Advertisement

Kottigehara: ಮನೆಗೆ ನುಗ್ಗಿ ಖಾರದಪುಡಿ ಎರಚಿ 5ಲಕ್ಷ ರೂ., ಚಿನ್ನದ ಸರ ದರೋಡೆ

06:01 PM Feb 16, 2024 | Team Udayavani |

ಕೊಟ್ಟಿಗೆಹಾರ: ಜಾವಳಿ ಸಮೀಪದ ಜೆ.ಹೊಸಹಳ್ಳಿಯಲ್ಲಿ ಗುರುವಾರ ರಾತ್ರಿ ಸುಮಾರು 8 ಗಂಟೆ ಸಮಯದಲ್ಲಿ ದರೋಡೆಕೋರರು ಒಂಟಿಮನೆಯ ಅನಂತರಾಮ್ ಹೆಬ್ಬಾರ್ ಎಂಬುವವರ ಮನೆಗೆ ನುಗ್ಗಿ ದರೋಡೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಜಾವಳಿಯ ಹೊಸಹಳ್ಳಿಯಲ್ಲಿ ನಾಲ್ವರು ಅಪರಿಚಿತ ಯುವಕರ ತಂಡ ಮನೆಯ ಮೇಲೆ ದಾಳಿ ನಡೆಸಿ ಮನೆ ಮಾಲೀಕನ ಕುತ್ತಿಗೆಗೆ ಹರಿತವಾದ ಲಾಂಗ್ ಇಟ್ಟು ಬೆದರಿಸಿ ಮನೆಯಲ್ಲಿದ್ದ ಸುಮಾರು ರೂ 5ಲಕ್ಷ ರೂ. ನಗದು ಸೇರಿದಂತೆ ಚಿನ್ನದ ಸರ ದರೋಡೆ ಮಾಡಿ ಪರಾರಿಯಾಗಿದ್ದಾರೆ.ಈ ವೇಳೆ ಮನೆಯ ಕೆಲಸದವರಾದ ಶ್ರೀನಿವಾಸ ಮೂರ್ತಿ ದರೋಡೆಗೆ ಅಡ್ಡಿ ಪಡಿಸಿದಾಗ ಅವರ ಕೈಗೆ ಚಾಕುವಿನಿಂದ ಮನ ಬಂದಂತೆ ಹಲ್ಲೆ ನಡೆಸಿ ಒಂದು ರೂಮಲ್ಲಿ ಕೂಡಿ ಹಾಕಿದ್ದಾರೆ.

ಆ ರೂಮಿನಲ್ಲಿ ರಕ್ತದೋಕುಳಿ ಹರಿದಿದೆ.ಇಡಿ ಮನೆಯಲ್ಲೂ ರಕ್ತದ ಕಲೆಗಳು ಹರಡಿವೆ. ಮಾಲೀಕರ ಮಗ ವಿಘ್ನ ರಾಜ್ ಹೆಬ್ಬಾರ್ ಅವರಿಗೆ ಬೆನ್ನಿಗೆ ಚಾಕು ಇರಿತದಿಂದ ಗಾಯವಾಗಿದೆ.ಗಂಭೀರ ಗಾಯಗೊಂಡ ಶ್ರೀನಿವಾಸ್ ಮೂರ್ತಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಮನೆಯಲ್ಲಿದ್ದವರು ಬೊಬ್ಬೆ ಹಾಕಿದಾಗ ಮೂವರು ಕಾರು ಹತ್ತಿ ಪರಾರಿಯಾಗಿದ್ದಾರೆ.ಅವರಲ್ಲಿ ಓರ್ವ ದರೋಡೆಕೋರ ದಾರಿ ತಪ್ಪಿ ಸಮೀಪದ ಅರಮನೆ ತಲಗೂರು ಎಂಬ ಗ್ರಾಮದ ಅರಣ್ಯದಲ್ಲಿ ಅವಿತುಕೊಂಡಿದ್ದ ಎನ್ನಲಾಗಿದೆ.

ರಾತ್ರಿಯೇ ಮಂಗಳೂರು ಮೂಲದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಆ ವ್ಯಕ್ತಿಯ ಹೆಸರನ್ನು ತನಿಖೆಯ ಉದ್ದೇಶದಿಂದ ಗೌಪ್ಯವಾಗಿಡಲಾಗಿದೆ.ಬಾಳೂರು ಪೊಲೀಸರು ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿ ಇನ್ನು ಮೂವರ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕ ವಿಕ್ರಂ ಅಮ್ಟೆ,ಮೂಡಿಗೆರೆ ವೃತ್ತ ನಿರೀಕ್ಷಕ ಸೋಮೇಗೌಡ, ಬಾಳೂರು ಪೊಲೀಸ್ ಸಬ್ ಇನ್ ಸ್ಪೆಕ್ಟರ್ ದಿಲೀಪ್, ಪೊಲೀಸ್ ಸಿಬಂದಿ ಗಿರೀಶ್ ಮಹೇಶ್ ಓಂಕಾರ್,ಮತ್ತಿತರರು ಇದ್ದರು.

Advertisement

ಗ್ರಾಮೀಣ ಭಾಗದಲ್ಲಿ ಜೀವ ರಕ್ಷಣೆಗೆ ರೈತರಿಗೆ ಬಂದೂಕು ನೀಡಲು ಆಗ್ರಹ

ಗ್ರಾಮೀಣ ಭಾಗದಲ್ಲಿ ಒಂಟಿ ಮನೆ ಇದ್ದ ಸ್ಥಳಗಳಲ್ಲಿ ದರೋಡೆಕೋರರು ವ್ಯಾಪಾರಸ್ಥರ ಸೋಗಿನಲ್ಲಿ ಹಳ್ಳಿಗಳಿಗೆ ಬಂದು ಹಲ್ಲೆ ದರೋಡೆ ಮಾಡುತ್ತಿದ್ದಾರೆ.ಈಗ ಕಾಫಿ ಕೊಯ್ಲು ಆದುದರಿಂದ ಕಳ್ಳರು ಹಣದ ಆಸೆಗೆ ಮನೆಗೆ ನುಗ್ಗುವ ಪರಿಸ್ಥಿತಿ ಎದುರಾಗಿದೆ.ಹಳ್ಳಿಗಳಲ್ಲಿ ಜನರು ಜೀವ ಭಯದಿಂದ ಬದುಕುತ್ತಿದ್ದಾರೆ.ಸರ್ಕಾರ ಗ್ರಾಮೀಣ ಪ್ರದೇಶದ ರೈತರಿಗೆ ಬಂದೂಕು ಪರವಾನಗಿ ನೀಡಿದರೆ ಮನೆ ಮಾಲೀಕರಿಗೆ ರಕ್ಷಣೆ ಸಿಕ್ಕಿದಂತಾಗುತ್ತದೆ.ದರೋಡೆ ಮಾಡುವವರಿಗೂ ಹೆದರಿಕೆ ಇರುತ್ತದೆ.ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಾವಳಿ ಗ್ರಾ.ಪಂ.ಅಧ್ಯಕ್ಷ ಎಂ.ಪಿ.ಪ್ರದೀಪ್,ಉಪಾಧ್ಯಕ್ಷ ಮನೋಹರ್ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next