ಕೊಟ್ಟಿಗೆಹಾರ: ಪ್ಲೈವುಡ್ ತುಂಬಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಲ್ಟಿಯಾಗಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಹೊರಟ್ಟಿ ಎಂಬ ಗ್ರಾಮದಲ್ಲಿ ನಡೆದಿದೆ.
ಮೂಡಿಗೆರೆಯ ಸಾಮಿಲ್ ಎಂಬಲ್ಲಿ ಪ್ಲೈವುಡ್ ತುಂಬಿಕೊಂಡು ಮಹಾರಾಷ್ಟ್ರಕ್ಕೆ ಹೋಗುತ್ತಿದ್ದ ಹತ್ತು ಚಕ್ರದ ಲಾರಿ ಮೂಡಿಗೆರೆ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 173 ರಲ್ಲಿ ಪಲ್ಟಿಯಾಗಿದೆ.
ಲಾರಿ ಚಾಲಕ ಅತಿಯಾದ ವೇಗದಲ್ಲಿದ್ದ ಕಾರಣ ಲಾರಿ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾದ ಪರಿಣಾಮ ಲಾರಿಯ ಚಾಲಕ ಹಾಗೂ ಕ್ಲೀನರ್ ಗೆ ಗಾಯಗಳಾಗಿವೆ.
ಗಾಯಳುಗಳನ್ನು ಮೂಡಿಗೆರೆ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ 10 ಚಕ್ರದ ಲಾರಿ ಪಲ್ಟಿಯಾದ ಕಾರಣ ಕೆಲಕಾಲ ಟ್ರಾಫಿಕ್ ಜಾಮ್ ಕೂಡ ಸಂಭವಿಸಿತ್ತು. ಕಳೆದ ರಾತ್ರಿ 1 ಗಂಟೆ ಸುಮಾರಿಗೆ ಈ ಅನಾಹುತ ಸಂಭವಿಸಿದ್ದು, ಸುಮಾರು ಎರಡು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಆಗಿತ್ತು.
ರಾಷ್ಟ್ರೀಯ ಹೆದ್ದಾರಿ, ವೀಕ್ ಎಂಡ್ ಹಾಗೂ ಹಬ್ಬದ ರಜೆ ಹಾಗೂ ಚಿಕ್ಕಮಗಳೂರು, ಮೂಡಿಗೆರೆಯಿಂದ ಉಡುಪಿ-ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿರುವುದರಿಂದ ವಾಹನಗಳು ಅತೀ ವೇಗವಾಗಿ ಓಡಾಡುತ್ತಿರುತ್ತೆ. ಹಾಗಾಗಿ, ಯಾವುದೇ ಅನಾಹುತ ಸಂಭವಿಸಬಾರದೆಂದು ರಾತ್ರಿ 1 ಗಂಟೆಗೆ ಸ್ಥಳಕ್ಕೆ ಬಂದ ಬಣಕಲ್ ಪೊಲೀಸರು ಇಡೀ ರಾತ್ರಿ ಸ್ಥಳದಲ್ಲೇ ಕಾವಲಿದ್ದು ಯಾವುದೇ ಅನಾಹುತ ಸಂಭವಿಸದಂತೆ ಎಚ್ಚರ ವಹಿಸಿದ್ದಾರೆ.
ಇಡೀ ರಾತ್ರಿ ಸ್ಥಳದಲ್ಲಿ ಕಾವಲಿದ್ದ ಪೊಲೀಸರು ಬೆಳಗ್ಗೆ ಜೆಸಿಬಿ ತರಿಸಿ ಲಾರಿಯನ್ನು ಒಂದು ಬದಿಗೆ ಸರಿಸಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಈ ಪ್ರಕರಣದ ಕುರಿತು ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.