Advertisement

ಕೋವಿಡ್-19: ಕಳಭಟ್ಟಿ ಸಾರಾಯಿ ದಂಧೆ ಭೀತಿ!

01:45 PM Apr 12, 2020 | mahesh |

ಚಿಕ್ಕಬಳ್ಳಾಪುರ: ಕೋವಿಡ್-19 ತಡೆಗೆ ಲಾಕ್‌ ಡೌನ್‌ ಘೋಷಣೆಯಾಗಿರುವ ಪರಿಣಾಮ ಜಿಲ್ಲೆಯಲ್ಲಿ ಕುಡಿತದ ಚಟಕ್ಕೆ ದಾಸರಾಗಿರುವ ಮದ್ಯ ವ್ಯಸನಿಗಳು ಇದೀಗ ಕಳ್ಳಭಟ್ಟಿ ಸಾರಾಯಿ ತಯಾರಿಕೆಗೆ ಮುಂದಾಗಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಕಳ್ಳಭಟ್ಟಿ ಸಾರಾಯಿ ದಂಧೆ ಇದೀಗ ಕೋವಿಡ್-19 ಲಾಕ್‌ಡೌನ್‌ ಪರಿಣಾಮ ಮತ್ತೆ ಜಿಲ್ಲೆಯಲ್ಲಿ ತಲೆ ಎತ್ತುವ ಭೀತಿ ಅಬಕಾರಿ ಇಲಾಖೆ ಅಧಿಕಾರಿಗಳನ್ನು ತೀವ್ರ ಚಿಂತೆಗೀಡು ಮಾಡಿದೆ. ಹಲವು ದಿನಗಳಿಂದ ಜಿಲ್ಲೆಯ
ಚಿಂತಾಮಣಿ, ಬಾಗೇಪಲ್ಲಿ ಮತ್ತಿತರ ಕಡೆ ಕಳ್ಳಭಟ್ಟಿ ಸಾರಾಯಿ ತಯಾರಿಸಿರುವ ಕುರುಹುಗಳು ಪತ್ತೆಯಾಗಿವೆ.

Advertisement

ಕೋವಿಡ್-19 ತಡೆಯುವ ಉದ್ದೇಶದಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಲಾಕ್‌ ಡೌನ್‌ ಘೋಷಣೆ ಮಾಡಲಾಗಿದೆ. ಕಳೆದ ಮಾ.22ರಿಂದಲೇ ಜಿಲ್ಲೆಯಲ್ಲಿ ಲಾಕ್‌ಡೌನ್‌ ಘೋಷಣೆ ಮಾಡಿ, ಅಬಕಾರಿ ಇಲಾಖೆಗೆ ಸೇರಿದ ಎಲ್ಲಾ ಮದ್ಯದಂಗಡಿಗಳು, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳನ್ನು ಬಂದ್‌ ಮಾಡಲಾಗಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಮದ್ಯ ವ್ಯಸನಿಗಳು ಎಂಎಸ್‌ ಐಎಲ್‌ ಮತ್ತಿತರ ಅಬಕಾರಿ ಮದ್ಯ ದೊರೆಯದ ಕಾರಣ ತಾವೇ ಕಳ್ಳಭಟ್ಟಿ ಸಾರಾಯಿ ತಯಾರಿಸಲು ಮುಂದಾಗಿರುವುದು ಜಿಲ್ಲೆಯಲ್ಲಿ ಕಂಡು ಬಂದಿದೆ. ಈಗಾಗಲೇ ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಒಂದು ಕಳ್ಳಭಟ್ಟಿ ಸಾರಾಯಿ ಪ್ರಕರಣ ದಾಖಲಾಗಿ 1.5 ಲೀಟರ್‌ ಕಳ್ಳಭಟ್ಟಿ ಸಾರಾಯಿ ವಶಕ್ಕೆ ಪಡೆದು ಒಬ್ಬರನ್ನು ಬಂಧಿಸಲಾಗಿದೆ.

ಅಬಕಾರಿ ಇಲಾಖೆ ಅಧಿಕಾರಿಗಳ ಮಾಹಿತಿ
ಪ್ರಕಾರವೇ ಜಿಲ್ಲೆಯ ಗುಡಿಬಂಡೆ ಹೊರತುಪಡಿಸಿ ಬಹುತೇಕ ಎಲ್ಲಾ ತಾಲೂಕುಗಳಲ್ಲಿ ಕಳ್ಳಭಟ್ಟಿ ಸಾರಾಯಿ ತಯಾರಿಸುವ ಸಾಧ್ಯತೆಗಳು ಇರುವ ಹಿನ್ನಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಜಿಲ್ಲಾದ್ಯಂತ ಕಳ್ಳಭಟ್ಟಿ ಸಾರಾಯಿ ದಂಧೆಗೆ ಬ್ರೇಕ್‌ ಹಾಕಲು ವಿಶೇಷ ತಂಡಗಳನ್ನು ರಚಿಸಿ, ಪ್ರತಿ ತಾಲೂಕಿನಲ್ಲಿ ಹಗಲು ರಾತ್ರಿ ಗಸ್ತು ಮಾಡಲಾಗುತ್ತಿದೆ. ಈ ಹಿಂದೆ ಕಳ್ಳಭಟ್ಟಿ ಸಾರಾಯಿ ದಂಧೆಗೆ ಜಿಲ್ಲೆಯಲ್ಲಿ ನೂರಾರು ಕೂಲಿ ಕಾರ್ಮಿಕ ಕುಟುಂಬಗಳು ಬಲಿಯಾಗಿರುವ ಇತಿಹಾಸ ಇದ್ದು, ಕಳೆದ ಹತ್ತು ಹನ್ನರೆಡು ವರ್ಷಗಳಿಂದ ಕಳ್ಳಭಟ್ಟಿ ಸಾರಾಯಿ ತಯಾರಿಸುವ ಅಡ್ಡೆಗಳನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಸಂಪೂರ್ಣ ನಿರ್ಮೂಲನೆ ಮಾಡಿದ್ದರು. ಆದರೆ, ಇದೀಗ ಲಾಕ್‌ಡೌನ್‌ ಪರಿಣಾಮ ಮದ್ಯ ಸಿಗದ ಹಿನ್ನಲೆಯಲ್ಲಿ ಮದ್ಯ ವ್ಯಸನಿಗಳು ಕಳ್ಳಭಟ್ಟಿ ಸಾರಾಯಿ ತಯಾರಿಕೆಗೆ ಮುಂದಾಗಿರುವುದು ಬೆಳಕಿಗೆ ಬಂದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಪ್ರತಿ ತಾಲೂಕಿನಲೂ ಪತ್ತೆ ಕಾರ್ಯಕ್ಕೆ ತಂಡ ರಚನೆ
ಜಿಲ್ಲೆಯಲ್ಲಿ ಎಂಎಸ್‌ಐಲ್‌ ಸೇರಿದಂತೆ ಎಲ್ಲ ರೀತಿ ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳನ್ನು ಬಂದ್‌ ಮಾಡಿರುವುದರಿಂದ ಕೆಲವರು ಕಳ್ಳಭಟ್ಟಿ ಸಾರಾಯಿ ತಯಾರಿಸಲು ಮುಂದಾಗಿದ್ದಾರೆ. ಈಗಾಗಲೇ ಈ ಸಂಬಂಧ ಒಬ್ಬರನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತೂಬ್ಬ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ. ಕಳ್ಳಭಟ್ಟಿ ಸಾರಾಯಿ ಅಡ್ಡೆಗಳು ತಲೆ ಎತ್ತದಂತೆ ಪ್ರತಿ ತಾಲೂಕಿಗೆ ಎರಡು ತಂಡಗಳನ್ನು ರಚಿಸಿ ಹಗಲು, ರಾತ್ರಿ ಪತ್ತೆ ಕಾರ್ಯ ಮಾಡಲಾಗುತ್ತಿದೆ ಎಂದು ಅಬಕಾರಿ ಉಪ ಆಯುಕ್ತ ಜಿ.ಪಿ.ನರೇಂದ್ರಕುಮಾರ್‌ ತಿಳಿಸಿದರು

● ಕಾಗತಿ ನಾಗರಾಜಪ್ಪ

Advertisement
Advertisement

Udayavani is now on Telegram. Click here to join our channel and stay updated with the latest news.

Next