ಕೊಟ್ಟಿಗೆಹಾರ: ಬಾಲಕನೊಬ್ಬ ಯಾವುದೇ ಖರ್ಚಿಲ್ಲದೇ ಪ್ರಕೃತಿಯಿಂದ ಸಿಗುವ ವಸ್ತುಗಳನ್ನು ಬಳಸಿಕೊಂಡು ಗಣೇಶ ಹಬ್ಬದ ದಿನ ಗಣಪತಿ ಪ್ರತಿಷ್ಠಾಪಿಸಿ, 3 ದಿನಗಳ ಬಳಿಕ ಸಂಜೆ ವಿಸರ್ಜಿಸಿದ್ದಾನೆ. ಈ ಮೂಲಕ ಭಕ್ತಿಗೆ ಬಡತನವಿಲ್ಲವೆಂಬುದು ಈ ಘಟನೆಗೆ ಸಾಕ್ಷಿಯಾಗಿದೆ.
ಮೂಡಿಗೆರೆ ತಾಲೂಕಿನ ತಳವಾರ ಗ್ರಾಮದ ರುದ್ರಪ್ಪಗೌಡ ಎಂಬವರ ಕೂಲಿ ಲೈನ್‌ನಲ್ಲಿರುವ 11 ವರ್ಷದ ಅಶ್ವತ್ ಎಂಬ ಬಾಲಕ ಯಾವುದೇ ಖರ್ಚಿಲ್ಲದೇ ಗಣಪತಿ ಪ್ರತಿಷ್ಠಾಪಿಸಿ, ಸೋಮವಾರ ಸಂಜೆ ಸರ್ಜಿಸಿದ್ದಾನೆ.
ಅಶ್ವತ್ ಕೂಲಿ ಲೈನ್ ನಲ್ಲಿರುವ ರಸ್ತೆಯ ತಂತಿ ಬೇಲಿ ಪಕ್ಕದಲ್ಲಿ ಅಡಿಕೆ ಗಿಡದ ಬುಡಕ್ಕೆ ಹಾಕಲು ಟ್ರ್ಯಾಕ್ಟರ್‌ನಲ್ಲಿ ತಂದು ಸುರಿದಿದ್ದ ಮಣ್ಣಿನ ದಿಬ್ಬದ ಮೇಲೆ ಕಾಫಿ ಕೊಯ್ಯುವ ಟಾರ್ಪಲ್ ಬಳಸಿ ಗುಡಿ ನಿರ್ಮಿಸಿದ್ದಾನೆ. ಅದೇ ಮಣ್ಣನ್ನು ಬಳಕೆ ಮಾಡಿಕೊಂಡು ಸ್ವತಃ ತಾನೇ ಗಣಪತಿ ವಿಗ್ರಹ ನಿರ್ಮಿಸಿ, ವಿಗ್ರಹವನ್ನು ಮರದ ದಿಬ್ಬದ ಮೇಲೆ ಕುಳ್ಳಿರಿಸಿ ಗಣೇಶ ಹಬ್ಬದ ದಿನ ಪ್ರತಿಷ್ಠಾಪಿಸಿದ್ದಾನೆ.
ಗಣಪತಿಗೆ ಪೂಜೆ ಸಲ್ಲಿಸಲು ಸ್ಥಳೀಯವಾಗಿ ಸಿಗುವ ಮಾವು, ಹಲಸು, ಗಾಳಿ ಮರದ ಸೊಪ್ಪುಗಳಿಂದ ಅಲಂಕರಿಸಿ, ದಾಸವಾಳ, ಮಲ್ಲಿಗೆ, ನೊಜ್ಜೆ ಗಿಡದ ಹೂವಿನಿಂದ ಹಾಗೂ ರಂಗೋಲಿ ಬಿಡಿಸಿ ಸಿಂಗರಿಸಿದ್ದಾನೆ.
ಸೀಬೆಹಣ್ಣು, ಗರ್ಜೆಕಾಯಿ, ತೆಂಗಿನಕಾಯಿ ನೈವೇದ್ಯಕ್ಕಿಟ್ಟು 3 ದಿನ ಪೂಜಾ ಕಾರ್ಯ ನಡೆಸಿದ್ದಾನೆ. ನಂತರ ಪಲ್ಲಕ್ಕಿ ರೀತಿಯ ಅಡ್ಡೆಯನ್ನು ತಯಾರಿಸಿ ಅದರಲ್ಲಿ ಗಣಪತಿ ವಿಗ್ರಹ ಕೂರಿಸಿ, ತನ್ನ ಸಹಪಾಟಿ ಮಕ್ಕಳೊಂದಿಗೆ ಮೆರವಣಿಗೆ ಮೂಲಕ ಪಕ್ಕದ ದೊಡ್ಡಳ್ಳದಲ್ಲಿ ವಿಸರ್ಜನೆ ಮಾಡಲಾಗಿದೆ.
ಈ ಬಾಲಕನ ಭಕ್ತಿಗೆ ತೋಟದ ಮಾಲೀಕರು ಮತ್ತು ಗ್ರಾಮಾಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.