ಪುತ್ತೂರು : ತುಳುನಾಡಿನ ಕಾರಣಿಕ ಶಕ್ತಿಗಳಾದ ಕೋಟಿ-ಚೆನ್ನಯರ ಜನ್ಮಸ್ಥಾನ, ಪರಮ ಪಾವನ ಕ್ಷೇತ್ರ ಪಡುಮಲೆಯಲ್ಲಿ ಐನೂರೈವತ್ತು ವರ್ಷಗಳ ಬಳಿಕ ಸಾನಿಧ್ಯಗಳ ಪ್ರತಿಷ್ಠೆ ಹಾಗೂ ಬ್ರಹ್ಮಕಲಶದ ಸಂದರ್ಭದಲ್ಲಿ ನಾನಾ ದಿಕ್ಕಿನಲ್ಲಿ ನಾಗರ ಹಾವು, ಕೃಷ್ಣ ಸರ್ಪ, ಎಳೆ ನಾಗರ ಹಾವು ಪ್ರತ್ಯಕ್ಷಗೊಂಡು ಅಚ್ಚರಿ ಮೂಡಿಸಿತು.
ಎ.24 ರಂದು ಮುಂಜಾನೆ ಪ್ರತಿಷ್ಠೆ, ಜೀವಕಲಶಾಭಿಷೇಕ, ಮಹಾಪೂಜೆ, ಗಣಪತಿ ಹವನ, ಬ್ರಹ್ಮಕಲಶ, ನಾಗ ಬೆರ್ಮರ್ ಬಿಂಬ ಪ್ರತಿಷ್ಠೆ, 48 ಕಲಶಗಳ ಅಭಿಷೇಕ, ಪವಿತ್ರ ತೀರ್ಥಸ್ಥಳದ ಶುದ್ದಿಕರಣ ನಡೆಯಿತು. ಕೋಟಿ-ಚೆನ್ನೆಯರ ತಾಯಿ ಮಹಾಮಾತೆ ದೇಯಿಬೈದೇತಿಯ ಸಮಾ ಸ್ಥಳದಲ್ಲಿ ಆರಾಧನಾ ಬಿಂಬ ಪ್ರತಿಷ್ಠೆ ಮಾಡಿ ಮಹಾಮಾತೆಯನ್ನು ಸ್ಮರಿಸಲಾಯಿತು.ಈ ವೇಳೆ ನಾಗನ ದರ್ಶನ ಕಂಡು ಬಂದಿದೆ.
ಇದನ್ನೂ ಓದಿ :ಮಂಗಳೂರು ಕಾರಾಗೃಹದಲ್ಲಿ ಹಲ್ಲೆ ಪ್ರಕರಣ : ಕೇರಂ ಬೋರ್ಡ್, ಟ್ಯೂಬ್‌ಲೈಟ್‌ನಿಂದ ಆಯುಧ ತಯಾರಿ !
ಪ್ರತ್ಯಕ್ಷಗೊಂಡ ನಾಗ : ವಿಸ್ಮಯ
ಕೋಟಿ-ಚೆನ್ನಯರು ಆರಾಧಿಸುತ್ತಿದ್ದ ಪಡುಮಲೆ ನಾಗನ ಪುಣ್ಯಭೂಮಿಯಲ್ಲಿ ನಾಗನೇ ಪ್ರತ್ಯಕ್ಷನಾಗುವ ಮೂಲಕ ವಿಸ್ಮಯ ಮೂಡಿಸಿತು. ಎ.23 ರಂದು ಸಂಜೆ ನಾಗನ ವಿಗ್ರಹವನ್ನು ಜಲಾಧಿವಾಸಕ್ಕೆ ಇರಿಸಲಾದ ಕೆರೆಯಿಂದ ಮೇಲೆತ್ತುವ ಸಂದರ್ಭದಲ್ಲಿಯು ನಾಗ ಪ್ರತ್ಯಕ್ಷನಾಗಿ ಬಳಿಕ ಆಲಯದ ತನಕವು ಹಿಂಬಾಲಿಸಿಕೊಂಡು ಬಂದು ಬಾಲಾಲಯದಲ್ಲಿಯು ಕಾಣಿಸಿತು. ರಾತ್ರಿ ವೇಳೆ ತಂತ್ರಿ ವರ್ಗದವರಿಂದ ಪೂಜಾ ಕಾರ್ಯಕ್ರಮ ನಡೆಯುವ ವೇಳೆ ಕೃಷ್ಣ ಸರ್ಪವು ಪ್ರತ್ಯಕ್ಷಗೊಂಡು ದರುಶನ ನೀಡಿತು. ಎ.24 ರಂದು ಪ್ರತಿಷ್ಠಾ ಬ್ರಹ್ಮಕಲಶದ ಸಂದರ್ಭದಲ್ಲಿಯು ಕೃಷ್ಣ ಸರ್ಪ ಹಾಗೂ ಬೆರ್ಮರ್ ಸನ್ನಿಯಲ್ಲಿ ಎಳೆ ನಾಗವೊಂದು ಕಾಣಿಸಿಕೊಂಡಿತು. ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.