ರವಿಕುಮಾರ .ಎಂ.
ಕೊಟ್ಟೂರು: ತಾಲೂಕಿನಲ್ಲಿ 30 ಹಾಸಿಗೆ ಸಮುದಾಯ ಆರೋಗ್ಯ ಕೇಂದ್ರವಿದ್ದರೂ ತಜ್ಞ ವೈದ್ಯರುಗಳಿಲ್ಲದೇ, ಮೂಲ ಸೌಕರ್ಯವಿಲ್ಲದೇ ಸೊರಗಿದೆ.
ಪಟ್ಟಣದಲ್ಲಿ ಸರ್ಕಾರಿ ಆಸ್ಪತ್ರೆ ಹೊಸ ಕಟ್ಟಡ ನಿರ್ಮಾಣವಾದಾಗಿನಿಂದಲೂ ಇಲ್ಲಿ ತಜ್ಞ ವೈದ್ಯರ ಕೊರತೆ ಕಾಡುತ್ತಲೇ ಇದೆ. ಇರುವ ಒಬ್ಬ ಕಾಯಂ ವೈದ್ಯರನ್ನು ಸಹ ಉಳಿಸಿಕೊಳ್ಳದೇ ಬೇರೆಡೆಗೆ ವರ್ಗಾಯಿಸಿದ್ದಾರೆ.
ಕೊಟ್ಟೂರು ತಾಲೂಕು ಒಟ್ಟು 40 ಸಾವಿರ ಜನಸಂಖ್ಯೆ ಹೊಂದಿದ್ದು, ಪ್ರತಿನಿತ್ಯ ಆಸ್ಪತ್ರೆಗೆ ಬರುವ ರೋಗಿಗಳ ಸಂಖ್ಯೆ ಹೆಚ್ಚು. ವೈದ್ಯರ ಕೊರತೆಯಿಂದಾಗಿ ಹೊರ ರೋಗಿಗಳು ಗಂಟೆಗಟ್ಟಲೇ ಕಾದು ಕುಳಿತುಕೊಳ್ಳಬೇಕಿದೆ. ಇಲ್ಲಿ ಪ್ರಸೂತಿ ತಜ್ಞರೇ ಇಲ್ಲ, ಸ್ಟಾಫ್ ನರ್ಸ್‌ಗಳ ಕೊರತೆಯೂ ಇದೆ. ಹರಿದುಹೋದ ಬೆಡ್‌ಗಳಲ್ಲೇ ರೋಗಿಗಳು ಮಲಗುವ ಸ್ಥಿತಿ ಇದೆ.
ತುರ್ತು ಚಿಕಿತ್ಸೆಗೆ ರೋಗಿಗಳು ಬಂದರೆ ಇಲ್ಲಿ ಕೇಳುವವರೇ ಇಲ್ಲ. ಮಾತ್ರೆ ತೆಗೆದುಕೊಳ್ಳಲು ಶುದ್ಧ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಗಬ್ಬು ನಾರುತ್ತಿದ್ದು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇದೆ. ಆಸ್ಪತ್ರೆ ಸುತ್ತಲೂ ಸ್ಛಚ್ಛತೆ ಕಾಣೆಯಾಗಿದೆ. ಸೊಳ್ಳೆಗಳ ಹಾವಳಿ ಹೆಚ್ಚಿದೆ. ಸಿಬ್ಬಂದಿ ಕೊರತೆ ಇದೆ. ಶೀಘ್ರವಾಗಿ ತಜ್ಞ ವೈದ್ಯರನ್ನು, ಸಿಬ್ಬಂದಿಯನ್ನು ನೇಮಿಸಬೇಕಾಗಿ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಮಸ್ಯೆಗಳು ಇರುವುದು ಸಹಜ. ಆದರೆ ಸಮಸ್ಯೆಯೇ ಬದುಕಾದರೆ ನಾವು ಉಳಿಯುವುದೇಲ್ಲಿ. ತುರ್ತು ಚಿಕಿತ್ಸೆಗೆ ರೋಗಿಗಳು ಪರದಾಡುವ ಪರಿಸ್ಥಿತಿ ಎದುರಾಗಿದೆ. ಹೆರಿಗೆ ಸಂದರ್ಭದಲ್ಲಿ ಸಿಜೇರಿಯನ್ ಮಾಡಿಸಲು ಸೂಕ್ತ ವೈದ್ಯರುಗಳಿಲ್ಲ್ಲದ ಕಾರಣ ನಾವು ಬೇರೆ ಊರಿಗೆ ಹೋಗಬೇಕಾದ ಪರಿಸ್ಥಿತಿ ಇದೆ. ಆದ್ದರಿಂದ ಸೂಕ್ತ ಪ್ರಸೂತಿ ವೈದ್ಯರನ್ನು ನೇಮಿಸಿ.
•
ಸ್ಥಳೀಯ ರೋಗಿ, ಕೊಟ್ಟೂರು
ಕ್ರಮ ಕೈಗೊಳ್ಳುವೆ
ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ. ಕಾಯಂ ವೈದ್ಯರನ್ನು ನೇಮಿಸಲು ಮೇಲಧಿಕಾರಿಗಳಿಗೆ ತಿಳಿಸುವೆ. ವೈದ್ಯರು ಮತ್ತು ಸಿಬ್ಬಂದಿ ಕೊರತೆ ಇಲ್ಲದಂತೆ ನೋಡಿಕೊಂಡು ಆಸ್ಪತ್ರೆಯಲ್ಲಿ ನೈರ್ಮಲ್ಯತೆ ಕಾಪಾಡಿಕೊಂಡು ಹೋಗಲು ಕ್ರಮ ಕೈಗೊಳ್ಳುವೆ.
•
ಶಿವರಾಜ ಹೆಡೆ,
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಬಳ್ಳಾರಿ