ಕೊಟ್ಟೂರು: ಪಟ್ಟಣದಲ್ಲಿರುವ ತಾಲೂಕು ಸಾರ್ವಜನಿಕ ಗ್ರಂಥಾಲಯದಲ್ಲಿ ಮೂಲ ಸೌಕರ್ಯ ಕೊರತೆಯಿಂದ ಓದುಗರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. 1970ರಲ್ಲಿ ಗ್ರಂಥಾಲಯ ಆರಂಭಗೊಂಡಿದ್ದು, 2002ರಲ್ಲಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿದೆ.
ಪಟ್ಟಣದ ಹಳೆಬಾವಿಯ ಹತ್ತಿರದಲ್ಲಿರುವ ಗ್ರಂಥಾಲಯಕ್ಕೆ ವಿದ್ಯಾರ್ಥಿಗಳು, ಹಿರಿಯರು ಸೇರಿದಂತೆ ಪ್ರತಿನಿತ್ಯ 200ರಿಂದ 250 ಜನ ಬರುತ್ತಾರೆ. ಕಟ್ಟಡ ಇಕ್ಕಟ್ಟಿನಿಂದ ಕೂಡಿರುವುದರಿಂದ ಓದುಗರಿಗೆ ಸ್ಥಳದ ಅಭಾವವಿದೆ. ಕೇವಲ 20 ಕುರ್ಚಿಗಳು ಮಾತ್ರವಿದ್ದು ಹೆಚ್ಚಿನ ಓದುಗರು ಬಂದರೆ ಹೊರಗೆ ಕುಳಿತು ಓದುವ ಸ್ಥಿತಿ ಇದೆ. ಗ್ರಂಥಾಲಯದಲ್ಲಿ 5 ಅಲ್ಮೆರಾ, 10 ರ್ಯಾಕ್, 20 ಕುರ್ಚಿಗಳಿವೆ. ಗ್ರಂಥಾಲಯದಲ್ಲಿ ಸುಮಾರು 29,246 ಪುಸ್ತಕಗಳಿವೆ. ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ದಿನಪತ್ರಿಕೆಗಳು ಬರುತ್ತವೆ.
ಸೌಲಭ್ಯಗಳಿಲ್ಲ: ಗ್ರಂಥಾಲಯ ಕುಡಿಯುವ ನೀರಿನ ವ್ಯವಸ್ಥೆ, ಸ್ಥಳ ಅಭಾವ, ಶೌಚಾಲಯ ಸೇರಿದಂತೆ ಹಲವಾರು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದೆ. ಪಟ್ಟಣ ಪಂಚಾಯಿತಿಯಿಂದ ಯಾವುದೇ ಅನುದಾನವಿಲ್ಲ. ಗ್ರಂಥಾಲಯಕ್ಕೆ ಸಿಬ್ಬಂದಿ ಕೊರತೆ ಇದ್ದು ಗ್ರಂಥಾಲಯ ಸಹವರ್ತಿ ಮತ್ತು ಜವಾನನ ಅವಶ್ಯಕತೆಯಿದೆ.
ನಿರ್ವಹಣೆ ಕೊರತೆ: ಗ್ರಂಥಾಲಯ ನಿರ್ವಹಣೆ ಕೊರತೆಯಿಂದ ಬಳಲುತ್ತಿದೆ. ಕಟ್ಟಡ ಅಲ್ಲಲ್ಲಿ ಬಿರುಕು ಬಿಟ್ಟಿದ್ದು ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ. ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಸ್ಥಳೀಯ ಆಡಳಿತ ಸ್ವಚ್ಛತೆಗೆ ಮುಂದಾಗಿಲ್ಲ. ಗ್ರಂಥಾಲಯಗಳ ಪುನಶೇcತನಕ್ಕೆ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸುತ್ತಿಲ್ಲ. ಸದಸ್ಯತ್ವ ದರ ಹೆಚ್ಚು: ಗ್ರಂಥಾಲಯ ಸದಸ್ಯತ್ವ ಪಡೆಯಲು 107 ರೂ. ನಿಗದಿ ಮಾಡಲಾಗಿದೆ. ಈ ಮೊದಲು 50 ರೂ.ಇತ್ತು. ಈವರೆಗೂ 2275 ಸದಸ್ಯತ್ವ ನೋಂದಣಿಯಾಗಿದೆ. ಒಟ್ಟಾರೆಯಾಗಿ ಗ್ರಂಥಾಲಯಕ್ಕೆ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ, ಇಂಗ್ಲಿಷ್ ದಿನಪತ್ರಿಕೆಗಳು, ಸಾಹಿತ್ಯಕ ಪುಸ್ತಕಗಳ ಬೇಡಿಕೆ ಇದೆ. ಪುಸ್ತಕ ಸಂಗ್ರಹಣೆಗೆ ಇನ್ನೊಂದು ಕಟ್ಟಡ ಅವಶ್ಯಕತೆ ಇದೆ.