Advertisement

ಗ್ರಾ.ಪಂ ಚುನಾವಣೆ: ಕೆಪಿಸಿಸಿಯಿಂದ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಗೆ ಉಸ್ತುವಾರಿಗಳ ನೇಮಕ

06:16 PM Dec 05, 2020 | Mithun PG |

ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ. ಶಿವಕುಮಾರ್ ವಿವಿಧ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಿಗೆ ಕೆಪಿಸಿಸಿ ವತಿಯಿಂದ ಉಸ್ತುವಾರಿಗಳನ್ನು ನೇಮಿಸುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಠಿಸುವ ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತಾಹ ತುಂಬಿಸುವ ಕೆಲಸವನ್ನು ಮಾಡಿದ್ದಾರೆ.

Advertisement

ಆ ಮೂಲಕ  ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಯಾರ ಉಸ್ತುವಾರಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯನ್ನು ಎದುರಿಸಬೇಕೆಂಬ ಎಂಬ ಚರ್ಚೆ ಮತ್ತು ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಾಣಕ್ಯ ರಾಜಕಾರಣಿ ಎಂದು ಖ್ಯಾತಿ ಹೊಂದಿರುವ ವಿಧಾನ ಪರಿಷತ್‍ನ ಮಾಜಿ ಸಭಾಪತಿ ವಿ.ಆರ್ ಸುದರ್ಶನ್ ಅವರನ್ನು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ, ಟ್ರಬಲ್ ಶೂಟರ್ ಹಾಗೂ ನೇರ ನುಡಿಯ ರಾಜಕಾರಣಿಯೆಂದು ಹೆಸರುಗಳಿಸಿರುವ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆಯ ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಅವರನ್ನು ಚಿಂತಾಮಣಿಯ ವಿಧಾಸಭಾ ಕ್ಷೇತ್ರಕ್ಕೆ ಉಸ್ತುವಾರಿಗಳಾಗಿ ನೇಮಕ ಮಾಡಿದ್ದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಕೆಪಿಸಿಸಿಯ ವಕ್ತಾರರು ಸಹ ಆಗಿರುವ ವಿ.ಆರ್.ಸು ದರ್ಶನ್ ಅವರಿಗೆ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸುವ ಹೊಣೆಗಾರಿಕೆಯನ್ನು ನೀಡಿ ಉಸ್ತುವಾರಿ ವಹಿಸಲಾಗಿದೆ. ಅದೇ ರೀತಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ರಾಜಕಾರಣದಲ್ಲಿ ಸ್ವಾಮಿಗಳು ಎಂದು ಖ್ಯಾತಿ ಹೊಂದಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿರುವುದು ಕುತೂಹಲ ಕೆರಳಿಸಿದೆ.

ಇದನ್ನೂ ಓದಿ: TMC ಎಂಎಲ್ ಎ ಕೊಲೆ ಪ್ರಕರಣ: ಪಶ್ಚಿಮಬಂಗಾಳ ಸಿಐಡಿ ಚಾರ್ಜ್ ಶೀಟ್ ನಲ್ಲಿ ಮುಕುಲ್ ರಾಯ್ ಹೆಸರು

Advertisement

ರಾಜಕೀಯವಾಗಿ ಅನುಭವ ಹೊಂದಿರುವ ಇಬ್ಬರು ಹಿರಿಯ ಕಾಂಗ್ರೆಸ್ ನಾಯಕರಿಗೆ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರದಲ್ಲಿ ಉಸ್ತುವಾರಿ ವಹಿಸಿರುವ ಕೆಪಿಸಿಸಿ ಅಧ್ಯಕ್ಷರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗೆ ಉತ್ಸಾಹ ಹೆಚ್ಚಿಸುವ ಜೊತೆಗೆ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಹಾಗೂ ವಿಧಾನಸಭಾ ಚುನಾವಣೆಯಲ್ಲಿ ಸಹ ಜಿಲ್ಲೆಯನ್ನು ಕಾಂಗ್ರೆಸ್ ಪಕ್ಷದ ಭದ್ರಕೋಟೆ ಮಾಡಲು ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಲೆ ಸೃಷ್ಠಿಸಿ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ದೂರದೃಷ್ಠಿಯಿಂದ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಗುಸುಗುಸು ಚರ್ಚೆಗಳು ಆರಂಭವಾಗಿದೆ.

ಈಗಾಗಲೇ ಚಿಕ್ಕಬಳ್ಳಾಪುರ ನಗರಸಭೆಯ ಚುನಾವಣೆಯಲ್ಲಿ ಬಹುಮತವಿದ್ದರು ಸಹ ಅಧಿಕಾರವನ್ನು ಕಳೆದುಕೊಂಡಿರುವ ಕಾಂಗ್ರೆಸ್ ಪಕ್ಷಕ್ಕೆ, ಮಾಜಿ ಸಭಾಪತಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶಕ್ತಿ ತುಂಬುವರೇಎಂಬುದು ಕುತೂಹಲ ಕೆರಳಿಸಿದೆ.

ಅದೇ ರೀತಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೈವೋಲ್ಟೇಜ್ ಕ್ಷೇತ್ರ ಎಂದು ಹೆಸರು ಪಡೆದಿರುವ ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಜೆಕೆ ಕೃಷ್ಣರೆಡ್ಡಿ ಮತ್ತು ಮಾಜಿ ಶಾಸಕ ಡಾ. ಎಂಸಿ ಸುಧಾಕರ್ ಬೆಂಬಲಿಗರು ಗ್ರಾಮ ಪಂಚಾಯಿತಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದು ಪ್ರತಿಯೊಂದು ಹಂತದಲ್ಲಿ ಎರಡು ಬಣಗಳ ನಡುವೆ ಪೈಪೋಟಿ ನಡೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ಮಾಜಿ ಸಭಾಪತಿ ನೆರೆಯ ಶ್ರೀನಿವಾಸಪುರ ವಿಧಾನಸಭೆಯ ಶಾಸಕ ರಮೇಶ್‍ಕುಮಾರ್ ಅವರನ್ನು ಚಿಂತಾಮಣಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯಾಗಿ ನೇಮಿಸಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿ ಮಾಡುವ ಜೊತೆಗೆ ಕ್ಷೇತ್ರದಲ್ಲಿ ರಾಜಕೀಯ ಧ್ರುವೀಕರಣಕ್ಕೆ ನಾಂದಿಯಾಗಲಿದಯೇ ಎಂದು ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಈ ರಾಜ್ಯದಲ್ಲಿ ಡಿ.8ರಿಂದ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ರೆ ಪೆಟ್ರೋಲ್ ಇಲ್ಲ!

ಜಿಲ್ಲೆಯ ಎರಡು ಕ್ಷೇತ್ರಗಳು ಹೊರತುಪಡಿಸಿ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ವಿ.ಮುನಿಯಪ್ಪ, ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಎನ್‍ಹೆಚ್ ಶಿವಶಂಕರ ರೆಡ್ಡಿ ಹಾಗೂ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಎಸ್‍ಎಂ ಸುಬ್ಬಾರೆಡ್ಡಿ ಅವರನ್ನೆ ಉಸ್ತುವಾರಿಯಾಗಿ ನೇಮಕ ಮಾಡಿ, ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಬೆಂಬಲಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ಹೊಣೆಗಾರಿಕೆಯನ್ನು ನೀಡಲಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗ್ರಾಮ ಪಂಚಾಯಿತಿ ಚುನಾವಣೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದೇವೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಂಚನಬೆಲೆ-ದಿಬ್ಬೂರನಿಂದ ಪ್ರಚಾರ ಆರಂಭಿಸಿದ್ದೇವೆ ಪಕ್ಷದ ಹಿರಿಯ ನಾಯಕರನ್ನು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಿಗೆ ಉಸ್ತುವಾರಿಗಳಾಗಿ ನೇಮಕ ಮಾಡಿರುವುದನ್ನು ಸ್ವಾಗತಿಸಿಸುತ್ತೇವೆ. ಅನುಭವಿಗಳ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡಲು ಮತ್ತಷ್ಟು ಬಲ ಬರುತ್ತದೆ.

ಕೇಶವರೆಡ್ಡಿ ಅಧ್ಯಕ್ಷ ಜಿಲ್ಲಾ ಕಾಂಗ್ರೆಸ್ ಸಮಿತಿ ಚಿಕ್ಕಬಳ್ಳಾಪುರ

Advertisement

Udayavani is now on Telegram. Click here to join our channel and stay updated with the latest news.

Next