ಕಲಬುರಗಿ: ನಗರದ ಹೊರ ವಲಯದ ಕೋಟ್ನೂರು( ಡಿ) ಗ್ರಾಮದಲ್ಲಿ ಅಂಬೇಡ್ಕರ್ ಮೂರ್ತಿಗೆ ಅವಮಾನ ಮಾಡಿರುವ ಸ್ಥಳಕ್ಕೆ ಜಿಲ್ಲಾಧಿಕಾರಿ ಫೌಜಿಯಾ ಥರನ್ನು ಭೇಟಿ ನೀಡಿ ಪರಿಶೀಲನೆ ನಡೆಸಿದರು .
ಅಲ್ಲದೆ ಸ್ಥಳದಲ್ಲಿದ್ದ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರತಿಭಟನೆಯನ್ನು ಕೈ ಬಿಟ್ಟು ಸಾರ್ವಜನಿಕರ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುವಂತೆ ಮನವಿ ಮಾಡಿದರು.
ಆದರೆ ಆಕ್ರೋಶಗೊಂಡಿದ್ದ ಪ್ರತಿಭಟನಾಕಾರರು ತಾವು ಯಾವುದೇ ಕಾರಣಕ್ಕೂ ಹೆದ್ದಾರಿ ತಡೆ ಹಾಗೂ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪುತ್ಥಳಿಗೆ ಅವಮಾನ ಮಾಡಿದ್ದಲ್ಲದೆ, ಸ್ಥಳದಲ್ಲಿ ಚೀಟಿ ಬರೆದಿಟ್ಟು ನಾವು ನಂದಿಕೂರ ಗ್ರಾಮದವರು ಎಂದು ಸವಾಲು ಹಾಕಿ ಅವಮಾನ ಮಾಡಿದ್ದಾರೆ. ಆದ್ದರಿಂದ ಇದೊಂದು ಸವಾಲ್ ಎಂದು ಸ್ವೀಕರಿಸಿ ಜಿಲ್ಲಾಡಳಿತ ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಪವನ್ ಕುಮಾರ ವಳಕೇರಿ, ದಿನೇಶ್ ದೊಡ್ಡಮನಿ ಸೇರಿದಂತೆ ಇತರೆ ದಲಿತ ಮುಖಂಡರು ಆಗ್ರಹಿಸಿದರು.
ಪ್ರಮುಖ ವೃತ್ತಗಳಲ್ಲಿ ಟಯರ್ ಗೆ ಬೆಂಕಿ
ಇದಲ್ಲದೆ ನಗರದ ಹಲವಾರು ಪ್ರಮುಖ ವೃತ್ತಗಳಲ್ಲಿ ಟಯರಿಗೆ ಬೆಂಕಿ ಹಚ್ಚಿ ಘಟನೆಗೆ ಕಾರಣವಾದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕೆಂದು ದಲಿತ ಬಂಧುಗಳು ವ್ಯಕ್ತಪಡಿಸಿದರು.
ನಗರದ ರಾಮಮಂದಿರ, ಜೇವರ್ಗಿ ಕ್ರಾಸ್, ತಿಮ್ಮಾಪುರ ವೃತ್ತ, ಶಾಬಾದ್ ಕ್ರಾಸ್, ಹೀರಾಪುರ ಕ್ರಾಸ್ ಕೇಂದ್ರ ಬಸ್ ನಿಲ್ದಾಣದ ಮುಂಭಾಗ ಜಗತ್ ವೃತ್ತ ಸೇರಿದಂತೆ ಹಲವಾರು ಕಡೆಗೆ ದಲಿತ ಬಂಧುಗಳು ಏಕಾಏಕಿ ಗುಂಪು ಕಟ್ಟಿಕೊಂಡು ಪ್ರಯಾಣ ವ್ಯವಸ್ಥೆಯನ್ನು ಸಾರ್ವಜನಿಕ ಓಡಾಟ, ವಾಹನಗಳ ಓಡಾಟವನ್ನು ಬಂದ್ ಮಾಡಿದ್ದಾರೆ.
ಇದರಿಂದಾಗಿ ತುರ್ತು ಅಗತ್ಯ ಕೆಲಸಗಳಿಗೆ ಹಾಗೂ ವೈದ್ಯಕೀಯ ಚಿಕಿತ್ಸೆಗಾಗಿ ನಗರ ಪ್ರದೇಶ ಜಿಲ್ಲಾ ಕೇಂದ್ರಗಳಿಗೆ ತೆರಳುವ ಬಸ್ಸುಗಳು ಹಾಗೂ ವಾಹನಗಳು ಮತ್ತು ಖಾಸಗಿ ಪ್ರಯಾಣ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ.