ವಿದ್ಯಾಭ್ಯಾಸದ ನೆಪದಲ್ಲಿ ಪಟ್ಟಣಕ್ಕೆ ಬಂದು ಸೇರಿದ್ದ ನಾನು ಹೀಗೆ ರಜೆ ಸಿಕ್ಕಾಗ ಊರಿಗೆ ಹೋಗಿದ್ದೆ. ಅಲ್ಲಿ ಹೂಗಳಿಂದ ಅಲಂಕೃತವಾಗಿದ್ದ ಗೇರುಬೀಜ ಮರಗಳನ್ನು ನೋಡಿದಾಗ ನನ್ನ ನೆನಪಿನ ಚಕ್ರ ಹಿಂದಕ್ಕೆ ತಿರುಗಿತು. ಡಿಸೆಂಬರ್ ತಿಂಗಳು ಬರುತ್ತಲೆ ಗೇರುಬೀಜದ ಮರದಲ್ಲಿ ಯರ್ರಾಬಿರ್ರಿ ಹೂ ಬಿಡಲು ಶುರುವಾಗಿ ಬಿಡುತ್ತದೆ. ಒಂದೆರಡು ತಿಂಗಳಲ್ಲಿ ಅದನ್ನು ಕೊಯ್ಯುವ ಸಮಯ ಬಂದಾಗಿರುತ್ತದೆ. ಅದನ್ನು ಕೊಯ್ಯುವುದೆಂದರೆ ಅದೇನೋ ಖುಷಿ.
ಬೆಳಗ್ಗೆ ಆದರೆ ಸಾಕು, ಏಳುಗಂಟೆ ಸುಮಾರಿಗೆ, ಇರೋ ಹಳೆಯ ಬಟ್ಟೆ ಧರಿಸಿ ಸೂರ್ಯ ನೆತ್ತಿಗೇರೋ ಮುನ್ನ ಗೇರುಬೀಜ ಕೊಯ್ದು ಮುಗಿಯಬೇಕು ಎಂದು ಹೊರಡುತ್ತೇವೆ. ಕೈಯಲ್ಲಿ ಹಳೆಯ ತೂತಾದ ಬಕೆಟ್ಟುಗಳು, ಉಪಯೋಗಕ್ಕೆ ಬಾರದ ಹಳೆಯ ಪೈಂಟಿನ ಡಬ್ಬಗಳು, ಕುಡಿಯಲು ಎರಡು ಬಾಟಿ ನೀರು, ಕೊಯ್ಯಲು ಉದ್ದಾದ ಕೋಲು ಅದನ್ನು ನಮ್ಮಲ್ಲಿ “ದೋಂಟಿ’ ಎನ್ನುತ್ತಾರೆ ಎಲ್ಲವನ್ನು ಕೈಯಲ್ಲಿ ಹಿಡಿದು ನಾನು, ನನ್ನ ಅಮ್ಮ, ನನ್ನ ತಂಗಿ ಯುದ್ಧಕ್ಕೆ ಹೊರಟ ಸೈನಿಕರಂತೆ ಹೊರಟುಬಿಡುತ್ತೇವೆ. ಮರದಲ್ಲೆಲ್ಲ ಸಣ್ಣ ಸಣ್ಣ ಬಲುಗಳಂತೆ ಗೇರು ಬೀಜಗಳನ್ನ ಕಂಡಾಗ ಲಾಟರಿ ಹೊಡೆದಷ್ಟು ಖುಷಿ ಅದರಲ್ಲೂ ಪಾಲು. “ಅಲ್ಲಿರುವ ಎರಡು ಮರ ನನ್ನದು, ಇನ್ನೆರಡು ಅಲ್ಲಿ ನಿನ್ನದು’ ಎಂದು ನಾನು ನನ್ನ ತಂಗಿ ಮರಗಳನ್ನೆಲ್ಲ ಪಾಲು ಮಾಡಿ ಆಗಿರುತ್ತದೆ. ಮರ ಹತ್ತುವುದೆಂದರೆ ಇನ್ನೂ ಖುಷಿ.
ಅಲ್ಲಲ್ಲಿ ಮರ ಹತ್ತಿ ಅಲ್ಲಾಡಿಸಿದಾಗ ಮರದಲ್ಲಿದ್ದ ಹಣ್ಣುಗಳೆಲ್ಲ ದಡಬಡನೆ ಕೆಳಗಿದ್ದವರ ತಲೆಯ ಮೇಲೆ, ಬೆನ್ನ ಮೇಲೆ ಬಿದ್ದುಬಿಡುತ್ತದೆ. ಅದನ್ನು ಹೆಕ್ಕುವುದು ಅಷ್ಟೊಂದು ಸುಲಭವಲ್ಲ. ಅಲ್ಲಿ ಚೂರಿಮುಳ್ಳು ಎಂಬ ಹೆಸರಿನ ಬಳ್ಳಿ ಆಕಾರದ ಮುಳ್ಳೊಂದಿದೆ. ಅದು ಎಲ್ಲಾದರೂ ಕಾಲ ನಡುವೆ ಸಿಕ್ಕಿ ಹಾಕಿಕೊಂಡರೆ ಅಷ್ಟೆ, ಅದರಿಂದ ಬಿಡಿಸಿ ಹೊರಬರುವಷ್ಟರಲ್ಲಿ ಕೈಕಾಲೆಲ್ಲ ರಕ್ತ ಜಿನುಗುತ್ತಿರುತ್ತದೆ, ಕಣ್ಣಲ್ಲಿ ನೀರು ತುಂಬಿರುತ್ತದೆ. ಇನ್ನು ಕೆಳಗೆ ಬಿದ್ದುದ್ದನ್ನು ಹೆಕ್ಕಲು ಹೋದರೆ ಅಲ್ಲಿ ಹಾವು ಓಡಾಡಲು ಶುರು. ನಮ್ಮಮ್ಮ “ಅಲ್ಲಿ ಹೋಗಬೇಡಿ’ ಎಂದು ಕಿರುಚಿಗಾಗ ನಾನು ನನ್ನ ತಂಗಿ ತುಟಿಕ್ ಪಿಟಿಕ್ ಎನ್ನದೆ ಅಲ್ಲೇ ನಿಂತು ಬಿಡುತ್ತೇವೆ. ಹಾವಿಗೂ ನಾವು ಮಕ್ಕಳು ಎಂದು ಗೊತ್ತಾಯಿತೋ ಏನೋ ಅದು ಕೂಡ ನಮಗೇನೂ ತೊಂದರೆ ಮಾಡದೆ ಮುಂದೆ ಹೊರಟು ಹೋಗುತ್ತದೆ. ಅಂಥ ಅವಿನಾಭಾವ ಸಂಬಂಧ ನಮಗೂ ಹಾವಿಗೂ ! ಇನ್ನೂ ಮುಂದೆ ಹೋದರೆ ಕೆಲವು ಮರಗಳಲ್ಲಿ ಜೇನ್ನೊಣಗಳ ಗೂಡು. ಅದನ್ನು ಕಂಡರೆ ಅಲ್ಲಿಂದ ಪರಾರಿ ಆಗುವ ನಾವು ಅದು ಮರದಿಂದ ಹೋಗುವ ತನಕ ಆ ಮರದ ಕಡೆ ತಲೆ ಹಾಕೋಲ್ಲ. ನಾನು ನನ್ನ ತಂಗಿ ಸ್ಪರ್ಧೆಯ ಮೇಲೆ ಗೇರು ಹಣ್ಣು ತಂದು ತಂದು ಸುರಿಯುತ್ತಿದ್ದರೆ ನನ್ನ ಅಮ್ಮ ಒಂದೆಡೆ ಕೂತು ಬೀಜ ತಿರುಚಿ ಹಾಕುತ್ತಿರುತ್ತಾಳೆ. ಬೀಜದ ರಾಶಿ ಕಂಡಾಗ ಅದೇನೋ ಪುಳಕ. ಹೀಗೆ ಹನ್ನೊಂದು ಗಂಟೆ ಒಳಗೆ ಬೀಜ ಹೊತ್ತುಕೊಂಡು ಮನೆ ಸೇರುತ್ತೇವೆ.
ನಂತರ ಬೀಜವನ್ನು ತೊಳೆದು, ಒಣಗಿಸಿ, ಅದನ್ನು ಗೋಣಿಚೀಲದಲ್ಲಿ ಹಾಕಿ ಕೊಟ್ಟರೆ ಅದನ್ನು ಅಪ್ಪ ಮಾರಾಟಮಾಡಲು ಕೊಂಡುಹೋಗುತ್ತಾರೆ. ಅಪ್ಪ ಮರಳಿ ಬಂದಾಗ, “ಎಷ್ಟು ಕಿಲೋ ಇತ್ತು, ಎಷ್ಟು ಹಣ ಸಿಕ್ಕಿತು’ ಎಂಬುದೇ ನಮ್ಮ ಪ್ರಶ್ನೆಯಾಗಿರುತ್ತದೆ. ಅದರಲ್ಲಿ ಸಿಕ್ಕಿದ ಹಣವನ್ನು ನನಗೂ ನನ್ನ ತಂಗಿಗೂ ಪಾಲು ಮಾಡಿ ಕೊಡಲಾಗುತ್ತದೆ. ಆ ದುಡ್ಡು ನಮ್ಮ ಕೈ ಸೇರಿದಾಗ ದಿಗ್ವಿಜಯ ಸಾಧಿಸಿದ ಸಂಭ್ರಮ.
ಎಪ್ರಿಲ್ ತಿಂಗಳಲ್ಲಿ ಗಮತ್ತಿನ ವಿಷು ಹಬ್ಬ. ಅದೇ ಹಣದಲ್ಲಿ ವಿಷು ಹಬ್ಬಕ್ಕಾಗಿ ಬಟ್ಟೆ ಖರೀದಿಸುತ್ತೇವೆ. ಅದನ್ನು ಧರಿಸಿದಾಗಲೆಲ್ಲ ಅದೇನೋ ಪುಳಕ. ಸ್ವಂತ ದುಡಿಮೆಯಿಂದ ಲಭಿಸಿದ್ದು ಎಂದ ಹೆಮ್ಮೆ, ಖುಷಿ. ಆಗ ಗೇರುಬೀಜ ಹೆಕ್ಕುವಾಗ ಆದ ನೋವು, ಜಿನುಗಿದ ನೆತ್ತರು, ಆದ ಗಾಯ, ಹಾವು, ಜೇನುಗೂಡು ಕಂಡಾಗ ಆದ ಹೆದರಿಕೆ ಎಲ್ಲಾ ಮರೆತು ಹೋಗಿರುತ್ತದೆ. ಬರೀ ನನ್ನ ಹಣ ನನ್ನ ಬಟ್ಟೆ ಇಷ್ಟೇ ಇರುತ್ತದೆ ತಲೆಯಲ್ಲಿ. ಅದನ್ನೆಲ್ಲ ಮರೆಯಲು ಸಾಧ್ಯವೇ ಇಲ್ಲ.
ಆದರೆ ಈಗ ಸಮಯದ ಅಭಾವದಿಂದ ಕೂಲಿ ಆಳುಗಳಿಂದ ಹೆಕ್ಕಿಸುತ್ತಾರೆ. ಆ ಹಣವನ್ನೂ ಕೂಡ ಅಪ್ಪ ನಮ್ಮ ಕೈಗೇ ಕೊಡುತ್ತಾರೆ. ಆದರೆ ನಾವೇ ಎದ್ದು ಬಿದ್ದು ಹೆಕ್ಕಿದ ಸಂತೃಪ್ತಿ ಈ ದುಡ್ಡಿಗಿಲ್ಲ ಎಂದೇ ಅನಿಸುತ್ತೆ. ಅದಕ್ಕಾಗಿ ಬರುವ ರಜೆಯನ್ನು ಕಾತರದಿಂದ ಕಾಯುತ್ತಿದ್ದೇವೆ. ಊರಿಗೆ ಓಡಿಹೋಗಬೇಕು, ಮತ್ತೆ ಮರ ಹತ್ತಬೇಕು, ಗೆಲ್ಲು ಗೆಲ್ಲುಗಳಲ್ಲಿ ನೇತಾಡಬೇಕು, ಹಣ್ಣುಗಳೆಲ್ಲ ಪಟಪಟನೆ ಉದುರಬೇಕು… ಕಾತರದಿಂದ ಎದುರು ನೋಡುತ್ತಿದ್ದೇನೆ.
– ಪಿನಾಕಿನಿ ಪಿ. ಶೆಟ್ಟಿ
ತೃತೀಯ ಬಿ. ಕಾಂ.
ಸೈಂಟ್ ಆಗ್ನೆಸ್ ಕಾಲೇಜು, ಮಂಗಳೂರು