ಕೊಟ್ಟಿಗೆಹಾರ :2019ರ ಮಹಾಮಳೆಗೆ ಮನೆ ಜಮೀನು ಕಳೆದುಕೊಂಡ ನೆರೆ ಸಂತ್ರಸ್ತರೊಬ್ಬರು ಸ್ವಂತ ಸೂರಿನ ನಿರೀಕ್ಷೆಯಲ್ಲೆ ಕೊನೆಯುಸಿರೆಳಿದ್ದಾರೆ.
ಜಾವಳಿ ಗ್ರಾ.ಪಂ ವ್ಯಾಪ್ತಿಯ ಮಲೆಮನೆಯ ನೆರೆ ಸಂತ್ರಸ್ತ ನಾರಾಯಣಗೌಡ (65) 2019 ರಲ್ಲಿ ಸುರಿದ ಮಹಾಮಳೆಯಿಂದಾಗಿ ಮನೆ ಹಾಗೂ ಜಮೀನನ್ನು ಕಳೆದುಕೊಂಡಿದ್ದರು.
ಮನೆಯೊಂದಿಗೆ ಮನೆಯಲ್ಲಿದ್ದ ವಸ್ತುಗಳು, ಚಿನ್ನಾಭರಣಗಳು, ದಾಖಲೆ ಪತ್ರಗಳು ಎಲ್ಲವನ್ನು ಕಳೆದುಕೊಂಡು ಅಕ್ಷರಶಃ ಬರಿಗೈನಲ್ಲಿ ಬೀದಿಗೆ ಬಿದ್ದಿದ್ದರು.
ಮೂಡಿಗೆರೆಯಲ್ಲಿ ಬಾಡಿಗೆ ಮನೆಯಲ್ಲಿ ಕುಟುಂಬದೊಂದಿಗೆ ವಾಸವಿದ್ದ ನಾರಾಯಣಗೌಡ ಅವರು ಸರ್ಕಾರ ಮನೆ ಕಟ್ಟಲು ಪರ್ಯಾಯ ಜಾಗ ಹಾಗೂ ಪರ್ಯಾಯ ಕೃಷಿಭೂಮಿಯ ನಿರೀಕ್ಷೆಯಲ್ಲಿದ್ದರು. ಆದರೆ ನಾಲ್ಕು ವರ್ಷ ಕಳೆದರೂ ಸರ್ಕಾರ ಪುನರ್ವಸತಿ ಕಲ್ಪಿಸದೇ ಇರುವುದರಿಂದ ಆ ಕೊರಗಿನಲ್ಲಿ ಜೀವನ ಸಾಗಿಸುತ್ತಿದ್ದರು.
2019 ರಲ್ಲಿ ತಲೆಮಾರುಗಳಿಂದ ಬದುಕಿದ್ದ ಮನೆ ಕೊಚ್ಚಿ ಹೋದಾಗ ಆಘಾತಕ್ಕೆ ಒಳಗಾಗಿ ಪಾಶ್ವವಾಯು ಪೀಡಿತರಾಗಿ ಹಾಸಿಗೆ ಹಿಡಿದಿದ್ದರು. ಸ್ವಂತ ಮನೆಯ ನಿರೀಕ್ಷೆಯಲ್ಲಿಯೇ ನಾರಾಯಣಗೌಡ ಅವರು ಸೋಮವಾರ ಸಂಜೆ ಮೂಡಿಗೆರೆಯ ಬಾಡಿಗೆ ಮನೆಯಲ್ಲಿಯೇ ಮೃತಪಟ್ಟಿದ್ದಾರೆ. ಮೃತದೇಹವನ್ನು ಮಲೆಮನೆ ಗ್ರಾಮಕ್ಕೆ ತೆಗೆದುಕೊಂಡು ಹೋದರೂ ಅಂತಿಮ ದರ್ಶನಕ್ಕೆ ಮೃತದೇಹವನ್ನು ಇಡಲು ಮನೆಯೂ ಕೂಡ ಇಲ್ಲದಂತಾಗಿರುವುದು ನಿಜಕ್ಕೂ ವಿಪರ್ಯಾಸವಾಗಿದೆ.