Advertisement

ಕೋಟ್ಪಾ ದಾಳಿ; 42 ಪ್ರಕರಣ-5250 ರೂ. ದಂಡ

11:02 AM Aug 20, 2019 | Suhan S |

ದಾವಣಗೆರೆ: ಜಿಲ್ಲೆಯನ್ನು ಕೋಟ್ಪಾ ಉನ್ನತ ಅನುಷ್ಠಾನ ಜಿಲ್ಲೆ ಎಂದು ಘೋಷಿಸುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ತಂಬಾಕು ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಲು ಸೋಮವಾರ ನಗರದ ವಿವಿಧೆಡೆ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳದಿಂದ ತಂಬಾಕು ದಾಳಿ ನಡೆಸಿದೆ.

Advertisement

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟ್ರೀಯ ಬಾಲ ಕಾರ್ಮಿಕರ ಯೋಜನೆ, ಮಹಾನಗರ ಪಾಲಿಕೆ, ಶಿಕ್ಷಣ ಇಲಾಖೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಸಹಯೋಗದೊಂದಿಗೆ ಈ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.

ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ ಅಧಿನಿಯಮ-2003 ಸೆಕ್ಷನ್‌ 4 ರಡಿ 23 ಹಾಗೂ ಸೆಕ್ಷನ್‌ 6ಎ ಅಡಿಯಲ್ಲಿ 17 ಪ್ರಕರಣ, ಸೆಕ್ಷನ್‌ 6ಬಿ ಅಡಿಯಲ್ಲಿ 2 ಪ್ರಕರಣ ಸೇರಿ ಒಟ್ಟು 42 ಪ್ರಕರಣಗಳನ್ನು ದಾಖಲಿಸಿ, 5250 ರೂ.ಗಳನ್ನು ದಂಡದ ರೂಪದಲ್ಲಿ ಸ್ಥಳದಲ್ಲಿಯೇ ಸಂಗ್ರಹಿಸಲಾಯಿತು.

ತಂಡವು ನಗರದ ಗಾಂಧಿ ವೃತ್ತದಿಂದ ಹದಡಿ ರಸ್ತೆಯ ಎನ್‌ಎಚ್-4 ಹಾಗೂ ಸುತ್ತಮುತ್ತಲಿನ ಹೊಟೇಲ್, ಬಾರ್‌ ಆ್ಯಂಡ್‌ ರೆಸ್ಟೋರೆಂಟ್, ಪಾನ್‌ಶಾಪ್‌, ಬಸ್‌ ನಿಲ್ದಾಣ ಇತ್ಯಾದಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರುವವರು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಸೇವಿಸುವವರಿಗೆ ಸ್ಥಳದಲ್ಲಿಯೇ ದಂಡ ಹಾಕುವ ಮೂಲಕ ಜಾಗೃತಿ ಮೂಡಿಸಿದೆ. ಸಾರ್ವಜನಿಕ ಸ್ಥಳದಲ್ಲಿರುವ ಅಂಗಡಿ ಮಾಲೀಕರು ಧೂಮ್ರಪಾನ ನಿಷೇಧ‌ದ ಬಗ್ಗೆ ಪ್ರದರ್ಶಿಸಬೇಕಾದ ಫಲಕಗಳನ್ನು ಕಟ್ಟುನಿಟ್ಟಾಗಿ ಅಳವಡಿಸಲು ತಾಕೀತು ಮಾಡಿದೆ.

ಕೋಟ್ಪಾ ಕಾಯ್ದೆ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ತಂಬಾಕು ಉತ್ಪನ್ನ ಮಾರುವುದು ಹಾಗೂ ಮಕ್ಕಳಿಂದ ಮಾರಾಟ ಮಾಡಿಸುವುದನ್ನು ನಿಷೇಧಿಸಿರುವುದು ಹಾಗೂ ಶಿಕ್ಷಣ ಸಂಸ್ಥೆಗಳ 100 ಯಾರ್ಡ್‌ ಅಂತರದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡದಿರುವುದು, ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಷೇಧ ಮತ್ತು ತಂಬಾಕು ಉತ್ಪನ್ನಗಳ ಪ್ಯಾಕ್‌ಗಳ ಮೇಲೆ ಎಚ್ಚರಿಕೆ ಚಿನ್ಹೆ ಇಲ್ಲದೆ ಮಾರಾಟ ನಿಷೇಧ‌ ಇರುವ ಬಗ್ಗೆ ತಂಡದ ಸದಸ್ಯರು ಮಾಹಿತಿ ನೀಡಿದರು.

Advertisement

ತನಿಖಾ ತಂಡದಲ್ಲಿ ರಾಜ್ಯ ತಂಬಾಕು ನಿಯಂತ್ರಣ ಕೋಶದ ವಿಭಾಗೀಯ ಸಂಯೋಜಕ ಮಹಾಂತೇಶ್‌ ಉಳ್ಳಾಗಡ್ಡಿ, ಜಿಲ್ಲಾ ಸಲಹೆಗಾರ ಸತೀಶ ಕಲಹಾಳ, ಶಿಕ್ಷಣ ಇಲಾಖೆಯ ಟಿಪಿಇಟಿ ವೀರಪ್ಪ ಎಚ್, ಸಮಾಜ ಕಾರ್ಯಕರ್ತ ದೇವರಾಜ ಪಿ., ಪಾಲಿಕೆ ಆರೋಗ್ಯ ನಿರೀಕ್ಷಕಿ ಪ್ರತಿಭಾ, ಬೆಂಗಳೂರಿನ ಮಾಯಾ ಸಂಸ್ಥೆಯ ಜೀತನ ಚಂದ್ರ, ಹನುಮಂತಪ್ಪ ಟಿ. ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next