ಬಾಗಲಕೋಟೆ: ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಕೋಟ್ಪಾ ಕಾಯ್ದೆ ಸೆಕ್ಷನ್ 7ರಡಿ ಪ್ರಕರಣ ದಾಖಲಿಸಿದ್ದು, ರಾಜ್ಯದಲ್ಲಿ ಪ್ರಥಮ ಎಂದು ಜಿಲ್ಲಾಧಿಕಾರಿ ಆರ್.ರಾಮಚಂದ್ರನ್ ತಿಳಿಸಿದರು.
ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲಾ ಆರೋಗ್ಯ ಅಭಿಯಾನ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕೋಶದಿಂದ ದಾಳಿ ಮಾಡಿ ಸೆಕ್ಷನ್ 4 ಮತ್ತು 6ರಡಿ ಮಾತ್ರ ಪ್ರಕರಣ ದಾಖಲಾಗುತ್ತವೆ. ಆದರೆ ಸೆಕ್ಷನ್ 7ರಡಿಯಲ್ಲಿ ಪ್ರಕರಣ ದಾಖಲಾಗಿರುವುದು ಬಾಗಲಕೋಟೆಯಲ್ಲಿ ಇದು ಪ್ರಥಮವಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕೊಟ್ಪಾ ಕಾಯ್ದೆಯಲ್ಲಿ ಅನುಷ್ಠಾನ ತರುವಲ್ಲಿ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಿದ ಕಾರ್ಯಕ್ರಮ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರನ್ನು ಶ್ಲಾಘಿಸಿ, ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣಕ್ಕೆ ಹಾಕಿಕೊಂಡ ಕಾರ್ಯಚಟುವಟಿಕೆಗಳ ಬಗ್ಗೆ ಚರ್ಚಿಸಿದರು. ಕೊಟ್ಪಾ ಕಾಯ್ದೆಯಡಿ ಸೆಕ್ಷನ್ 4 ಮತ್ತು 6ರಡಿ 2018-19 ರಲ್ಲಿ ಒಟ್ಟು 242 ಹಾಗೂ 2019-20 ರಲ್ಲಿ 110 ಪ್ರಕರಣ ದಾಖಲಿಸಲಾಗಿದೆ ಎಂದು ಸಭೆಗೆ ತಿಳಿಸಿದಾಗ ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲು ಸೂಚಿಸಿದರು.
ಜಿಲ್ಲೆಯ ಬೀಳಗಿ ತಾಲೂಕನ್ನು ಕೊಟ್ಪಾ ಕಾಯ್ದೆ ಉನ್ನತ ಅನುಷ್ಠಾನ, ಅದರ ಪ್ರಯುಕ್ತ ತಾಲೂಕಿನಲ್ಲಿ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಸಮನ್ವಯ ಸಮಿತಿ ಸಭೆಯಲ್ಲಿ ತಿರ್ಮಾನಿಸಿದಂತೆ ಎಲ್ಲ ಪಾನ್‌ಶಾಪ್ ಮತ್ತು ಹೋಟೆಲ್ ಮಾಲೀಕರ ಸಭೆ ನಡೆಸಲಾಗಿದೆ. ಕೊಟ್ಪಾ ಕಾಯ್ದೆ ಹಾಗೂ ತಂಬಾಕು ದುಷ್ಟರಿಣಾಮ ಕುರಿತು ಮಾಹಿತಿಯನ್ನು ನೀಡಲಾಯಿತು. ಬೀಳಗಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಪಾನ್‌ಶಾಪ್‌ಗ್ಳಿಗೆ ಭೇಟಿ ನೀಡಿ ಕೋಟ್ಪಾ ಕಾಯ್ದೆ ಹಾಗೂ ತಂಬಾಕು ದುಷ್ಟರಿಣಾಮ ಕುರಿತು ಕರಪತ್ರ ಹಂಚುವುದರ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಂಬಾಕು ನಿಯಂತ್ರಣ ಕೋಶದ ಶಶಿಕಾಂತ ಕುಮಟಳ್ಳಿ ಸಭೆಗೆ ತಿಳಿಸಿದರು.
ಜಿಲ್ಲಾ ಆಸ್ಪತ್ರೆಯಲ್ಲಿ ತಂಬಾಕು ವ್ಯಸನ ಮುಕ್ತ ಕೇಂದ್ರವನ್ನು ತೆರೆಯಬೇಕಾಗಿದ್ದು, ಸದರಿ ಕೇಂದ್ರದಲ್ಲಿ ತಂಬಾಕು ವ್ಯಸನಗಳಿಗೆ ಉಚಿತ ಚಿಕಿತ್ಸೆ, ಆಪ್ತ ಸಮಾಲೋಚನೆ ಹಾಗೂ ಮಾನಸಿಕ ಬೆಂಬಲ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎ.ಎನ್. ದೇಸಾಯಿ ಸಭೆಗೆ ತಿಳಿಸಿದರು.
ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಕೊಟ್ಪಾ ಕಾಯಿದೆಯಡಿ ಸೆಕ್ಷನ್ 5 ಮತ್ತು 7ರಡಿ ಹೆಚ್ಚು ಪ್ರಕಣಗಳನ್ನು ದಾಖಲಿಸಬೇಕು. ಅಲ್ಲದೇ ಎಲ್ಲ ತಾಲೂಕುಗಳಲ್ಲಿ ತನಿಖಾ ದಳದ ತಂಡವನ್ನು ರಚಿಸುವ ಮೂಲಕ ಹೆಚ್ಚು ಕಾರ್ಯಾಚರಣೆ ಮಾಡಿ ತಂಬಾಕು ಮುಕ್ತ ಜಿಲ್ಲೆಯನ್ನಾಗಿ ಮಾಡಲು ಸೂಚಿಸಿದರು.
ಪ್ರೊಬೇಷನರಿ ಐಎಎಸ್ ಅಧಿಕಾರಿ ಗರಿಮಾ ಪೋವಾರ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ| ಪ್ರಕಾಶ ಬಿರಾದಾರ, ಜಿಲ್ಲಾ ಟಿಬಿ ನಿಯಂತ್ರಣಾಧಿಕಾರಿ ಡಾ| ಪ್ರಕಾಶ ಎ.ಹಿಟ್ನಳ್ಳಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ|ಡಿ.ಬಿ. ಪಟ್ಟಣಶೆಟ್ಟಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ| ಕುಸುಮಾ ಮಾಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪವಾಡೆಪ್ಪ ಇತರರಿದ್ದರು.