Advertisement

ಅಕ್ಟೋಬರ್‌ 28 ರಂದು “ಕೋಟಿ ಕಂಠ ಗಾಯನ “; ಭರದ ಸಿದ್ಧತೆ

03:19 PM Oct 15, 2022 | Team Udayavani |

ಬೆಂಗಳೂರು : “ಕೋಟಿ ಕಂಠ ಗಾಯನ ” ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ನಾಡಿನ ಸಾಂಸ್ಕ್ರತಿಕ ಲೋಕಕ್ಕೆ ಹೊಸ ಮೆರಗು ತಂದುಕೊಡುವ ಪ್ರಯತ್ನ ಆರಂಭಿಸಿದ್ದು, ಹಲವು ವರ್ಷಗಳ ಬಳಿಕ ಇಲಾಖೆಯಲ್ಲಿ ಮತ್ತೆ ಸೃಜನಾತ್ಮಕ ಕಾರ್ಯ ಚಟುವಟಿಕೆ ಗರಿಗೆದರಿದಂತಾಗಿದೆ.

Advertisement

“ಪ್ರಶಸ್ತಿ ಪ್ರದಾನ, ವಿಚಾರ ಸಂಕಿರಣ” ಎಂಬುದಕ್ಕೆ ಮಾತ್ರ ಸೀಮಿತವಾಗಿದ್ದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಗೆ ಕಾರ್ಯಕ್ರಮಕ್ಕೆ ಸುನಿಲ್ ಕುಮಾರ್ ಸೃಜನಶೀಲತೆಯ ಲೇಪ ನೀಡಿದ್ದು, ಅವರ ಕಲ್ಪನೆಯಲ್ಲಿ ಮೂಡಿ ಬರುತ್ತಿರುವ “ಕೋಟಿ ಕಂಠ ಗಾಯನ” ಅಕ್ಟೋಬರ್ 28ಕ್ಕೆ ಮುನ್ನವೇ ನಾಡಿನ ಸಾಂಸ್ಕ್ರತಿಕ ಹಾಗೂ ಸಾರ್ವಜನಿಕ ವಲಯದಲ್ಲಿ ” ಶ್ರಾವ್ಯ”ತೆಯ ಮೆರುಗು ಪಡೆಯಲಾರಂಭಿಸಿದೆ.

ಅಕ್ಟೋಬರ್‌ 28ರಂದು ನಾಡಿನಾದ್ಯಂತ ಏಕಕಾಲದಲ್ಲಿ ಕನ್ನಡದ ಕವಿಗಳ ಆರು ಜನಪ್ರಿಯ ಗೀತೆಗಳನ್ನು ಕೋಟಿ ಕಂಠಗಳಲ್ಲಿ ಪ್ರಸ್ತುತಪಡಿಸುವುದಕ್ಕೆ ಈಗ ಬರದ ಸಿದ್ಧತೆ ನಡೆದಿದೆ. ಇದಕ್ಕಾಗಿ ಖುದ್ದು ಕನ್ನಡ ಮತ್ತು ಸಂಸ್ಕ್ರತಿ ಹಾಗೂ ಇಂಧನ ಸಚಿವ ವಿ ಸುನಿಲ್ ಕುಮಾರ್ ವಿವಿಧ ಇಲಾಖೆಗಳು, ಸಂಘ- ಸಂಸ್ಥೆಗಳು ಹಾಗೂ ಗಣ್ಯರ ಜತೆಗೆ ಸಮನ್ವಯ ಕಾರ್ಯ ಪ್ರಾರಂಭಿಸಿದ್ದಾರೆ. ಕಳೆದ ವರ್ಷ  “ಮಾತಾಡ್‌ ಮಾತಾಡ್‌ ಕನ್ನಡ “ ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದ್ದ “ಲಕ್ಷಕಂಠ ಗಾಯನ”ಕ್ಕೆ ಈಗಾಗಲೇ ನಾಡಿನಾದ್ಯಂತ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಹೀಗಾಗಿ ರಾಜ್ಯೋತ್ಸವ ಪ್ರಯುಕ್ತ ಮತ್ತೆ ಈ ಅಭಿಯಾನವನ್ನು ಪ್ರಾರಂಭಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೋಟಿ ಕಂಠ ಗಾಯನ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ.

ಅಂದು ಏಕಕಾಲದಲ್ಲಿ ರಾಜ್ಯಾದ್ಯಂತ ಕೋಟಿ ಕಂಠಗಳಲ್ಲಿ ಕನ್ನಡ ಗೀತೆಗಳನ್ನು ಪ್ರಸ್ತುತಪಡಿಸಲಾಗುತ್ತದೆ. ವಿಧಾನಸೌಧದ ಮಹಾದ್ವಾರದ ಮೆಟ್ಟಿಲು ಸೇರಿದಂತೆ ರಾಜ್ಯದ ಹದಿನೈದು ಸ್ಥಳಗಳಲ್ಲಿ ವಿಶೇಷ ರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾಗರೋತ್ತರದಲ್ಲೂ ಕನ್ನಡದ ಡಿಂಡಿಮ ಸದ್ದು ಮಾಡಲಿದೆ.

ಅಕ್ಟೋಬರ್‌ 28 ರಂದು ಬೆಳಗ್ಗೆ ನಡೆಯುವ ಈ ಕಾರ್ಯಕ್ರಮದಲ್ಲಿ ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆ “ಜಯ ಭಾರತ ಜನನಿಯ ತನುಜಾತೆ” , ಹುಯಿಲಗೊಳ ನಾರಾಯಣರಾವ್ ವಿರಚಿತ ಉದಯವಾಗಲಿ ನಮ್ಮ ಚಲುವ ಕನ್ನಡನಾಡು,  ಡಾ.ಚನ್ನವೀರ ಕಣವಿ ಅವರ “ವಿಶ್ವ ವಿನೂತನ ವಿದ್ಯಾ ಚೇತನ ಸರ್ವ ಹೃದಯ ಸಂಸ್ಕಾರಿ “, ಕುವೆಂಪು ಅವರ “ಬಾರಿಸು ಕನ್ನಡ ಡಿಂಡಿಮವಾ “ , ಡಾ.ಡಿ.ಎಸ್.ಕರ್ಕಿಯವರ “ಹಚ್ಚೇವು ಕನ್ನಡದ ದೀಪ “ ಹಾಗೂ ಡಾ. ಹಂಸಲೇಖ ಅವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು “ ಎಂಬ 5 ಗೀತೆಗಳನ್ನು ಕೋಟಿ ಕಂಠಗಳಲ್ಲಿ ಹಾಡಲಾಗುತ್ತದೆ. ಇದನ್ನು ಹೊರತುಪಡಿಸಿಯೂ ಆಸಕ್ತರು ಬೇರೆ ಕನ್ನಡ ಗೀತೆಗಳನ್ನು ಸಮಯದ ಮಿತಿ ಆಧರಿಸಿ ಪ್ರಸ್ತುಪಡಿಸಬಹುದಾಗಿದೆ.

Advertisement

ಈ ಅಭಿಯಾನ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಸರಕಾರಿ ಕಚೇರಿಗಳಲ್ಲಿ, ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳು, ತಾಲೂಕು ಕೇಂದ್ರಗಳು, ದೆಹಲಿ ಕನ್ನಡ ಸಂಘ, ಹೊರನಾಡು, ಗಡಿನಾಡ ಸಂಘಗಳ ಕಚೇರಿ, ವಿಧಾನಸೌಧದ ಮೆಟ್ಟಿಲು ಹಾಗೂ ವಿಧಾನಸೌಧ-ವಿಕಾಸ ಸೌಧದ ಮಧ್ಯೆ ಇರುವ ಗಾಂಧಿ ಪ್ರತಿಮೆ ಎದುರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸಮೂಹ ಗಾಯನ ನಡೆಸುವರು.

ಅದೇ ರೀತಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮೆಜೆಸ್ಟಿಕ್‌ ರೈಲು ನಿಲ್ದಾಣ, ಮೆಟ್ರೋ ನಿಲ್ದಾಣದಲ್ಲೂ ಈ ಐದು ಕನ್ನಡ ಗೀತೆಗಳನ್ನು ಹಾಡುವುದಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಾಡಿನ ಪ್ರಮುಖ ಪ್ರವಾಸಿ ಸ್ಥಾನಗಳು, ಕೋಟೆಗಳು, ಕಡಲತೀರ, ಐಟಿ ಕಂಪನಿಗಳು, ಆಸ್ಪತ್ರೆ ಹಾಗೂ ಜಿಲ್ಲಾ ಕೇಂದ್ರಗಳಲ್ಲೂ ಕೋಟಿ ಕಂಠ ಗಾಯನ ಅಭಿಯಾನ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಕನ್ನಡದ ಪ್ರಮುಖ ಸಾಧಕರು, ಮಠಾಧೀಶರು, ಸಾಹಿತಿಗಳು, ಕವಿಗಳು, ವಿದ್ಯಾರ್ಥಿ ಸಂಘಟನೆಗಳೂ ಭಾಗಿಯಾಗಲಿದ್ದಾರೆ. ಎಲ್ಲದಕ್ಕಿಂತ ಮುಖ್ಯವಾಗಿ ಈ ಕಾರ್ಯಕ್ರಮದಲ್ಲಿ ಭಾಷಣವಿಲ್ಲ, ಗಾಯನ ಮಾತ್ರ. ಸ್ವಾಗತ, ಗಾಯನ, ಸಂಕಲ್ಪ, ವಂದನಾರ್ಪಣೆ ಮಾತ್ರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next