Advertisement

ಕೆಪಿ ಮೇಡಂ, ನಿಮ್ಮ ಆಶಯ ಪಾಲಿಸುತ್ತೇನೆ

06:00 AM Nov 02, 2018 | |

ಮಾನ್ಯರೆ,
ರಾಜ್ಯೋತ್ಸವದ ಶುಭಾಶಯಗಳು.

ಇಂದಿನ (ನ.1, ಗುರುವಾರ) ಉದಯವಾಣಿ ನನಗೆ ಒಂದು ಅಚ್ಚರಿಯ ಉಡುಗೊರೆ ನೀಡಿದೆ. ನನಗೆ ಹೊಳೇನರಸೀಪುರದ ಸರ್ಕಾರಿ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಕಲಿಸಿದ ನೆಚ್ಚಿನ ಗುರು ಕೆ.ಪದ್ಮಾವತಮ್ಮ ಅವರ ಪತ್ರ ನನ್ನನ್ನು ಮತ್ತೆ ಬಾಲ್ಯದ ದಿನಗಳಿಗೆ ಕೊಂಡೊಯ್ದಿದೆ. ಅವರ ಆಶಯ, ಸಲಹೆಗಳನ್ನು ಖಂಡಿತಾ ಪಾಲಿಸುವ ಪ್ರಯತ್ನ ಮಾಡುತ್ತೇನೆ.  ಅವರು ಈ ಇಳಿವಯಸ್ಸಿನಲ್ಲಿಯೂ ನಾಡು, ನುಡಿ, ಜನರ ಬಗ್ಗೆ ತೋರಿದ ಕಾಳಜಿ ಅನನ್ಯ. ನಾನು ಅವರ ವಿದ್ಯಾರ್ಥಿಯಾಗಿರುವುದಕ್ಕೆ ಹೆಮ್ಮೆ ಎನಿಸುತ್ತದೆ. ಮಕ್ಕಳನ್ನು ಸರಿಯಾದ ಹಾದಿಯಲ್ಲಿ ನಡೆಯುವಂತೆ ಸದಾ ಎಚ್ಚರಿಸುವ ತಾಯಿಯ ಕಕ್ಕುಲತೆ, ಕಾಳಜಿ ಅವರ ಪತ್ರದಲ್ಲಿದೆ. ನೋಡಿ ಮನದುಂಬಿತು. ಗುರುಗಳು ಕೇಳಿದ ಗುರುದಕ್ಷಿಣೆಗೆ ಸಂಬಂಧಿಸಿದಂತೆ ನಮ್ಮ ಪ್ರಯತ್ನಗಳ ಕಿರು ಮಾಹಿತಿ ಇಲ್ಲಿದೆ. ಕೆಲವು ವಿಚಾರಗಳ ಕುರಿತು ಈಗಾಗಲೇ ಕ್ರಮ ವಹಿಸಲಾಗುತ್ತಿದೆ. ಇನ್ನು ಕೆಲವು ಉಪಯುಕ್ತ ಸಲಹೆಗಳನ್ನು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರುವೆ. ಗುರುಗಳ ಮಾರ್ಗದರ್ಶನ ಮುಂದೆಯೂ ನಮಗೆ ದೊರೆಯುತ್ತಿರಲಿ. ಇದನ್ನು ಸಾಧ್ಯವಾಗಿಸಿದ “ಉದಯವಾಣಿ’ ಬಳಗಕ್ಕೂ ನನ್ನ ಕೃತಜ್ಞತೆಗಳು.

Advertisement

ತಮ್ಮ ವಿಶ್ವಾಸಿ 
ಎಚ್‌.ಡಿ. ಕುಮಾರಸ್ವಾಮಿ
ಮುಖ್ಯಮಂತ್ರಿ, ಕರ್ನಾಟಕ ಸರಕಾರ

1. ಶಾಲೆಗಳನ್ನೂ ದೇಗುಲಗಳೆಂದು ಪರಿಗಣಿಸಿ, ಶಾಲಾದೇಗುಲ ಯಾತ್ರೆ ಮಾಡಿ ಎಂದು ನನಗೂ ಸಚಿವ ಸಂಪುಟದ ಸಹೋದ್ಯೋಗಿಗಳಿಗೂ ಸಲಹೆ ಮಾಡಿದ್ದಾರೆ. ಸರಕಾರಿ ಶಾಲೆಗಳನ್ನು ಅತ್ಯುತ್ತಮ ಶಾಲೆಗಳಾಗಿಸುವ ಧ್ಯೇಯ ನನ್ನದೂ ಆಗಿದೆ. ಇದಕ್ಕೆ ನಮ್ಮ ಸರಕಾರ ಆದ್ಯತೆಯನ್ನೂ ನೀಡಿದೆ. ಸರಕಾರಿ ಶಾಲೆ-ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು 1,200 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ನಾನು ಪ್ರವಾಸದ ಸಂದರ್ಭ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿ ಪರಿಶೀಲಿಸುವೆ. ನನ್ನ ಸಚಿವ ಸಂಪುಟದ ಸಹೋ ದ್ಯೋಗಿಗಳಿಗೂ ಸಲಹೆ ನೀಡುವೆ.

2 ಮತ್ತು 3. ಅಂತರ್ಜಾಲದಲ್ಲಿ ಕನ್ನಡದಲ್ಲಿ ಮಾಹಿತಿ ಲಭ್ಯವಾಗಿಸುವ ನಿಟ್ಟಿನಲ್ಲಿ ಮತ್ತು ಕನ್ನಡದಲ್ಲಿ ತಂತ್ರಾಂಶಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವೆ.

4. ನ್ಯಾಯಾಲಯದಲ್ಲಿ ಕನ್ನಡದಲ್ಲಿ ಕಲಾಪಗಳನ್ನು ನಡೆಸುವ ನ್ಯಾಯಾಧೀಶರನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಗುರುತಿಸಿ ಪ್ರೋತ್ಸಾಹಿಸುತ್ತಿದೆ. ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಬಗ್ಗೆ ಕಾನೂನು ಇಲಾಖೆ, ನ್ಯಾಯಾಂಗದ ಅಧಿಕಾರಿ ಗಳೊಂದಿಗೆ ಚರ್ಚಿಸಿ ಕ್ರಮ ವಹಿಸುವೆ.

Advertisement

5. ನಮ್ಮ ಆಡಳಿತ ಭಾಷೆ ಕನ್ನಡ. ಆದ್ದರಿಂದ ಕನ್ನಡ ದಲ್ಲಿಯೇ ವ್ಯವಹರಿಸುವಂತೆ ಇರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಗುರುಗಳು ಗುರುತಿಸಿದಂತೆ ಕನ್ನಡದಲ್ಲಿರುವ ಕಡತಗಳನ್ನು ಮಾತ್ರ ಪರಿಶೀಲಿಸಲು ತೀರ್ಮಾನಿಸಿದ್ದು, ಅದ ರಂತೆ ನಡೆದುಕೊಳ್ಳುತ್ತಿರುವೆ. ಸಚಿವ ಸಂಪುಟದ ಸಹೋದ್ಯೋಗಿಗಳಿಗೂ ಇದೇ ಸಲಹೆ ನೀಡುವೆ. ಅವರೂ ಪಾಲಿಸುತ್ತಾರೆಂಬ ವಿಶ್ವಾಸ ನನ್ನದು.

6. ಕನ್ನಡಿಗರಿಗೆ ಖಾಸಗಿ ವಲಯದಲ್ಲಿಯೂ ಉದ್ಯೋಗ ಮೀಸಲಾತಿ ಒದಗಿಸುವ ನಿಟ್ಟಿನಲ್ಲಿ ಸರೋಜಿನಿ ಮಹಿಷಿ ವರದಿಯ ಪರಿಷ್ಕೃತ ಕರಡು ಸಿದ್ಧಪಡಿಸಲಾಗಿದ್ದು, ಸರಕಾರದ ಮುಂದೆ ಪರಿಶೀಲನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next