ಬಂಗಾರಪೇಟೆ: ತಾಲೂಕಿನ ಪ್ರಸಿದ್ಧ ಶ್ರೀಕೋಟಿಲಿಂಗ ದೇಗುಲದ ಸಮಗ್ರ ನಿರ್ವಹಣೆ ಟ್ರಸ್ಟ್‌ನ ಕಾರ್ಯದರ್ಶಿ ಕೆ.ವಿ.ಕುಮಾರಿ ವಶಕ್ಕೆ ನೀಡಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿ ಆದೇಶ ಹೊರಡಿಸಿದೆ. ಉತ್ತರಾಧಿ ಕಾರಕ್ಕಾಗಿ ಹೋರಾಟ ನಡೆಸುತ್ತಿದ್ದ ಶ್ರೀಗಳ ಪುತ್ರ ಕೆ.ಶಿವಪ್ರಸಾದ್‌ಗೆ ಹಿನ್ನಡೆಯಾಗಿದ್ದು, ತೀರ್ಪಿನಿಂದ ದೇಗುಲದ ವಿವಾದವು ಸುಖ್ಯಾಂತಕಂಡಂತಾಗಿದೆ.
ಕೋಟಿಲಿಂಗೇಶ್ವರ ದೇಗುಲ ಉತ್ತರಾಧಿಕಾರಕ್ಕಾಗಿ ಕಾರ್ಯದರ್ಶಿ ಕೆ.ವಿ.ಕುಮಾರಿ ಹಾಗೂ ಶ್ರೀಗಳ ಪುತ್ರ ಶಿವಪ್ರಸಾದ್ ನಡುವೆ ಹೋರಾಟ ನಡೆಯುತ್ತಿತ್ತು. ಈ ಕುರಿತು ವಿಚಾರಣೆ ನಡೆಸಿದ್ದ ಕೆಜಿಎಫ್ನ 3ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ, ದೇಗುಲ ನಿರ್ವಹಣೆ ಜಿಲ್ಲಾಡಳಿತ ವಶಕ್ಕೆ ನೀಡಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕುಮಾರಿ ಮತ್ತು ಶಿವಪ್ರಸಾದ್ ರಾಜ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಇವರಿಬ್ಬರ ವಾದ ವಿವಾದ ಆಲಿಸಿರುವ ರಾಜ್ಯ ಹೈಕೋರ್ಟ್ ಕೆ.ವಿ.ಕುಮಾರಿ ಪರ 14 ಪುಟಗಳ ತೀರ್ಪು ನೀಡಿದೆ.
ಶ್ರೀಗಳ ಪುತ್ರ ಕೆ.ಶಿವಪ್ರಸಾದ್ ದೇಗುಲದಲ್ಲಿ ಸ್ವಯಂ ಪ್ರೇರಿತರಾಗಿ ಸೇವೆ ಸಲ್ಲಿಸಬಹುದು. ಇವರಿಗೆ ಯಾವುದೇ ಹುದ್ದೆ, ಜವಾಬ್ದಾರಿ ತೆಗೆದುಕೊಳ್ಳಲು ಅವಕಾಶವಿಲ್ಲ. ದೇಗುಲದ ಸಮಗ್ರ ನಿರ್ವಹಣೆ ಮಾಡುವ ದೇಗುಲದ ಟ್ರಸ್ಟ್ ಕಾರ್ಯದರ್ಶಿ ಕೆ.ವಿ.ಕುಮಾರಿ ಅವರ ಸಹಕಾರಿಯಾಗಿ ಸೇವೆ ಸಲ್ಲಿಸಬಹುದಾಗಿದೆ ಎಂದು ರಾಜ್ಯ ಹೈಕೋರ್ಟ್ ಸ್ಪಷ್ಟವಾಗಿ ಆದೇಶಿಸಿರುವುದರಿಂದ ಇವರಿಬ್ಬರ ನಡುವೆ ನಡೆಯುತ್ತಿರುವ 10 ತಿಂಗಳ ಶೀತಲ ಸಮರಕ್ಕೆ ಮುಕ್ತಿ ದೊರೆತಿದೆ. ಜಿಲ್ಲೆಯ ಪ್ರತಿಷ್ಠಿತ ಭಕ್ತಿಯ ತಾಣವಾಗಿರುವ ಕಮ್ಮಸಂದ್ರದ ಕೋಟಿಲಿಂಗೇಶ್ವರ ದೇಗುಲದ ಉತ್ತರಾಧಿಕಾರಕ್ಕಾಗಿ ಹಾಲಿ ಕಾರ್ಯದರ್ಶಿ ಕೆ.ವಿ.ಕುಮಾರಿ ಹಾಗೂ ಸ್ವಾಮೀಜಿಗಳ ಪುತ್ರ ಡಾ.ಶಿವಪ್ರಸಾದ್ ನಡುವೆ ನಡೆಯುತ್ತಿರುವ ಶೀತಲ ಸಮರಕ್ಕೆ ಇಲ್ಲಿನ ಸೆಷನ್ಸ್ ನ್ಯಾಯಾಲಯ ಬ್ರೇಕ್ ಹಾಕಿತ್ತು. ಇವರಿಬ್ಬರ ಜಗಳದಲ್ಲಿ ದೇಗುಲದ ಆಡಳಿತ ನಿರ್ವಹಣೆ ಜಿಲ್ಲಾಧಿಕಾರಿಗಳ ವಶಕ್ಕೆ ನೀಡಿದ್ದರೂ ಪೂರ್ಣ ಹಸ್ತಾಂತರವಾಗದೇ ಜಿಲ್ಲಾಡಳಿತವು ತೀವ್ರ ಗೊಂದಲದಲ್ಲಿತ್ತು.
ಸದ್ಯಕ್ಕೆ ದೇಗುಲವು ಜಿಲ್ಲಾಧಿಕಾರಿಗಳ ವಶದಲ್ಲಿರುವುದರಿಂದ ಕೋರ್ಟ್ ಆದೇಶದಂತೆ ಟ್ರಸ್ಟ್ ಕಾರ್ಯದರ್ಶಿ ಕೆ.ವಿ.ಕುಮಾರಿ ವಶಕ್ಕೆ ಹಸ್ತಾಂತರ ಮಾಡಬೇಕಾಗಿದೆ. ದೇಗುಲದ ಸಮಗ್ರ ಆಡಳಿತ, ದೇಗುಲಗಳು, ದೇಗುಲಕ್ಕೆ ಸೇರಿರುವ ಆಸ್ತಿ-ಪಾಸ್ತಿ ಎಲ್ಲವನ್ನೂ ಕೆ.ವಿ.ಕುಮಾರಿ ವಶಕ್ಕೆ ನೀಡಬೇಕೆಂದು ಹೈಕೋರ್ಟ್ ತೀರ್ಪಿನಲ್ಲಿ ಸೂಚನೆ ನೀಡಲಾಗಿದೆ. ಕೆ.ವಿ.ಕುಮಾರಿ ನೇತೃತ್ವದಲ್ಲಿ ದೇಗುಲದ ಆಡಳಿತ ನಡೆಸಲು ಯಾವುದೇ ಸಮಸ್ಯೆಗಳು ಕಂಡುಬಂದಲ್ಲಿ ಪೊಲೀಸ್ ಇಲಾಖೆ ಪ್ರತಿಯೊಂದು ಹಂತದಲ್ಲಿಯೂ ರಕ್ಷಣೆ ನೀಡುವಂತೆಯೂ ನಿರ್ದೇಶನ ನೀಡಲಾಗಿದೆ. ಪ್ರಸಿದ್ಧ ಶ್ರೀಕೋಟಿಲಿಂಗೇಶ್ವರ ದೇಗುಲದ ಧರ್ಮಾಧಿಕಾರಿ ಶ್ರೀ ಕಮಲ ಸಾಂಭವ ಶಿವಮೂರ್ತಿ ಸ್ವಾಮೀಜಿ ಡಿ.14ರಂದು ಲಿಂಗೈಕ್ಯರಾದ ಹಿನ್ನೆಲೆಯಲ್ಲಿ ದೇಗುಲವನ್ನು ಮುನ್ನಡೆಸುವ ವಿಚಾರದಲ್ಲಿ ಶ್ರೀಗಳ ಪುತ್ರ ಶಿವಪ್ರಸಾದ್ ಮತ್ತು ಟ್ರಸ್ಟ್‌ನ ಕಾರ್ಯದರ್ಶಿ
ಕುಮಾರಿ ನಡುವೆ ತಗಾದೆ ಏರ್ಪಟ್ಟಿತ್ತು. ಇದರಿಂದ ಭಕ್ತಾದಿಗಳಿಗೂ ಬೇಸರ ಉಂಟು ಮಾಡಿತ್ತು. ಈಗ ಹೈಕೋರ್ಟ್ ತೀರ್ಪಿನಿಂದ ಅಂತಿಮ ತೆರೆ ಬಿದ್ದಂತಾಗಿದೆ. ಶ್ರೀಕೋಟಿಲಿಂಗೇಶ್ವರ ದೇಗುಲದ 30 ವರ್ಷಗಳ ಸೇವೆಯಲ್ಲಿ ಎಂದೂ ಸ್ವಾಮೀಜಿಗಳ ಪುತ್ರ ಭಾಗವಹಿಸಿಲ್ಲ. ಸ್ವಾಮೀಜಿಗಳಿಂದ ಬಿಡುಗಡೆಯಾಗಿದ್ದ ಇವರ ಕುಟುಂಬವು 30 ವರ್ಷಗಳಿಂದ ಸ್ವಾಮೀಜಿಗಳಿಂದ ದೇಗುಲದ ಅಭಿವೃದ್ಧಿಯಲ್ಲಿ ಶ್ರಮಿಸಿದ್ದ ಕೆ.ವಿ.ಕುಮಾರಿಗೆ ದೇಗುಲದ ಎಲ್ಲಾ ಆಸ್ತಿ ವಿಲ್ ಬರೆದಿದ್ದರೂ ಮನ್ನಣೆ ಸಿಗುತ್ತಿಲ್ಲ. ಪ್ರತಿ ದಿನ ಸ್ವಾಮೀಜಿಗಳ ಪುತ್ರ ಡಾ.ಶಿವಪ್ರಸಾದ್ ಹಾಗೂ ಪುತ್ರಿ ಅನುರಾಧ ಪ್ರತಿ ದಿನ ದೇವಾಲಯದ ಆದಾಯ ವಸೂಲಿ ಮಾಡಲು ಬೆಂಗಳೂರಿನಿಂದ ಇಡೀ ಕುಟುಂಬವೇ ಕಮ್ಮಸಂದ್ರದ ದೇಗುಲದ ಅತಿಥಿಗೃಹದಲ್ಲಿ ವಾಸ್ತವ್ಯ ಹೂಡಿತ್ತು.
ಇದಕ್ಕೆ ಹೈಕೋರ್ಟ್ ಬ್ರೇಕ್ ಬಿದ್ದಿದೆ. ಶ್ರೀಕೋಟಿಲಿಂಗೇಶ³ರ ದೇಗುಲದ ಸ್ಥಾಪಕ ಶ್ರೀಕಮಲ ಸಾಂಭವ ಶಿವಮೂರ್ತಿ ಸ್ವಾಮೀಜಿಗಳು ತಮ್ಮ ಕುಟುಂಬದೊಂದಿಗೆ 1996ರಿಂದಲೂ ದೂರವಾಗಿದ್ದು, ತನ್ನ ಕುಟುಂಬವು ದೇಗುಲದ ನಿರ್ಮಾಣದಲ್ಲಿ ವಿರೋಧಿಗಳಾಗಿದ್ದರಿಂದ ಬೆಂಗಳೂರಿನಲ್ಲಿದ್ದ ತನ್ನ ಆಸ್ತಿಯನ್ನು ವಿಭಾಗ ಮಾಡಿ 1996ರಲ್ಲಿದ್ದ ಆಸ್ತಿಯಂತೆ ಕುಟುಂಬವನ್ನು ಬಿಡುಗಡೆ ಮಾಡಿದ್ದಾರೆ. ಈ ಕಾರಣದಿಂದ ಇವರ ಕುಟುಂಬವು 30 ವರ್ಷಗಳಲ್ಲಿ ಒಮ್ಮೆಯೂ ಭಾಗಿಯಾಗಿಲ್ಲ. ಕೆ.ವಿ.ಕುಮಾರಿ ಅವರಿಗೆ ದೇಗುಲದ ಸಮಗ್ರ ಆಸ್ತಿ ವಿಲ್ ಬರೆದಿರುವುದನ್ನು ಸಹ ಕೋರ್ಟ್ ಗಣನೆಗೆ ತೆಗೆದುಕೊಂಡಿದೆ.
ಹಲವು ಬಾರಿ ಸ್ವಾಮೀಜಿಗಳೊಂದಿಗೆ ಆಸ್ತಿ ವಿವಾದಕ್ಕೆ ಬರುತ್ತಿದ್ದ ಇವರ ಕುಟುಂಬದ ಕಿರುಕುಳದಿಂದ ಬೇಸತ್ತು, ದೇಗುಲದ ಸಮಸ್ತ ಆಸ್ತಿಯನ್ನು 2002 ಏಪ್ರಿಲ್ 12 ರಂದು ರಾಜ್ಯಪಾಲರ ಹೆಸರಿಗೆ ವಿಲ್ ಬರೆದಿದ್ದರು. ನಂತರ ಈ ವಿಲ್‌ಅನ್ನು ರದ್ದು ಮಾಡಿ 2004ರಂದು ಜ.8 ರಂದು 30 ವರ್ಷಗಳಿಂದ ಸ್ವಾಮೀಜಿಗಳೊಂದಿಗೆ ದೇಗುಲ ನಿರ್ಮಾಣದಲ್ಲಿ ಸಹಕರಿಸಿದ್ದ ದೇಗುಲದ ಕಾರ್ಯದರ್ಶಿ ಕೆ.ವಿ.ಕುಮಾರಿ ಹೆಸರಿಗೆ ಸಮಸ್ತ ದೇವಾಲಯದ ಆಸ್ತಿಯನ್ನು ವಿಲ್ ಬರೆದಿರುವುದಕ್ಕೆ ಹೈಕೋರ್ಟ್ ಮನ್ನಣೆ ನೀಡಿದೆ.
-ಎಂ.ಸಿ.ಮಂಜುನಾಥ್