ಹೊಸಪೇಟೆ: ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಿದಲ್ಲಿ ರಾಜ್ಯದಲ್ಲಿ ಬಿಜೆಪಿಗೆ ಉಳಿಗಾಲವಿಲ್ಲ ಎಂದು ಶ್ರೀ ಗುರು ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಸಂಗನಬಸವ ಮಹಾಸ್ವಾಮಿಗಳು ಭವಿಷ್ಯ ನುಡಿದರು.
ನಗರದ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಆರ್‌ಎಸ್‌ಎಸ್‌ನಲ್ಲಿ ಇರುವವರು ಜಾತಿವಾದಿಗಳು, ಅವರ ಮಾತು ಕೇಳಿ ಹೈಕಮಾಂಡ್ ಯಡಿಯೂರಪ್ಪನವರು ಸಿಎಂ ಸ್ಥಾನದಿಂದ ಕೆಳಗಿಸಿದರೆ, ಪಕ್ಷ ಉಳಿಯುವುದಿಲ್ಲ ಎಂದರು.
ಇದನ್ನೂ ಓದಿ:ಎರಡನೇ ವರ್ಷದ ಸಂಭ್ರಮದ ಬಿಎಸ್ ವೈ ಭೋಜನ ಕೂಟ ಮುಂದೂಡಿಕೆ!
ಬಿ.ಎಸ್. ಯಡಿಯೂರಪ್ಪ ಅವರು ಪ್ರಶ್ನಾತೀತ ಹಾಗೂ ಸಮರ್ಥ ನಾಯಕರು, ಅವರ ಪರಿಶ್ರಮ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಯಡಿಯೂರಪ್ಪನವರಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದೆ. ಯಡಿಯೂರಪ್ಪನವರ ಬಗ್ಗೆ ಹೈಕಮಾಂಡ್ ತಪ್ಪು ತಿಳುವಳಿಕೆ ಇದೆ. ಅವರು ಅಧಿಕಾರಕ್ಕೆ ಬಂದ ದಿನದಿಂದಲೂ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಚೆರ್ಚೆ ನಡೆಯುತ್ತಿದ್ದರೂ ಹೈಕಮಾಂಡ್ ಅವರಿಗೆ ಬೆಂಬಲ ನೀಡಲ್ಲಿಲ್ಲ. ಈ ಕಾರಣದಿಂದ ಇಂದು ಈ ಪರಿಸ್ಥಿತಿ ಉದ್ಭವಿಸಿದೆ ಎಂದರು.
ಆರ್‌ಎಸ್‌ಎಸ್ ಮಾತನ್ನು ಕೇಳಿ ಮುಖ್ಯಮಂತ್ರಿ ಬದಲಾವಣೆ ಚರ್ಚೆ ನಡೆಯುತ್ತಿದೆ. ಆರ್‌ಎಸ್‌ಎಸ್ ಮಾತು ಬೇರೆ ಪ್ರಾಂತದಲ್ಲಿ ನಡೆಯಬಹುದು ಕರ್ನಾಟಕದಲ್ಲಿ ನಡೆಯುವುದಿಲ್ಲ. ಮಹಾರಾಷ್ಟ್ರದಲ್ಲಿ ಆರ್‌ಎಸ್‌ಎಸ್ ಕೇಳಿ ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಿದರು. ಅಲ್ಲಿನ ಪರಿಸ್ಥಿತಿ ಈಗ ಏನಾಗಿದೆ? ಎಂದು ಪ್ರಶ್ನಿಸಿದರು.
ಯಡಿಯೂರಪ್ಪನವರು ವೀರಶೈವ ನಾಯಕ ಎಂದು ನಾವು ಬೆಂಬಲ ನೀಡುತ್ತಿಲ್ಲ. ಅವರು ಎಲ್ಲಾ ಧರ್ಮ, ಸಮುದಾಯವನ್ನು ಸಮಾನವಾಗಿ ಕಾಣುವಂತವರು. ಅವರಿಗೆ ಜನಪರ ಕಾಳಜಿ ಇದೆ. ಅವರನ್ನು ಬಿಟ್ಟು ಬೇರೆ ಯಾರನ್ನೂ ಸಿಎಂ ಮಾಡಿದರೂ ನಾವು ಒಪ್ಪುವುದಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರನ್ನು ಮುಂದುವರೆಸಬೇಕು ಎಂದು ಆಗ್ರಹಿಸಿದ ಶ್ರೀಗಳು, ಮುಂದಿನ ಪರಿಸ್ಥಿತಿಯಲ್ಲಿ ದಲಿತ ಸಿಎಂ ಎಂದು ವಿಚಾರ ಬಂದಾಗ ಗೋವಿಂದ ಕಾರಜೋಳ ಅವರನ್ನು ಮುಖ್ಯಮಂತ್ರಿ ಮಾಡಲಿ ಎಂದರು.