ಬಂಗಾರಪೇಟೆ: ಪ್ರಸಿದ್ಧ ಶ್ರೀಕೋಟಿ ಲಿಂಗೇಶ್ವರ ದೇಗುಲದಲ್ಲಿ ಕಾರ್ಯದರ್ಶಿ, ಧರ್ಮಾಧಿಕಾರಿ ನಡುವಿನ ಮುಸುಕಿನ ಗುದ್ದಾಟದಲ್ಲಿ ಭಕ್ತರಿಗೆ ಸಿಗುವ ಸೇವಾ ಸೌಲಭ್ಯಗಳು ಬಲು ದುಬಾರಿಯಾಗಿದ್ದು, ಸೇವಾ ಸಮಿತಿ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ದೇಗುಲದ ಧರ್ಮಾಧಿಕಾರಿ ಆಗಿದ್ದ ಶ್ರೀಸಾಂಭವ ಶಿವಮೂರ್ತಿ ಸ್ವಾಮೀಜಿ ಗಳು ಲಿಂಗೈಕ್ಯರಾದ ನಂತರ ಪ್ರಸಿದ್ಧ ದೇಗುಲದಲ್ಲಿ ಆಸ್ತಿ ಹಾಗೂ ಅಧಿಕಾರದ ವಿವಾದ ಸೃಷ್ಟಿಯಾಗಿದೆ. ದೇಗುಲದಲ್ಲಿ 20 ವರ್ಷಗಳಿಂದ ಇರುವ 40ಕ್ಕೂ ಹೆಚ್ಚು ದಿನಸಿ ಅಂಗಡಿಗಳನ್ನು ಖಾಲಿ ಮಾಡಿ ಸುವ ಎಚ್ಚರಿಕೆ ನೀಡಲಾಗುತ್ತಿದ್ದು, ಬಾಡಿಗೆ ಹಣವನ್ನೂ 300 ರೂ.ನಿಂದ 600 ರೂ.ಗೆ ಹೆಚ್ಚಿಸಲಾಗಿದೆ. ವಾಹನಗಳ ನಿಲುಗಡೆ ಶುಲ್ಕ ಕೂಡ 20 ರೂ.ನಿಂದ 50 ರೂ.ಗೆ ಏರಿಕೆ ಮಾಡಿದ್ದು, ಭಕ್ತರಿಗೆ, ಪ್ರವಾಸಿಗರಿಗೆ ಹೊರೆಯಾಗಿದೆ.
ದೇಣಿಗೆಗೆ ಒತ್ತಡ: ಸ್ವಾಮೀಜಿ ಧರ್ಮಾಧಿಕಾರಿಗಳಾಗಿದ್ದ ವೇಳೆ ಎಲ್ಲಾ ಸೇವೆ ಗಳಿಗೂ ಉಚಿತವಾಗಿದ್ದವು. ಈಗ ಶುಲ್ಕವಸೂಲಿ ಮಾಡಲಾಗುತ್ತಿದ್ದು, ಚಪ್ಪಲಿ ಇಡಲು 10 ರೂ., ಶೌಚಾಲಯ ಬಳಕೆಗೆ 10 ರೂ. ದರ ನಿಗದಿ ಮಾಡಿದ್ದಾರೆ.ಮಧ್ಯಾಹ್ನ ಅನ್ನದಾನಕ್ಕೆ ದೇಣಿಗೆ ನೀಡುವಂತೆ ಒತ್ತಡ ಹೇರಲಾಗುತ್ತಿದೆ ಎಂಬ ಆರೋಪ ಭಕ್ತರಿಂದ ಕೇಳಿಬರುತ್ತಿದೆ.
ಕಮ್ಮಸಂದ್ರದ ಶ್ರೀಕೋಟಿಲಿಂಗೇಶ್ವರ ದೇಗುಲದಲ್ಲಿ 10ಕ್ಕೂ ಹೆಚ್ಚು ದೇಗುಲ ಗಳಿವೆ. ಸೇವಾ ಕಾರ್ಯಗಳಿಗೆ ಭಕ್ತರಿಂದಹಣಕ್ಕೆ ಒತ್ತಾಯಿಸಲಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿದೆ.
100 ರೂ. ವಸೂಲಿ: ಕೋಟಿ ಲಿಂಗೇಶ್ವರ ದೇಗುಲದಲ್ಲಿ ಹೆಚ್ಚು ಪ್ರಸಿದ್ಧಿ ಪಡೆದಿರುವುದು 108 ಅಡಿ ಎತ್ತರದ ಶಿವಲಿಂಗ ಮೂರ್ತಿ. ಇಲ್ಲಿ ಜಲಕಂಠೇಶ್ವರ ಸ್ವಾಮಿಯ ಲಿಂಗದ ಮೇಲೆ ನೀರು ಹಾಕಿದರೆ ಜನ್ಮ ಪಾವನವಾಗುತ್ತದೆ ಎಂಬ ನಂಬಿಕೆ ಇದ್ದು, ಈ ಸೇವೆಗೆ ಕನಿಷ್ಠ 100ರೂ. ವಸೂಲಿ ಮಾಡಲಾಗುತ್ತದೆ ಎಂಬ ಆರೋಪ ಇದೆ.
ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇಗುಲವು ಗ್ರಾಪಂ ಆಡಳಿತದ ವ್ಯಾಪ್ತಿಗೆ ಬರಲಿದ್ದು, ಗ್ರಾಪಂನಿಂದ ಯಾವುದೇ ಶುಲ್ಕ ವಸೂಲಿಯಾಗದೇ ಇದ್ದರೂ ದೇಗುಲದಲ್ಲಿ ಕೆಲವು ಅನಾಮಿಕರು ವಸೂಲಿ ಮಾಡುತ್ತಿರುವುದರಿಂದ ದೇಗುಲ ದಲ್ಲಿ ಕೇಳುವವರೇ ಇಲ್ಲದಂತಾಗಿದೆ. ದೇಗುಲದಲ್ಲಿ ನಿರ್ದಿಷ್ಟವಾಗಿ ಸೇವೆ ಸಲ್ಲಿಸಲು ಹಾಗೂ ಅಭಿವೃದ್ಧಿಗೊಳಿಸಲು ನಿರ್ದಿಷ್ಟ ಅಧಿಕಾರಿಗಳಿಲ್ಲದೆ, ದೇಗುಲ ಅನಾಥವಾಗಿದೆ.
.ಎಂ.ಸಿ.ಮಂಜುನಾಥ್