ಬಳ್ಳಾರಿ: ಒಳಪಂಗಡಗಳ ಮೀಸಲಾತಿ ಹೋರಾಟದಿಂದ ವೀರಶೈವ ಗೌಣ ಆಗಬಾರದು ಎಂದು ಕೊಟ್ಟೂರುಸ್ವಾಮಿ ಮಠದ ಡಾ| ಸಂಗನಬಸವ ಸ್ವಾಮೀಜಿ ಪ್ರತಿಪಾದಿಸಿದರು.
ನಗರದ ಕೊಟ್ಟೂರುಸ್ವಾಮಿ ಮಠದ ಕಲ್ಯಾಣ ಮಂಟಪದಲ್ಲಿ ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ನೀಡಿ, ಪ್ರಮಾಣ ವಚನ ಬೋಧಿಸುವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಯಾವುದೇ ಹೋರಾಟಗಳು ಭಾವೈಕ್ಯತೆಗೆ ಕಾರಣ ಆಗಬೇಕು. ತಮ್ಮನ್ನು 2ಎ ಗೆ ಸೇರಿಸಿ ಎಂದು ಪಂಚಮಸಾಲಿಯವರು ಪ್ರಬಲ ಪ್ರದರ್ಶನ ಮಾಡುತ್ತಿದ್ದಾರೆ. ಅದು ಏನೇ ಇರಲಿ. ಆದರೆ, ಈ ವಿವಿಧ ಒಳ ಪಂಗಡಗಳ ಮೀಸಲಾತಿ ಹೋರಾಟದಿಂದ ವೀರಶೈವ ಗೌಣ ಆಗಬಾರದು. ಒಳ ಪಂಗಡಗಳ ಬಗ್ಗೆ ಯಾರೇ ಪ್ರಶ್ನಿಸಿದರೂ, ಮೊದಲು ವೀರಶೈವ ಎಂದು ಹೇಳಬೇಕು. ಈ ನಿಟ್ಟಿನಲ್ಲಿ ತಾವೆಲ್ಲರೂ ಪ್ರಾಮಾಣಿಕವಗಿ ನಡೆದುಕೊಳ್ಳಬೇಕು ಎಂದು ಕೋರಿದರು.
ಶೇ.15ಕ್ಕೆ ಇಳಿಕೆ: ರಾಜ್ಯದಲ್ಲಿ ವೀರಶೈವ ಸಮುದಾಯ ಈ ಮೊದಲು ಶೇ.35ರಷ್ಟು ಜನಸಂಖ್ಯೆಯಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ ಅವ ಧಿಯಲ್ಲಿ ವೀರಶೈವ-ಲಿಂಗಾಯತ ಎಂದು ಬೇರ್ಪಡಿಸಿ, ವೀರಶೈವ ಸಮುದಾಯವನ್ನು ಶೇ.15ಕ್ಕೆ ಇಳಿಸಲಾಗಿದೆ.
ಇದು ಸಮುದಾಯದ ಅಭಿವೃದ್ಧಿಗೆ ಸಮಸ್ಯೆಯಾಗಲಿದ್ದು, ವೀರಶೈವರೆಲ್ಲರೂ ಒಗ್ಗೂಡಬೇಕು ಎಂದು ಕೋರಿದರು. ಅಖೀಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಕಚೇರಿ ನಿರ್ಮಾಣಕ್ಕೆ ಮಠದಿಂದ ತಾವು ಒಂದುಲಕ್ಷ ರೂ. ದೇಣಿಗೆ ನೀಡುವುದಾಗಿ ಹೇಳಿದರಲ್ಲದೆ, ಶ್ರೀಮಂತರು ಸಹಕಾರ ನೀಡಬೇಕು. ತಾಲೂಕು ಮಟ್ಟದಲ್ಲಿ ಸಮಿತಿ ರಚಿಸಿ ಜನಗಣತಿ ಮಾಡಬೇಕು ಎಂದು ಸಲಹೆ ನೀಡಿದರು.
ಮಹಾಸಭಾದ ರಾಜ್ಯಾಧ್ಯಕ್ಷ ಎನ್.ತಿಪ್ಪಣ್ಣ ಮಾತನಾಡಿ, ಮಹಾಸಭಾ ಬೆಳೆದು ಬಂದ ಹಾದಿಯ ಬಗ್ಗೆ ವಿವರಿಸಿದರು. ಮಹಾಸಭಾದ ನೂತನ ಜಿಲ್ಲಾಧ್ಯಕ್ಷ ಚಾನಾಳ್ ಶೇಖರ್ ಸ್ವಾಗತಿಸಿದರು. ಮಹಾಸಭಾದ ಕಾರ್ಯದರ್ಶಿ ಶ್ರೀನಿವಾಸರೆಡ್ಡಿ, ದರೂರು ಪುರುಷೋತ್ತಮಗೌಡ, ಕೇಣಿ ಬಸಪ್ಪ, ಚುನಾವಣಾಧಿಕಾರಿ ಯಾಗಿದ್ದ ಎನ್.ಪಿ.ಲಿಂಗನಗೌಡ ಸೇರಿ ಹಲವರು ಇದ್ದರು. ನಿವೃತ್ತ ಉಪನ್ಯಾಸಕ ರಾಜಶೇಖರ ಅವರು ಪ್ರಮಾಣ ವಚನ ಬೋಧಿಸಿದರು.