Advertisement

ಇಂದು ಉಜ್ಜಯಿನಿ ಮರುಳ ಸಿದ್ದೇಶ್ವರ ಸ್ವಾಮಿ ರಥೋತ್ಸವ

10:12 AM May 09, 2019 | Naveen |

ಕೊಟ್ಟೂರು: ಪಂಚಪೀಠ ಖ್ಯಾತಿಯ ಉಜ್ಜಯಿನಿ ಮರುಳು ಸಿದ್ದೇಶ್ವರ ಸ್ವಾಮಿಯ ಮಹಾ ರಥೋತ್ಸವ ಮೇ 9ರಂದು ಗುರುವಾರ ನಡೆಯಲಿದೆ. ಉಜ್ಜಯಿನಿ ಮರುಳ ಸಿದ್ದೇಶ್ವರಸ್ವಾಮಿ ದೇವಾಲಯ ಕೇವಲ ವೀರಶೈವ ಪಂಚಪೀಠವಾಗಿರದೆ ಪೌರಾಣಿಕ, ಐತಿಹಾಸಿಕ, ಧಾರ್ಮಿಕ, ಉತ್ಕೃಷ್ಟ ಮಾದರಿ ಶಿಲ್ಪ ಕಲೆಯ ತವರೂರಾಗಿದೆ. ಹಂಪೆಯ ಶಿಲ್ಪಕಲಾ ವೈಭವ ಮತ್ತು ಉಜ್ಜಯಿನಿಯ ದೇವಾಲಯದ ಶಿಲ್ಪಕಲೆಯ ಸೂಕ್ಷ್ಮ ಅವಲೋಕಿಸಿದ ಪೂರ್ವಜರು ಹಂಪಿಯನ್ನು ಹೊರಗೆ ನೋಡು, ಉಜ್ಜಯಿನಿಯನ್ನು ಒಳಗೆ ನೋಡು ಎಂದಿರುವುದು ಅತಿಶೋಕ್ತಿಯ ಮಾತಲ್ಲ. ಉತ್ತರ ದಿಕ್ಕಿನಿಂದ ಪ್ರವೇಶಿದರೆ ಗಾರೆ ಇಟ್ಟಿಗೆಯಿಂದ ನಿರ್ಮಿಸಿರುವ ವಿಜಯನಗರ ಶೈಲಿಯ ನಾಲ್ಕು ಅಂತಸ್ತಿನ ಗೋಪುರವಿರುವುದು ಕಾಣುತ್ತದೆ. ಇದನ್ನು ಮೊದಲು ತಂಗಾಳಿ ಗೋಪುರವೆಂದು ಕರೆಯುತ್ತಿದ್ದರು. ಇಲ್ಲಿಯೇ ಪೀಠದ ಜಗದ್ಗುರುಗಳು ಅಂತಸ್ತಿನ ಪ್ರಶಾಂತವಾದ ಸ್ಥಳದಲ್ಲಿ ಸಂಸ್ಕೃತ ಪಠಿಸಿ, ಗ್ರಂಥ ರಚಿಸುತ್ತಿದ್ದರು ಎಂದು ಇತಿಹಾಸ ಹೇಳುತ್ತದೆ.

Advertisement

ದೇವಸ್ಥಾನದ ಹೊರ ಮೇಲ್ಬಾಗದಲ್ಲಿರುವ ಗರ್ಭಗುಡಿ ಶಿಖರವು ಮೂಲತಃ ಸುಂದರ ಕೆತ್ತನೆಯಿಂದಿರಬಹುದಾಗಿದೆ. ಶಿಖರಕ್ಕೆ ಪ್ರತಿ ವರ್ಷವೂ ತೈಲಾಭಿಷೇಕ ನಡೆಯುವುದರಿಂದ ಎಣ್ಣೆಯ ಜಿಡ್ಡಿನಿಂದ ಕೆತ್ತನೆ ಕಾಣದಂತಾಗಿದೆ. ಶಿಖರದ ತೈಲಾಭಿಷೇಕ ದಕ್ಷಿಣ ಭಾರತದಲ್ಲಿಯೇ ವಿಶಿಷ್ಟ ಆಚರಣೆಯಾಗಿದೆ. ಇಡೀ ಶಿಖರಕ್ಕೆ ತೈಲವನ್ನು ಸುರಿಯುವುದು ಇಲ್ಲಿನ ವಿಶಿಷ್ಟ ಸಂಪ್ರದಾಯವೆನಿಸಿದೆ. ಪ್ರಸ್ತುತ ಪೀಠದ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪೀಠವು ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆ ಮಾಡುವತ್ತ ತನ್ನನ್ನು ತಾನು ತೊಡಗಿಸಿಕೊಂಡಿದೆ ಉಜ್ಜಯಿನಿ ಪೀಠ.

ಸದ್ಧರ್ಮ ಪೀಠದ ವಾರ್ಷಿಕ ಧಾರ್ಮಿಕ ಮಹೋತ್ಸವ ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವಕ್ಕೆಂದೆ ಈಗಾಗಲೇ ಎಲ್ಲ ಬಗೆಯ ಸಿದ್ಧತೆ ಕೈಗೊಳ್ಳಲಾಗಿದೆ. ಈ ಬಾರಿಯ ರಥೋತ್ಸವ ಪ್ರಯುಕ್ತ ಸಾಮೂಹಿಕ ವಿವಾಹ, ಶಿವದೀಕ್ಷೆ ಕಾರ್ಯಕ್ರಮಗಳು ಇನ್ನೂ ಅನೇಕ ಧಾರ್ಮಿಕ ಕೈಂಕರ್ಯ ಹಮ್ಮಿಕೊಳ್ಳಲಾಗಿದೆ.
•ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರು,
ಉಜ್ಜಯಿನಿ ಸದ್ಧರ್ಮ ಪೀಠ.

ಮಹಾರಥೋತ್ಸವ ಹಿನ್ನೆಲೆಯಲ್ಲಿ ಸಿದ್ಧಪಡಿಸಿದ ರಥವನ್ನು ಪರೀಕ್ಷಿಸಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್‌ ಸುರಕ್ಷತಾ ಪ್ರಮಾಣ ಪತ್ರ ನೀಡಿದ್ದಾರೆ. ಯಾವುದೇ ಅವಘಡ ಆಗದಂತೆ ಎಲ್ಲ ಬಗೆಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಜನರ ನಿಯಂತ್ರಣಕ್ಕೆಂದೆ ಭಾರೀ ಪ್ರಮಾಣದಲ್ಲಿ ಪೊಲೀಸ್‌ ಬಂದೋಬಸ್ತ್ ನಿಯೋಜಿಸಲು ಸೂಚಿಸಲಾಗಿದೆ.
•ರವೀಂದ್ರ ಕುರಬಗಟ್ಟಿ, ಸಿಪಿಐ.

Advertisement

Udayavani is now on Telegram. Click here to join our channel and stay updated with the latest news.

Next