್ತರಿಸಿ ಸಕ್ರಿಯಗೊಳಿಸಲಾಗುವುದು. ಈ ಸಂಬಂಧ ಎಐಸಿಸಿ ಮತ್ತು ಕೆಪಿಸಿಸಿ ಅಧ್ಯಕ್ಷರ ಜತೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ಮಾತನಾಡಿದ ಅವರು, 75 ವರ್ಷಗಳಲ್ಲಿ ಭಾರತವನ್ನು ಕಟ್ಟಿದ್ದು ಕಾಂಗ್ರೆಸ್‌ ಪಕ್ಷವೇ ಹೊರತು, 9 ವರ್ಷಗಳಿಂದ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅಲ್ಲ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಉದಾತ್ತ ಇತಿಹಾಸ ಕಾಂಗ್ರೆಸ್‌ಗೆ ಇದೆ. ಇದಾದ ಮೇಲೆ ದೇಶದ ಚುಕ್ಕಾಣಿ ಹಿಡಿದ ಜವಾಹರಲಾಲ್‌ ನೆಹರೂ ಸಹಿತ ಅನೇಕರು ಅರ್ಥಪೂರ್ಣ ಕೆಲಸಗಳನ್ನು ಮಾಡುವ ಮೂಲಕ ಭಾರತವನ್ನು ದೈತ್ಯ ಆರ್ಥಿಕ ಶಕ್ತಿಯಾಗಿ ಬೆಳೆಸಿದರು. ಇದನ್ನು ಮೋದಿ ಸೇರಿ ಬಿಜೆಪಿ ನಾಯಕರು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದರು.

ಸಾಧನೆಗಳ ಕರಪತ್ರ ಶೀಘ್ರ
ಬುದ್ಧ, ಬಸವಣ್ಣ, ಡಾ| ಬಿ.ಆರ್‌. ಅಂಬೇಡ್ಕರ್‌, ನಾರಾಯಣ ಗುರುಗಳು ಮತ್ತು ಕುವೆಂಪು ಅವರ ಸಿದ್ಧಾಂತಗಳೇ ಕಾಂಗ್ರೆಸ್‌ ಸಿದ್ಧಾಂತಗಳಾಗಿವೆ. ನಮ್ಮ ಸಾಧನೆ ಮತ್ತು ಮೋದಿಯವರ ವೈಫ‌ಲ್ಯಗಳನ್ನು ಜನಸಾಮಾನ್ಯರಿಗೆ ಸರಳ ಭಾಷೆಯಲ್ಲಿ ಸಂಕ್ಷಿಪ್ತವಾಗಿ ವಿವರಿಸುವ ಕರಪತ್ರಗಳನ್ನು ಸದ್ಯದಲ್ಲೇ ಹೊರತರಲಾಗುವುದು ಎಂದು ತಿಳಿಸಿದರು.
ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ….ಶಂಕರ್‌, ವಿಧಾನ ಪರಿಷತ್‌ ಸದಸ್ಯ ಮಂಜುನಾಥ ಭಂಡಾರಿ, ಸುಧಾಮದಾಸ್‌, ಪ್ರಕಾಶ್‌ ರಾಠೊಡ್‌, ಮಾಜಿ ಸಚಿವ ಕಿಮ್ಮನೆ ರತ್ನಾಕರ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಕೆಪಿಸಿಸಿ ಮಾಧ್ಯಮ ಉಪಾಧ್ಯಕ್ಷ ರಮೇಶಬಾಬು, ಸಮನ್ವಯಕಾರ ಎ.ಪಿ. ಬಸವರಾಜು ಮತ್ತಿತರರಿದ್ದರು.

Advertisement

ಕಾರ್ಯಕರ್ತರು ಹಿಂದೆಯೇ ಉಳಿಯುತ್ತಿದ್ದಾರೆ
ಕೇವಲ ಸಚಿವರು ಮತ್ತು ಶಾಸಕರ ಬೆಂಬಲಿಗರಿಗೆ ನಿಗಮ-ಮಂಡಳಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳು ಸಿಗುತ್ತವೆ. ಇದರಿಂದ ದಶಕಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರು ಹಿಂದೆಯೇ ಉಳಿಯುತ್ತಿದ್ದಾರೆ ಎಂದು ಸಭೆಯಲ್ಲಿ ಪದಾಧಿಕಾರಿಯೊಬ್ಬರು ಆಕ್ರೋಶ ಹೊರಹಾಕಿದರು. ನಾಯಕರ ಭಾಷಣದ ನಡುವೆ ಸಭಿಕರ ಸಾಲಿನಿಂದ ಎದ್ದುನಿಂತ ಪದಾಧಿಕಾರಿಯೊಬ್ಬರು, ಪಕ್ಷದಲ್ಲಿ 25-30 ವರ್ಷಗಳಿಂದ ಗುರುತಿಸಿಕೊಂಡಿರುವ ನಿಷ್ಠಾವಂತ ಸಾಮಾನ್ಯ ಕಾರ್ಯಕರ್ತನಿಗೆ ನಿಗಮ- ಮಂಡಳಿಗಳ ಸ್ಥಾನಗಳು ಸಿಗುವಂತಾಗಬೇಕು ಎಂದರು. ಇದಕ್ಕೂ ಮುನ್ನ ಮಾತನಾಡಿದ ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್‌. ಶಂಕರ್‌, ಶಾಸಕರು ಅನ್ಯತಾ ಭಾವಿಸಬಾರದು. ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಮಾಜಿ ಸಚಿವರು ನಿಗಮ- ಮಂಡಳಿಗೆ ಬೇಡಿಕೆ ಇಡಬಾರದು. ಇದ್ದ ಸ್ಥಾನಕ್ಕಿಂತ ಮೇಲಿನ ಸ್ಥಾನಕ್ಕೆ ಹೋಗಬೇಕೆ ಹೊರತು ಕೆಳಗೆ ಬರಬಾರದು. ಜತೆಗೆ ಸಚಿವರನ್ನು ಶಾಸಕರು ದೂರದಂತೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next