Advertisement

ನೋವು ನುಂಗಿ ಹಾಸ್ಯ ಉಣಬಡಿಸಿದ ನಟಿ; 18ನೇ ವರ್ಷದಲ್ಲಿ 65 ವರ್ಷದ ತಾಯಿ ಪಾತ್ರ !

09:47 AM Aug 17, 2019 | Nagendra Trasi |

ಸಿನಿಮಾರಂಗದಲ್ಲಿ ಹಾಸ್ಯ ನಟರು ತಮ್ಮ ಅದ್ಭುತ ಅಭಿನಯದ ಮೂಲಕ ಪ್ರೇಕ್ಷಕರ ಮನಗೆಲ್ಲುತ್ತಾರೆ. ಆದರೆ ಅದರಲ್ಲಿ ಹಲವು ಹಾಸ್ಯ ನಟರ ವೈಯಕ್ತಿಕ ಬದುಕು ತುಂಬಾ ದುರಂತಮಯವಾಗಿರುತ್ತದೆ, ಇಲ್ಲವೇ ತ್ಯಾಗಮಯವಾಗಿರುತ್ತದೆ. ಅದಕ್ಕೆ ತಮಿಳಿನ ಕೋವೈ ಸರಳಾ ಎಂಬ ನಟಿಯ ಜೀವನಗಾಥೆ ಸಾಕ್ಷಿ! ಸುಮಾರು ಮೂರು ದಶಕಗಳ ನಟನೆ ಮೂಲಕ ಜನಪ್ರಿಯತೆ ಪಡೆದಿದ್ದ ನಟಿ ಸರಳಾ..ಬರೋಬ್ಬರಿ 750 ಸಿನಿಮಾಗಳಲ್ಲಿ ನಟಿಸಿದ್ದಾರೆ.

Advertisement

ನಟಿ ಸರಳಾ ಇಡೀ ಕುಟುಂಬಕ್ಕೆ ಜೀವನಾಧಾರವಾಗಿದ್ದರು. ನಾಲ್ಕು ಮಂದಿ ಅಕ್ಕಂದಿರು, ಅವರಿಗೆಲ್ಲಾ ಮದುವೆಯಾಗಿ ಅವರ ಮಕ್ಕಳನ್ನು ತನ್ನ ಮಕ್ಕಳಂತೆ ನೋಡಿಕೊಂಡಾಕೆ ಸರಳಾ. ಇಡೀ ಕುಟುಂಬದ ಹೊಣೆ ಹೊತ್ತಿದ್ದ ಕೋವೈ ಸರಳಾ ಅವರನ್ನು ಈಗ ಇಡೀ ಕುಟುಂಬವೇ ಮಾತನಾಡಿಸದೆ ನಿರ್ಲಕ್ಷ್ಯ ತೋರಿಸುತ್ತಿದೆಯಂತೆ! ತೆರೆಯ ಮೇಲೆ ಲಕ್ಷಾಂತರ ಪ್ರೇಕ್ಷಕರನ್ನು ನಕ್ಕುನಗಿಸುತ್ತಿದ್ದ ನಟಿಯ ಖಾಸಗಿ ಬದುಕು ಅದೆಷ್ಟು ನೋವಿನಿಂದ ಕೂಡಿರುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆಯಷ್ಟೇ!

10ನೇ ತರಗತಿಯಲ್ಲಿದ್ದಾಗ 32ವರ್ಷದ ಗರ್ಭಿಣಿ ಪಾತ್ರ ಮಾಡಿದಾಕೆ ಸರಳಾ:

ಕೊಯಂಬತ್ತೂರಿನಲ್ಲಿ 1962ರಲ್ಲಿ ಜನಿಸಿದ್ದ ಸರಳಾಗೆ ಅಂದಿನ ಸೂಪರ್ ಸ್ಟಾರ್ ಎಂಜಿಆರ್ ಸಿನಿಮಾಗಳನ್ನು ನೋಡುತ್ತ, ನೋಡುತ್ತ ನಟನೆಯಲ್ಲಿ ಆಸಕ್ತಿ ಬೆಳೆಯತೊಡಗಿತ್ತು. ಹೀಗೆ ತಂದೆ ಹಾಗೂ ಸಹೋದರಿಯರ ಬೆಂಬಲದೊಂದಿಗೆ ಸರಳಾ ಸಿನಿಮಾರಂಗಕ್ಕೆ ಕಾಲಿಟ್ಟಿದ್ದರು.

Advertisement

9ನೇ ತರಗತಿಯಲ್ಲಿದ್ದಾಗಲೇ ಸರಳಾ ಸಿನಿಮಾದಲ್ಲಿ ಅಭಿನಯಿಸುವಂತೆ ಆಫರ್ ಗಿಟ್ಟಿಸಿಕೊಂಡಿದ್ದರು. ಅದರಂತೆ  ವೆಳ್ಳಿ ರಥಂ ಎಂಬ ಮೊದಲ ಸಿನಿಮಾದಲ್ಲಿ ವಿಜಯ್ ಕುಮಾರ್ ಹಾಗೂ ಕೆಆರ್ ವಿಜಯ್ ಜತೆ ಸರಳಾ ನಟಿಸಿದ್ದರು. 10ನೇ ತರಗತಿಯಲ್ಲಿದ್ದಾಗ ಮುಂಧಾನೈ ಮುಡಿಚು ಎಂಬ 2ನೇ ತಮಿಳು ಸಿನಿಮಾದಲ್ಲಿ ಸರಳಾ 32 ವರ್ಷದ ಗರ್ಭಿಣಿ ಪಾತ್ರ ಮಾಡಿದ್ದರಂತೆ! ಈ ಸಿನಿಮಾದಲ್ಲಿ ಕೆ.ಭಾಗ್ಯರಾಜ್, ಊರ್ವಶಿ ಮುಖ್ಯಭೂಮಿಕೆಯಲ್ಲಿದ್ದರು.

ಎರಡು ವರ್ಷದ ಬಳಿಕ ಚಿನ್ನ ವೀಡು ಎಂಬ ತಮಿಳು ಚಿತ್ರದಲ್ಲಿ ನಟಿ ಸರಳಾ ಭಾಗ್ಯರಾಜ್ ಪಾತ್ರಧಾರಿಯ 65 ವರ್ಷ ಪ್ರಾಯದ ತಾಯಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು! ಹೀಗೆ ತಮಿಳು, ತೆಲುಗು ಸೇರಿ 700ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಹೆಗ್ಗಳಿಕೆ ಕೋವೈ ಸರಳಾ ಅವರದ್ದು.

1988ರಲ್ಲಿ ಕನ್ನಡದ ಅರ್ಜುನ್, 1993ರಲ್ಲಿ ಅಳಿಮಯ್ಯ ಹಾಗೂ ಹೆಂಡ್ತಿ ಹೇಳಿದ್ರೆ ಕೇಳ್ಬೇಕು ಸಿನಿಮಾದಲ್ಲಿ ಕೋವೈ ಸರಳಾ ನಟಿಸಿದ್ದರು. ಮಲಯಾಳಂನ ನೀರಂ, ಕೇರಳ ಹೌಸ್ ಉದಾನ್ ವಿಲ್ಪಾನಕ್ಕೂ, ಗರ್ಲ್ಸ್ ಸಿನಿಮಾಗಳಲ್ಲಿ ಅಭಿನಯಿಸಿದ್ದರು. 1995ರಲ್ಲಿ ತಮಿಳಿನಲ್ಲಿ ಬಿಡುಗಡೆಯಾಗಿದ್ದ ಸತೀ ಲೀಲಾವತಿ, ಕಾರಗಟ್ಟಾರನ್, ವಿಶ್ವನಾಥನ್ ರಾಮಮೂರ್ತಿ, ವಿರಾಲುಕ್ಕೇಥಾ ವೆಕ್ಕಂ ಸಿನಿಮಾ ಅವರು ಖಾಸಗಿಯಾಗಿ ಇಷ್ಟಪಡುವ ಸಿನಿಮಾಗಳಲ್ಲಿ ಒಂದಾಗಿದೆಯಂತೆ. ಸತೀ ಲೀಲಾವತಿ ಸಿನಿಮಾದಲ್ಲಿ ಕಮಲ್ ಹಾಸನ್, ರಮೇಶ್ ಅರವಿಂದ್, ಕಲ್ಪನಾ, ಹೀರಾ ಅಭಿನಯಿಸಿದ್ದರು. ಸರಳಾ ಕೂಡಾ ಈ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಅಕ್ಕಂದಿರ ಮಕ್ಕಳ ಪೋಷಣೆಗಾಗಿ ಅವಿವಾಹಿತೆಯಾದ ಸರಳಾ!

ಚಿಕ್ಕ ವಯಸ್ಸಿನಲ್ಲಿಯೇ ಕುಟುಂಬದ ನಿರ್ವಹಣೆ ಮಾಡುತ್ತ, ಮಾಡುತ್ತ ನಟಿ ಸರಳಾ ನಟನೆಯೇ ತನ್ನ ಬದುಕನ್ನಾಗಿಸಿಕೊಂಡುಬಿಟ್ಟಿದ್ದರು. ನಿಮಗೆ ಮದುವೆಯಾಗಿದೆಯೇ ಎಂದು ಸಂದರ್ಶನವೊಂದರಲ್ಲಿ ಪ್ರಶ್ನಿಸಿದ್ದಾಗ..ಇಲ್ಲ. ನನಗೆ ಅಷ್ಟು ಸಮಯವೂ ಇರಲಿಲ್ಲವಾಗಿತ್ತು, ನನಗೆ ನನ್ನ ಸಹೋದರಿಯರ ಮಕ್ಕಳೇ ನನ್ನ ಮಕ್ಕಳು ಎಂಬಂತೆ ಸಾಕಿ, ಸಲಹಿದ್ದೇನೆ ಎಂದು ಹೇಳಿದ್ದರು.

ಸದ್ಯ ಟಿವಿ ಸೀರಿಯಲ್ ಹಾಗೂ ಟೆಲಿವಿಷನ್ ರಿಯಾಲಿಟಿ ಶೋಗಳಲ್ಲಿ ಬ್ಯುಸಿಯಾಗಿರುವ ನಟಿ ಸರಳಾ. ತಮಿಳು ಕಾಮಿಡಿ ಶೋನಲ್ಲಿ ಖಾಯಂ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸರಳಾ ಅವರ ಅದ್ಭುತ ಹಾಸ್ಯ ನಟನೆಗಾಗಿ 1995ರಲ್ಲಿ ತಮಿಳುನಾಡು ಸ್ಟೇಟ್ ಫಿಲ್ಮ್ ಪ್ರಶಸ್ತಿ, ನಂದಿ ಪ್ರಶಸ್ತಿ, ವಿಜಯ್ ಪ್ರಶಸ್ತಿ, ಕಾಂಚನಾದಲ್ಲಿನ ಬೆಸ್ಟ್ ಕಾಮಿಡಿ ಪಾತ್ರಕ್ಕಾಗಿ ಐಐಎಫ್ ಎ ಪ್ರಶಸ್ತಿ ಪಡೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next