Advertisement

ಕೋಟೇಶ್ವರ: ಬಗೆಹರಿಯದ ತ್ಯಾಜ್ಯ ವಿಲೇವಾರಿ ಸಮಸ್ಯೆ

11:56 PM Jul 01, 2019 | Sriram |

ಕೋಟೇಶ್ವರ: ಸ್ವಚ್ಛ ಗ್ರಾಮ ಪರಿಕಲ್ಪನೆಯನ್ನು ಸಾಕಾರಗೊಳಿಸುವುದರ ಮೂಲಕ ಸ್ವಸ್ಥ ಸಮಾಜ ನಿರ್ಮಾಣದ ಹೊಣೆ ಹೊತ್ತಿರುವ ಕೋಟೇಶ್ವರ ಗ್ರಾ.ಪಂ.ಗೆ ನಗರದಲ್ಲಿ ನಿರಂತರ ಎಸೆಯಲಾಗುತ್ತಿರುವ ಮೂಟೆ ಮೂಟೆ ತ್ಯಾಜ್ಯ ವಿಲೇವಾರಿ ಕಾರ್ಯ ಸವಾಲಾಗಿದೆ.

Advertisement

ಅನೇಕ ಉಪ ಗ್ರಾಮಗಳನ್ನು ಹೊಂದಿರುವ ದೊಡ್ಡ ಗ್ರಾಮ ಪಂಚಾಯತ್‌ ಆಗಿರುವ ಕೋಟೇಶ್ವರ ಗ್ರಾ.ಪಂ.ಗೆ ಸದ್ಯ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳುವುದಕ್ಕೆ ಸರಕಾರಿ ಜಾಗದ ಕೊರತೆ ಎದುರಾಗಿದೆ.

ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಸಹಕರಿಸುವಂತೆ ಕುಂದಾಪುರ ಪುರಸಭೆಗೆ ಕೋರಲಾಗಿದ್ದರೂ ಅಲ್ಲಿಂದ ಸಕಾರಾತ್ಮಕ ಉತ್ತರ ಬಾರದಿರುವುದು ಸಮಸ್ಯೆ ಬಿಗಡಾಯಿಸುವಂತೆ ಮಾಡಿದೆ.

ಸಾಂಕ್ರಾಮಿಕ ರೋಗ ಭೀತಿ
ಮಳೆಗಾಲ ಆರಂಭದಲ್ಲಿ ಇಲ್ಲಿನ ಸರ್ವೀಸ್‌ ರಸ್ತೆ ಸಹಿತ ರಾ.ಹೆದ್ದಾರಿಯ ಹಿಂದು ರುದ್ರ ಭೂಮಿಗೆ ಸಾಗುವ ಪಕ್ಕದಲ್ಲಿ ಎಸೆಯಲಾಗಿರುವ ಮೂಟೆ ಮೂಟೆ ತ್ಯಾಜ್ಯಗಳು ಮಳೆ ನೀರಿನಿಂದಾಗಿ ಅಲ್ಲೇ ಕೊಳೆತು ಡೆಂಗ್ಯೂ, ಮಲೇರಿಯಾ, ಟೈಫಾೖಡ್‌ ಇನ್ನಿತರ ಸಾಂಕ್ರಾಮಿಕ ರೋಗ ಹರಡಿಸುವ ಸೊಳ್ಳೆಗಳ ಉಗಮಸ್ಥಾನವಾಗಿ ಬದಲಾಗುತ್ತಿದೆ. ಬಸ್ಸಿಗಾಗಿ ಅಲ್ಲೇ ಪಕ್ಕದಲ್ಲಿ ಕಾಯುವ ಪ್ರಯಾಣಿಕರಿಗೆ ಹಬ್ಬಿರುವ ದುರ್ನಾತ ಹಾಗೂ ಕೊಳಚೆಯಿಂದಾಗಿ ಭಯದ ವಾತವರಣದಲ್ಲಿ ಸಾಗಬೇಕಾಗಿದೆ.

ವಿಲೇವಾರಿ ಮಾಡಿದರೂ ಮತ್ತೆ ಪ್ರತ್ಯಕ್ಷ
ಕ್ಲೀನ್‌ ಕುಂದಾಪುರ ಸಂಘಟನೆ ಸಹಿತ ಗ್ರಾ.ಪಂ. ಅನೇಕ ಬಾರಿ ತ್ಯಾಜ್ಯ ವಿಲೇವಾರಿಗೊಳಿಸಿದ್ದರೂ ಆಹಾರ ಪದಾರ್ಥ ಸಹಿತ ಇನ್ನಿತರ ವಸ್ತುಗಳ ಮೂಟೆ ಅದೇ ಜಾಗದಲ್ಲಿ ಮತ್ತೆ ಪ್ರತ್ಯಕ್ಷ ವಾಗುತ್ತಿರುವುದು ಶುಚಿತ್ವಕ್ಕೆ ಮಹತ್ವ ನೀಡುತ್ತಿರುವವರ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಇದೆ.

Advertisement

ಆರೋಗ್ಯ ಇಲಾಖೆ ಜಾಗ್ರತೆ ವಹಿಸಲಿ
ಎದುರಾದ ತ್ಯಾಜ್ಯ ವಿಲೇವಾರಿ ಸಮಸ್ಯೆಯಿಂದಾಗಿ ಸಾಂಕ್ರಾಮಿಕ ರೋಗ ಭೀತಿ ಇರುವ ಇಲ್ಲಿನ ಪ್ರದೇಶಗಳಲ್ಲಿ ರೋಗ ನಿರೋಧಕ ಔಷಧವನ್ನು ಸಿಂಪಡಿಸುವುದರೊಡನೆ ಸ್ವಚ್ಛತೆಯ ಬಗ್ಗೆ ಜಾಗ್ರತಿ ಮೂಡಿಸಲು ಬ್ಯಾನರ್‌ ಹಾಗೂ ಕಾರ್ಯಾಗಾರಗಳನ್ನು ನಡೆಸುವುದು ಸೂಕ್ತ.

ಇಲ್ಲದಿದ್ದಲ್ಲಿ ಈ ಹಿಂದೆ ಇದೇ ಪ್ರದೇಶದಲ್ಲಿ ಉತ್ತರ ಕನ್ನಡ ಮಂದಿಗೆ ಎದುರಾದ ಮಲೇರಿಯಾ ಹಾಗೂ ಟೈಫಾೖಡ್‌ ಜ್ವರ ಬಾಧೆ ಮತ್ತೆ ಉಲ್ಬಣಿಸಿವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಆದ್ದರಿಂದ ಆರೋಗ್ಯ ಇಲಾಖೆ ಈ ಬಗ್ಗೆ ಮುಂಜಾಗ್ರತೆ ವಹಿಸಬೇಕಾಗಿದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.

ಶ್ರಮಿಸುವೆ
ಹೊಸತಾಗಿ ಅಧಿಕಾರ ಸ್ವೀಕರಿಸಿದ್ದೇನೆ ತ್ಯಾಜ್ಯ ಮುಕ್ತ ಕೋಟೇಶ್ವರವಾಗಿ ಪರಿವರ್ತಿಸುವಲ್ಲಿ ಗ್ರಾ.ಪಂ. ಸದಸ್ಯರು ಸಹಿತ ಗ್ರಾಮಸ್ಥರು ಹಾಗೂ ಸಂಘಟನೆಗಳ ಸಹಕಾರದಿಂದ ಶ್ರಮಿಸುವೆ.
-ಶಾಂತ,
ಅಧ್ಯಕ್ಷರು ಕೋಟೇಶ್ವರ ಗ್ರಾ.ಪಂ
ದಂಡಿಸಿ

ತ್ಯಾಜ್ಯ ವಿಲೇವಾರಿ ಗೊಳಿಸಲಾಗುತ್ತಿದ್ದರೂ ಮತ್ತೆ ಮತ್ತೆ ಎಸೆಯುತ್ತಿರುವುದು ನುಂಗಲಾರದ ತುತ್ತಾಗಿದೆ. ಇಲಾಖೆಗಳು ಅಂತಹ ವ್ಯಕ್ತಿಗಳನ್ನು ಗುರುತಿಸಿ ದಂಡಿಸಿದಲ್ಲಿ ಅದಕ್ಕೊಂದು ಪರಿಹಾರ ದೊರಕ ಬಹುದು
-ತೇಜಪ್ಪ ಕುಲಾಲ್,
ಪಿ.ಡಿ.ಒ. ಕೋಟೇಶ್ವರ ಗ್ರಾ.ಪಂ.

-ಡಾ| ಸುಧಾಕರ ನಂಬಿಯಾರ್‌

Advertisement

Udayavani is now on Telegram. Click here to join our channel and stay updated with the latest news.

Next