Advertisement

ಕೋವಿಡ್-19 ಲಕ್ಷಣಗಳಿದ್ದರೆ ಕೋವಿಡ್‌ ಆಸ್ಪತ್ರೆಗೆ

02:21 AM Apr 23, 2020 | Sriram |

ಮಂಗಳೂರು: ಖಾಸಗಿ ಆಸ್ಪತ್ರೆಗಳಿಗೆ ಬರುವ ಶಂಕಿತ ಕೋವಿಡ್-19 ಪ್ರಕರಣಗಳನ್ನು ವಿಳಂಬ ಮಾಡದೇ ತತ್‌ಕ್ಷಣವೇ ಅನಾರೋಗ್ಯ ಪೀಡಿತರನ್ನು ಕೋವಿಡ್‌ ಆಸ್ಪತ್ರೆಗೆ ಶಿಫಾರಸು ಮಾಡಲು ಎಲ್ಲ ಆಸ್ಪತ್ರೆಗಳಿಗೆ ಆದೇಶಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

Advertisement

ಅವರು ತಮ್ಮ ಕಚೇರಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಈಗಾಗಲೇ ಜಿಲ್ಲೆಯಾದ್ಯಂತ ಗರ್ಭಿಣಿಯರು, ವೃದ್ಧರು, ಟಿಬಿ, ಎಚ್‌ಐವಿ ಪೀಡಿತರು, ಅಸ್ತಮಾ ರೋಗಿಗಳು ಸೇರಿದಂತೆ ವಿಶೇಷ ರೋಗಿಗಳತ್ತ ಗಮನ ಹರಿಸಿ, ಕಾಲ ಕಾಲಕ್ಕೆ ಅವರಿಗೆ ಸೂಕ್ತ ವೈದ್ಯಕೀಯ ತಪಾಸಣೆ ಸೇರಿದಂತೆ ಆರೋಗ್ಯ ನೆರವು ಒದಗಿಸಲಾಗುತ್ತಿದೆ ಎಂದರು.

ವೆನ್ಲಾಕ್ ಕೋವಿಡ್‌ ಆಸ್ಪತ್ರೆಯನ್ನು ಸುಸಜ್ಜಿತಗೊಳಿಸಲು 10 ಮಂದಿ ವೈದ್ಯರು, 21 ಮಂದಿ ನರ್ಸ್‌ಗಳು, 5 ಪ್ರಯೋಗ ಶಾಲಾ ತಂತ್ರಜ್ಞರು, ಡಿ ಗ್ರೂಪ್‌ ಸಿಬಂದಿಯನ್ನು ನೇಮಕ ಮಾಡಲು ಸರಕಾರ ಅನುಮತಿ ನೀಡಿದೆ ಎಂದರು.

ದ.ಕ. ಜಿಲ್ಲೆಯಲ್ಲಿ 2.71 ಲಕ್ಷ ಬಿಪಿಎಲ್‌ ಕಾರ್ಡುದಾರರಿದ್ದು, ಈ ಪೈಕಿ 2.60 ಲಕ್ಷ ಕಾರ್ಡ್‌ಗಳಿಗೆ ಪ್ರತಿ ವ್ಯಕ್ತಿಗೆ ತಲಾ 10 ಕೆಜಿ ಅಕ್ಕಿ ವಿತರಿಸಲಾಗಿದೆ. ಎಪಿಎಲ್‌ ಕಾರ್ಡ್‌ಗಳಿಗೆ ಆಸಕ್ತಿ ವ್ಯಕ್ತಪಡಿಸಿದವರಿಗೆ ತಲಾ 10 ಕೆಜಿ ಅಕ್ಕಿ ವಿತರಿಸಲಾಗಿದೆ. ಮೇ-ಜೂನ್‌ ತಿಂಗಳಲ್ಲಿ ಎಲ್ಲ ಎಪಿಎಲ್‌ ಕಾರ್ಡ್‌ದಾರರಿಗೆ ಅಗತ್ಯವೆನಿಸಿದರೆ ಕೆಜಿಗೆ 15 ರೂ. ದರದಲ್ಲಿ 10 ಕೆಜಿಯಂತೆ ಅಕ್ಕಿ ವಿತರಿಸಲಾಗುವುದು. ಮುಂದಿನ ತಿಂಗಳಿಂದ ಪ್ರತಿ ಬಿಪಿಎಲ್‌ ಕಾರ್ಡಿಗೆ 4 ಕೆಜಿ ಗೋಧಿ, 1 ಕೆಜಿ ತೊಗರಿ ಬೇಳೆ, ಕುಚ್ಚಲಕ್ಕಿ ಸೇರಿದಂತೆ ವ್ಯಕ್ತಿಗೆ ತಲಾ 10 ಕೆಜಿ ಅಕ್ಕಿ ವಿತರಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿವರಿಸಿದರು.

ಗಂಜಿಮಠ ಬಿಗ್‌ ಬ್ಯಾಗ್‌ ಸಂಸ್ಥೆಯ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಅಲ್ಲಿನ ಸ್ಥಳೀಯ ನಿವಾಸಿಗಳು, ಜನಪ್ರತಿ ನಿಧಿಗಳು ಒಪ್ಪಿದರೆ ಮಾತ್ರ ಕಾರ್ಖಾನೆ ತೆರೆಯಬಹುದು ಕಾನೂನು ಸುವ್ಯವಸ್ಥೆಗೆ ಧಕ್ಕೆ ಮಾಡದಂತೆ ಕಾರ್ಖಾನೆಗೆ ಸೂಚಿಸ ಲಾಗಿದೆ ಎಂದರು.

Advertisement

ಹೊರರಾಜ್ಯ,ವಿದೇಶಿಗರ ನೆರವಿಗೆ ಹೆಲ್ಪ್ಲೈನ್‌ ಕೋವಿಡ್‌ 19 ಲಾಕ್‌ಡೌನ್‌ನಿಂದ ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಅತಂತ್ರರಾಗಿರುವ ಕರಾವಳಿ ಸೇರಿದಂತೆ ಕನ್ನಡಿಗರ ರಕ್ಷಣೆಗೆ ರಾಜ್ಯ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಕೊಲ್ಲಿ ಸಹಿತ ಹೊರ ದೇಶಗಳಲ್ಲಿ ಕೋವಿಡ್‌ 19 ಸಂಕಷ್ಟಕ್ಕೊಳಗಾಗಿರುವ ಕರಾವಳಿಗರಲ್ಲಿ ಆತ್ಮಸ್ಥೈರ್ಯ ತುಂಬಲು ಹೆಲ್ಪ್ಲೈನ್‌ ಸ್ಥಾಪಿಸುವ ಚಿಂತನೆ ನಡೆಸಲಾಗು ತ್ತಿದೆ ಎಂದು “ಉದಯವಾಣಿ’ ಕಚೇರಿಯಲ್ಲಿ ಮಂಗಳವಾರ ನಡೆದಿದ್ದ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಭರವಸೆ ನೀಡಿದ್ದರು. ಅದರಂತೆ ಪ್ರತ್ಯೇಕ ಹೆಲ್ಪ್ ಲೈನ್‌ ಸ್ಥಾಪಿಸುವಂತೆ ಮುಖ್ಯಮಂತ್ರಿ ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮನವಿ ಸಲ್ಲಿಸಿದ್ದಾರೆ.

ಸಂಕಷ್ಟಕ್ಕೀಡಾಗಿರುವ ಕನ್ನಡಿಗರಿಗೆ ಅಗತ್ಯ ಸೌಲಭ್ಯ, ರಕ್ಷಣೆ ಸೇರಿದಂತೆ ಅವರ ಕ್ಷೇಮ ವಿಚಾರಿಸಲು, ಅಗತ್ಯ ನೆರವು ನೀಡಲು ರಾಜ್ಯ ಮಟ್ಟದ ವಾರ್‌ ರೂಂನಲ್ಲಿ ಪ್ರತ್ಯೇಕ ಹೆಲ್ಪ್ಲೈನ್‌ ಸ್ಥಾಪಿಸಲು ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next