ಕೋಟೇಶ್ವರ: ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ಕೊಡಿ ಹಬ್ಬದ ಅಂಗವಾಗಿ ಡಿ. 4ರಂದು ಚೂರ್ಣೋತ್ಸವ, ಅವಭೃತ ಸ್ನಾನ ನೆರವೇರಿದ ಅನಂತರ ಡಿ. 5ರ ಬೆಳಗ್ಗಿನ ಜಾವ ನಡೆದ ಬಂಟರ ಯಾನೆ ನಾಡವರ ಸಮಾಜದ ಓಕುಳಿ ಸೇವೆ ಅಪಾರ ಸಂಖ್ಯೆಯ ಭಕ್ತರನ್ನು ಕುತೂಹಲದೊಡನೆ ರಂಜಿಸಿತು.
ನಾನಾ ರೀತಿಯ ಪ್ರಾಚೀನ ಕಾಲದ ಧರ್ಮಪರಂಪರೆಯೊಡನೆ ಧಾರ್ಮಿಕ ಶ್ರದ್ಧಾಭಕ್ತಿಯ ವಿಶೇಷತೆಯನ್ನು ಹೊಂದಿರುವ ಇಲ್ಲಿನ ಕೊಡಿ ಹಬ್ಬದ ಓಕುಳಿ ಸೇವೆಯ ಸಂದರ್ಭದಲ್ಲಿ 3 ಕಡೆಯಿಂದ ಆಗಮಿಸುವ ಬಂಟರ ಸಮುದಾಯದ ತಂಡದ ಮುಖ್ಯಸ್ಥರಿಗೆ ಹೂವಿನ ಹಾರದೊಡನೆ ಸ್ವಾಗತಿಸಿ, ವಾದ್ಯ ಸಮೇತ ಪೇಟೆಯ ಮುಖ್ಯ ಬೀದಿಯಲ್ಲಿ ಸಾಗುವ ಪರಂಪರೆಯು ಇಲ್ಲಿನ ವಿಶೇಷತೆಯಾಗಿದೆ.
ಬಾಳೆಗೊನೆ ಹಿಡಿಯೋ ಸಾಹಸ
ವರ್ಷಂಪ್ರತಿಯಂತೆ ಕೊಡಿ ಹಬ್ಬದ ಮರುದಿನ ರಾತ್ರಿ 12 ಗಂಟೆಯ ಅನಂತರ ನಡೆಯುವ ಓಕುಳಿ ಸೇವೆಯು ಮಾರ್ಕೋಡು, ಮಲ್ಯಾಡಿ ಹಾಗೂ ತೆಕ್ಕಟ್ಟೆಯ ನಾಡವರ ಸಮಾಜಕ್ಕೆ ಮಾತ್ರ ಸೀಮಿತವಾಗಿದ್ದು ಈ ಮೂರು ಕಡೆಯಿಂದ ರಾತ್ರಿ ಆಗಮಿಸುವ ಯುವಕರು ಸಮೇತ ಮಧ್ಯ ವಯಸ್ಸಿನವರು ಸಂಪ್ರದಾಯದಂತೆ ಓಕುಳಿ ಹೊಂಡಕ್ಕೆ ಹಾರಲು ಸಕಲ ತಯಾರಿ ನಡೆಸಿ ಸೇರುವರು. ಕೋಟಿಲಿಂಗೇಶ್ವರನ ಸಾನ್ನಿಧ್ಯದಲ್ಲಿ ಓಕುಳಿ ಸೇವೆಗಾಗಿ ನೂರಾರು ವರುಷಗಳ ಹಿಂದೆ ರಥಬೀದಿಯ ಸನಿಹ ನಿರ್ಮಿಸಲಾದ ನೀರು ತುಂಬಿದ ಓಕುಳಿ ಹೊಂಡಕ್ಕೆ ವಿರುದ್ಧ ದಿಕ್ಕಿನಲ್ಲಿ ಅದರ 2 ಕಡೆಯಲ್ಲಿ ಉದ್ದಕ್ಕೆ ಕಂಬ ನಿರ್ಮಿಸಿ ಸಮಾನಾಂತರವಾಗಿ ಅದರ ಮಧ್ಯ ಭಾಗದಲ್ಲಿ ಬಾಳೆಹಣ್ಣಿನ ಗೊನೆಯನ್ನು ಕಟ್ಟಿ ಹಗ್ಗದಿಂದ ಬಿಗಿದು ಮೇಲೆತ್ತರಕ್ಕೆ ಹಾಗೂ ಕೆಳಕ್ಕೆ ಅನಾಯಾಸವಾಗಿ ಚಲಿಸುವ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡಿ ಓಕುಳಿ ಹೊಂಡದ ಒಂದು ಪಾರ್ಶ್ವದಿಂದ ಯುವಕರು ಬಾಳೆಹಣ್ಣಿನ ಗೊನೆಯನ್ನು ಹಿಡಿಯಲು ಪ್ರಯತ್ನ ನಡೆಸುತ್ತಾರೆ. ಈ ಸಂದರ್ಭದಲ್ಲಿ ಅವರ ದಿಕ್ಕು ತಪ್ಪಿಸಿ ಬಾಳೆಹಣ್ಣಿನ ಗೊನೆಯನ್ನು ಸರಿಸುವಾಗ ಚಾಕಚಕ್ಯತೆಯಿಂದ ಬಾಳೆಹಣ್ಣಿನ ಗೊಂಚಲನ್ನು ಹಿಡಿಯುವ ತಂಡವು ಬಹುಮಾನ ಪಡೆಯುವ ಪದ್ಧತಿ ಈ ಭಾಗದ ಬಂಟರ ಸಮುದಾಯಕ್ಕೆ ಒಂದು ಪ್ರತಿಷ್ಠೆಯ ಸೇವೆಯ ಕಣವಾಗಿದೆ. ಹಾಗಾಗಿ ನೂರಾರು ಸಂಖ್ಯೆಯಲ್ಲಿ ಆಗಮಿಸುವ ಬಂಟರ ಸಮುದಾಯದ ಯುವಕರು ಈ ಒಂದು ಸ್ಪರ್ಧೆಯಲ್ಲಿ ಭಾಗವಹಿಸುವುದರೊಡನೆ ಕೋಟಿ ಲಿಂಗೇಶ್ವರನ ಓಕುಳಿಸೇವೆಯಲ್ಲಿ ಭಾಗಿಯಾಗಿ ಧನ್ಯರಾಗುತ್ತಾರೆ.
ಡಾ| ಸುಧಾಕರ ನಂಬಿಯಾರ್