Advertisement

ಹೈಟೆಕ್‌ ಸೌಂದರ್ಯ ತಾಣವಾಗಲಿದೆ ಕೊಟ್ಟಾರ ಚೌಕಿ ಫ್ಲೈಓವರ್‌!

11:26 AM Dec 07, 2018 | Team Udayavani |

ಮಹಾನಗರ: ಮಂಗಳೂರು- ಉಡುಪಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 66ರ ಕೊಟ್ಟಾರಚೌಕಿಯ ಫ್ಲೈಓವರ್‌ ಕೆಲವೇ ದಿನದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ ತಾಣವಾಗಿ ಬದಲಾವಣೆಗೊಂಡು ಸುಂದರಗೊಳ್ಳಲಿದೆ.

Advertisement

ಸ್ವಚ್ಛ ತೆಯ ಮೂಲಕ ನಗರ ವ್ಯಾಪ್ತಿಯಲ್ಲಿ ಮಹಾನ್‌ ಕಾರ್ಯ ನಡೆಸುತ್ತಿರುವ ಶ್ರೀ ರಾಮಕೃಷ್ಣ ಮಠದ ನೇತೃತ್ವದಲ್ಲಿ ದಾನಿಗಳ ನೆರವಿನೊಂದಿಗೆ ಕೊಟ್ಟಾರಚೌಕಿಯ ಪ್ಲೈಓವರ್‌ ಸುಂದರ ಸ್ವರೂಪಕ್ಕೆ ಬದಲಾವಣೆಯಾಗಲಿದೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನುಮತಿ ಪಡೆಯುವ ಪ್ರಕ್ರಿಯೆ ಸದ್ಯ ಪ್ರಗತಿಯಲ್ಲಿದೆ.

ಕೊಟ್ಟಾರಚೌಕಿ ಪ್ಲೈಓವರ್‌ನ ಕೆಳಭಾಗದಲ್ಲಿ ಈಗ ವಾಹನಗಳು, ತಳ್ಳುಗಾಡಿಗಳನ್ನು ಎಲ್ಲೆಂದರಲ್ಲಿ ನಿಲ್ಲಿಸಲಾಗುತ್ತಿದೆ. ಸ್ವಚ್ಚತೆಗೆ ಆದ್ಯತೆ ಇಲ್ಲಿ ಸಿಗುತ್ತಿಲ್ಲ. ಹೀಗಾಗಿ ಮೇಲ್ಸೇತುವೆಯ ಕೆಳಭಾಗದ ನಿರ್ವಹಣೆ ಇಲ್ಲದೆ ಅವ್ಯವಸ್ಥೆ ಉಂಟಾಗಿತ್ತು. ಇದಕ್ಕೆ ಮುಕ್ತಿ ನೀಡಲು ಹಾಗೂ ಬೇರೆ ಬೇರೆ ಭಾಗದ ಪ್ರಯಾಣಿಕರು ಕೊಟ್ಟಾರಚೌಕಿ ಫ್ಲೈ ಓವರ್‌ ಕೆಳಭಾಗದ ರಸ್ತೆಯಲ್ಲಿ ಸಂಚರಿಸುವ ಹಿನ್ನೆಲೆಯಲ್ಲಿ ಪ್ಲೈಓವರ್‌ ಗೆ ಹೊಸ ರೂಪ ನೀಡಲು ರಾಮಕೃಷ್ಣ ಮಿಷನ್‌ ನಿರ್ಧರಿಸಿದೆ. ಈಗಾಗಲೇ ನಗರದ ವಿವಿಧೆಡೆ ಇಂತಹ ಹಲವು ರೀತಿಯ ಸುಂದರೀಕರಣ ಕೆಲಸ ಮಾಡಿರುವ ಮಿಷನ್‌ ಕೊಟ್ಟಾರಚೌಕಿ ಫ್ಲೈಓವರ್‌ ಕೆಳಭಾಗವನ್ನು ಕೂಡ ಆಕರ್ಷಣೀಯವಾಗಿಸಲು ಉದ್ದೇಶಿಸಿದೆ.

ಗಾರ್ಡನ್‌ ರೂಪ
ಇಲ್ಲಿನ ಪ್ಲೈಓವರ್‌ನ ತಳಭಾಗದ ಸುಮಾರು 500-600 ಮೀಟರ್‌ ವ್ಯಾಪ್ತಿಯಲ್ಲಿ ಇಂಟರ್‌ಲಾಕ್‌ ಅಳವಡಿಸಲಾಗುತ್ತದೆ. ನಿಗದಿತ ಜಾಗದಲ್ಲಿ ಹೂವಿನ ಗಿಡಗಳೊಂದಿಗೆ ಅಲಂಕಾರ ಹಾಗೂ ಗಾರ್ಡನ್‌ ರೂಪದಲ್ಲಿ ಸುಂದರೀಕರಣಕ್ಕೆ ಒತ್ತು ನೀಡಲಾಗುತ್ತದೆ. ಕುಳಿತುಕೊಳ್ಳಲು ಅನುವಾಗುವಂತೆ ಮನ ಸೆಳೆಯುವ ಶೈಲಿಯ ಬೆಂಚುಗಳನ್ನು ಇಡಲಾಗುತ್ತದೆ. ಎಲ್ಲೆಂದರಲ್ಲಿ ಕಾರು, ರಿಕ್ಷಾ, ಬೈಕ್‌ ಪಾರ್ಕ್‌ಗೆ ಮುಂದೆ ಅವಕಾಶವಿರುವುದಿಲ್ಲ.  

ಬದಲಾಗಿ, ಒಂದು ಸ್ಲ್ಯಾಬ್ ನ ಅಡಿಯಲ್ಲಿ ಬೈಕ್‌, ಇನ್ನೊಂದರಲ್ಲಿ ಕಾರು ಹಾಗೂ ಮತ್ತೊಂದರಲ್ಲಿ ರಿಕ್ಷಾ ಪಾರ್ಕಿಂಗ್‌ ಗೆ ಅವಕಾಶವಿರುತ್ತದೆ. ಪ್ರತೀ  ಸ್ಲ್ಯಾಬ್ ನ ಗೋಡೆಗಳಲ್ಲಿ ದೇಶದ ಸಂಸ್ಕೃತಿ ಸಾರು ಚಿತ್ರಗಳನ್ನು ಬರೆಯಲಾಗುತ್ತದೆ. ಇದು ವಾಹನದಲ್ಲಿ ತೆರಳುವ ಪ್ರಯಾಣಿಕರಿಗೆ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿರುತ್ತದೆ. ಇನ್ನು ಬೆಳಕಿನ ವ್ಯವಸ್ಥೆಯನ್ನು ಕೂಡ ಆಕರ್ಷಕವಾಗಿ ಇಲ್ಲಿಗೆ ಮಾಡಲಾಗುತ್ತದೆ. ಸುಮಾರು 60 ಲಕ್ಷ ರೂ. ವೆಚ್ಚದಲ್ಲಿ ಈ ಎಲ್ಲಾ ಕಾಮಗಾರಿಗಳನ್ನು ನಡೆಸುವ ಬಗ್ಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.

Advertisement

ಸುರತ್ಕಲ್‌/ಕೂಳೂರು ಫ್ಲೈ ಓವರ್‌ ಬ್ಯೂಟಿಫುಲ್‌!
ಕಳೆದ ವರ್ಷ ವಿವಿಧ ಸಮಾಜಮುಖಿ ಸಂಘಟನೆಗಳ ನೆರವಿನೊಂದಿಗೆ ಸುರತ್ಕಲ್‌ ಮೇಲ್ಸೇತುವೆಯ ಕೆಳಭಾಗವನ್ನು ಸುದರಿಕರಣಗೊಳಿಸಲಾಗಿದೆ.
ಇಲ್ಲಿನ 6 ಸ್ಲ್ಯಾಬ್ ಗಳ ವ್ಯಾಪ್ತಿಯನ್ನು ಆಕರ್ಷಣೀಯಗೊಳಿಸಲಾಗಿದೆ. ಟೆಂಪೋ, ರಿಕ್ಷಾ, ದ್ವಿಚಕ್ರ ವಾಹನ ನಿಲುಗಡೆಗೆ ಪೂರಕ ಸೌಕರ್ಯ ಇಲ್ಲಿ ಕಲ್ಪಿಸಲಾಗಿದೆ. ಕರಾವಳಿಯ ಹೆಮ್ಮೆಯ ಕ್ರೀಡಾಪಟುಗಳಾದ ಕೆ.ಎಲ್‌. ರಾಹುಲ್‌, ಪೂವಮ್ಮ ಅವರ ಚಿತ್ರವನ್ನು ಬರೆಯಲಾಗಿದ್ದು, ಗಮನಸೆಳೆಯುತ್ತಿವೆ. ಇದೇ ರೀತಿ 2 ವರ್ಷಗಳ ಹಿಂದೆ ಕೂಳೂರು ಮೇಲ್ಸೇತುವೆ ಕೆಳಭಾಗವನ್ನು ಸ್ಥಳೀಯರು ಸುಂದರೀಕರಣಗೊಳಿಸಿದ್ದಾರೆ. ಕರಾವಳಿಯ ಸಂಸ್ಕೃತಿ ಬಿಂಬಿಸುವ ಚಿತ್ರ, ಸ್ವಚ್ಚತೆಯ ಜಾಗೃತಿ ಬರೆಹಗಳು ಅಲ್ಲಿ ಇವೆ. ಇದು ಪ್ರಯಾಣಿಕರ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

‘ಜನವರಿಯಲ್ಲಿ ಆರಂಭ’
ಕೊಟ್ಟಾರಚೌಕಿ ಪ್ಲೈಓವರ್‌ನ ಕೆಳಭಾಗವನ್ನು ಅತ್ಯಾಕರ್ಷಕ ರೀತಿಯಲ್ಲಿ ಸುಂದರೀಕರಣಗೊಳಿಸುವ ಸಂಬಂಧ  ರಾಮಕೃಷ್ಣ ಮಿಷನ್‌ ಯೋಜನೆ ಹಾಕಿಕೊಂಡಿದೆ. ಇದಕ್ಕಾಗಿ ಪ್ರಸ್ತಾವನೆಯೊಂದನ್ನು ಸಿದ್ಧಗೊಳಿಸಲಾಗಿದೆ. ರಾ.ಹೆ.ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡು, ಜನವರಿ ವೇಳೆಯಲ್ಲಿ ಪ್ಲೈಓವರ್‌ ಸುಂದರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ಸ್ವಾಮಿ ಏಕಗಮ್ಯಾನಂದಜಿ,
  ಸಂಚಾಲಕರು, ರಾಮಕೃಷ್ಣ ಮಿಷನ್‌-ಸ್ವಚ್ಚತಾ ಅಭಿಯಾನ 

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next