ಕೊಟ್ಟೂರು: ಕೊಟ್ಟೂರು-ಹೊಸಪೇಟೆ ನಡುವಿನ 71 ಕಿಮೀ ರೈಲು ಮಾರ್ಗದಲ್ಲಿ ಮೂರು ಗೇಟ್ ಮುಚ್ಚುವ ಕುರಿತು ಸಾರ್ವಜನಿಕರಿಂದ ಉಂಟಾಗಿರುವ ಸಮಸ್ಯೆಗಳ ಕುರಿತು ಹುಬ್ಬಳ್ಳಿ ರೈಲ್ವೆ ವಲಯದ ವಿಭಾಗೀಯ ಇಂಜಿನಿಯರ್ ಕೃತ್ಯಾನಂದ ಝಾ ಶೀಘ್ರದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹರಿಸಲು ಮುಂದಾಗುವುದಾಗಿ ಹೇಳಿದರು.
ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಪೂರ್ವಸಿದ್ಧತೆ ಪರಿಶೀಲನೆಗಾಗಿ ಹುಬ್ಬಳ್ಳಿಯಿಂದ ಆಗಮಿಸಿದ್ದ ಕೃತ್ಯಾನಂದ ಝಾ ಅವರು ಇಲ್ಲಿನ ರೈಲ್ವೆ ಹೋರಾಟ ಸಮಿತಿಯವರೊಂದಿಗೆ ಮಾತನಾಡಿದರು. ಮಾರ್ಗದ ಮಧ್ಯೆ 30ಕ್ಕೂ ಹೆಚ್ಚು ಮ್ಯಾನುವಲ್ ಗೇಟ್‌ಗಳಿದ್ದವು. ಎಲ್ಲ ಗೇಟ್‌ಗಳನ್ನು ಮುಚ್ಚಲು ಈಗಾಗಲೇ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದಿದೆ. ಅನೇಕ ಕಡೆ ಗೇಟ್ ಮುಚ್ಚಿ ಸಾರ್ವಜನಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಿದೆ. ಆದರೆ ಕೊಟ್ಟೂರು ತಾಲೂಕಿನ ದೂಪದಹಳ್ಳಿ ಭಾಗಗಳ ಗೇಟ್ ಮುಚ್ಚದಂತೆ ಅಲ್ಲಿನ ಸಾರ್ವಜನಿಕರು ತಕರಾರು ಮಾಡುತ್ತಿದ್ದಾರೆ. ಹ.ಬೊ.ಹಳ್ಳಿ ತಾಲೂಕಿನ ಪಿಂಜಾರ್ ಹೆಗ್ಡಾಳ್, ಕ್ಯಾತ್ಯಾಯನಮರಡಿ, ಈ ಗೇಟ್‌ಗಳನ್ನು ಮುಚ್ಚಿ ಅವರಿಗೆ ಪರ್ಯಾಯವಾಗಿ ಪಕ್ಕಾ ಡಾಂಬರ್ ರಸ್ತೆ ನಿರ್ಮಿಸಲಾಗುವುದು. ಆದರೆ ಜನರು ಮಾತ್ರ ಗೇಟ್ ಇರಬೇಕೆಂದು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಶೀಘ್ರದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಕೊಟ್ಟೂರು-ಹೊಸಪೇಟೆ ಮತ್ತು ಕೊಟ್ಟೂರು-ಹರಿಹರ ನಡುವೆ ಅನೇಕ ಕಡೆ ಸಾರ್ವಜನಿಕರಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಬಳ್ಳಾರಿಯ ಸಂಸದ ದೇವೇಂದ್ರಪ್ಪ ಮತ್ತು ದಾವಣಗೆರೆ ಸಂಸದ ಜಿ.ಎಂ. ಸಿದ್ಧೇಶ್ವರ ಅವರ ಗಮನಕ್ಕೂ ತರುತ್ತೇವೆ ಎಂದರು.
ಈಗಾಗಲೇ ಕೊಟ್ಟೂರು-ಹರಿಹರ ನಡುವೆ ರೈಲು ಸಂಚಾರವಿದೆ. ಆದರೆ ತೆಲಗಿ ಭಾಗದಲ್ಲಿ ಉಂಟಾಗಿರುವ ಸಮಸ್ಯೆಗಳಿಂದ ರೈಲು ಸಂಚಾರದ ವೇಗದ ಮಿತಿ ತಗ್ಗಿಸಲಾಗಿದೆ. ಹೊಸಪೇಟೆ ಕೊಟ್ಟೂರು ನಡುವೆ ರೈಲು ಸಂಚಾರ ಆರಂಭಿಸಲು ಮಾರ್ಗದಲ್ಲಿನ ಎಲ್ಲ ಕಾಮಗಾರಿಗಳನ್ನು ಇಲಾಖೆ ವತಿಯಿಂದ ಕೈಗೊಂಡು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸಲಾಗುವುದು. ರೈಲು ಸಂಚಾರ ಆರಂಭಕ್ಕೆ ಸುರಕ್ಷಾ ಪ್ರಮಾಣ ಪತ್ರಕ್ಕಾಗಿ ಸಿಆರ್‌ಎಸ್‌ಗೆ ಪತ್ರ ಬರೆಯಲಾಗುವುದು. ಆಗಸ್ಟ್ ಕೊನೆ ವಾರದಲ್ಲಿ ಸಿಆರ್‌ಎಸ್‌ನ ಪ್ರಯೋಗಾರ್ಥ ರೈಲು ಸಂಚಾರ ಆರಂಭಿಸುವ ನಿರೀಕ್ಷೆಯಿಂದ ಇಲಾಖೆ ನಿಗದಿಪಡಿಸಿಕೊಂಡಿರುವ ಸಮಯಕ್ಕೆ ಎಲ್ಲ ಕೆಲಸಗಳು ಪೂರ್ಣಗೊಂಡಲ್ಲಿ ಸೆಪ್ಟೆಂಬರ್‌ನಲ್ಲಿ ರೈಲು ಸಂಚಾರ ಪ್ರಾರಂಭಿಸಲಾಗುವುದು ಎಂದರು.
ಸಹಾಯಕ ವಿಭಾಗೀಯ ಇಂಜಿನಿಯರ್ ಬಷೀರ್ ಮಾತನಾಡಿ, ಕೊಟ್ಟೂರು ಹೊಸಪೇಟೆ ನಡುವಿನ ಎಲ್ಲ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿವೆ. ಇಲಾಖೆ ವತಿಯಿಂದ ಯಾವುದೇ ಕಾಮಗಾರಿ ಬಾಕಿ ಉಳಿಸದಂತೆ ಎಚ್ಚರ ವಹಿಸಿದೆ. ಆದರೆ ಮೂರು ಗೇಟ್‌ಗಳ ಸಮಸ್ಯೆ ಬಗೆಹರಿಸಲು ಸ್ಥಳೀಯ ಸಹಕರಿಸಬೇಕು ಎಂದರು.
ರೈಲ್ವೆ ಹೋರಾಟ ಸಮಿತಿ ಕಾರ್ಯದರ್ಶಿ ಪಿ.ಶ್ರೀಧರಶೆಟ್ಟಿ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆಯ ಸವಿ ನೆನಪಿಗಾಗಿ ಆ.15ಕ್ಕೆ ಕೊಟ್ಟೂರು-ಹೊಸಪೇಟೆ ನಡುವೆ ರೈಲ್ವೆ ಸಂಚಾರ ಆರಂಭಿಸಲು ಒತ್ತಾಯಿಸಿದರು. ಗೇಟ್‌ಗಳನ್ನು ಮುಚ್ಚಲು ಉಂಟಾಗಿರುವ ಸಮಸ್ಯೆ ಬಗೆಹರಿಸುವಂತೆ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗಳು, ಸಂಸದರು, ಶಾಸಕರಲ್ಲೂ ಒತ್ತಾಯಿಸುತ್ತೇವೆ ಎಂದು ಅಧಿಕಾರಿಗಳು ಭರವಸೆ ನೀಡಿದರು.
ಸಹಾಯಕ ಇಂಜಿನಿಯರ್ ಕೃಷ್ಣಪ್ಪ, ರೈಲ್ವೆ ಮಾಸ್ಟರ್ ನರಸಿಂಹಮೂರ್ತಿ, ರೈಲ್ವೆ ಹೋರಾಟ ಸಮಿತಿಯ ಸದಸ್ಯರಾದ ಟಿ.ಚನ್ನಬಸಪ್ಪ, ವಿಜಕುಮಾರ್ ಚವ್ಹಾಣ, ಪಂಚಣ್ಣ, ಈರಗಾರ, ವರ್ತಕರಾದ ಅನಿಲ್ಕುಮಾರ್, ಬಿ.ಎಸ್.ವೀರೇಶ್, ಜನಾರ್ದನಶೆಟ್ಟಿ ಇತರರಿದ್ದರು.