ಕುಂದಾಪುರ: ಕೋಟೇಶ್ವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದು ಈ ಬಾರಿ ಆಂಗ್ಲಮಾಧ್ಯಮದ ಗರಿ ಪೋಣಿಸಿಕೊಂಡಿದೆ.
ಕಳೆದ ವರ್ಷ 302 ವಿದ್ಯಾರ್ಥಿಗಳಿದ್ದು 31 ಹೊಸ ವಿದ್ಯಾರ್ಥಿಗಳ ಸೇರ್ಪಡೆಯಾಗಿತ್ತು. 8 ಮಂದಿ ಖಾಯಂ ಶಿಕ್ಷಕರಿದ್ದು ನಾಲ್ವರು ಗೌರವ ಶಿಕ್ಷಕರಿದ್ದಾರೆ. ಈ ಪೈಕಿ ಇಬ್ಬರು ಶಿಕ್ಷಕರನ್ನು ಇಲಾಖೆ ಅತಿಥಿ ಶಿಕ್ಷಕರಾಗಿ ನೇಮಿಸಿತ್ತು. 2 ಹುದ್ದೆ ಖಾಲಿ ಇದೆ.
ಶಾಲಾ ವಿಶೇಷ
ಇಲ್ಲಿ 1ರಿಂದ 12ನೇ ತರಗತಿವರೆಗೆ ಪಬ್ಲಿಕ್ ಶಾಲೆಯಿದೆ. ಇಲ್ಲಿಗೆ ಇಲಾಖೆ ವತಿಯಿಂದ ವಿಶೇಷವಾಗಿ ಶಿಕ್ಷಣ ಸಂಪನ್ಮೂಲ ವ್ಯಕ್ತಿಯನ್ನು ನೇಮಿಸಿದ್ದು, ವಿಭಿನ್ನವಾಗಿ ಪಠ್ಯ ಚಟುವಟಿಕೆ ರೂಪಿಸಿ ಮಕ್ಕಳ ಕಲಿಕಾ ಸಾಮರ್ಥ್ಯ ವೃದ್ಧಿಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾರೆ. 3 ಕೊಠಡಿಗಳಿಗೆ ಪ್ರಾಜೆಕ್ಟರ್ ಮೂಲಕ ಪಠ್ಯ ಮಾಹಿತಿಗಳನ್ನು ಬಿತ್ತರಿಸಲಾಗುತ್ತದೆ. ತಲಾ 6 ಮಕ್ಕಳ ಗುಂಪುಗಳನ್ನು ರಚಿಸಲಾಗಿದೆ. ಇದರಿಂದಾಗಿ ಮಕ್ಕಳ ಕಲಿಕೆಗೆ ಹೆಚ್ಚಿನ ಮುತುವರ್ಜಿ ವಹಿಸಲು ನೆರವಾಗುತ್ತದೆ.
ಮಕ್ಕಳಿಗೆ ಗಣಿತ ಕಿಟ್‌ಗಳನ್ನು ನೀಡಲಾಗಿದೆ. ಇದರಿಂದಾಗಿ ಶೇ. 75 ರಷ್ಟು ವಿದ್ಯಾರ್ಥಿಗಳಿಗೆ ಶೇ.75ಕ್ಕಿಂತ ಹೆಚ್ಚಿನ ಗಣಿತದ ಅರಿವು, ಶೇ.25ರಷ್ಟು ವಿದ್ಯಾರ್ಥಿಗಳಿಗೆ ಸರಾಸರಿ ಶೇ.50ರಷ್ಟು ಗಣಿತದ ಅರಿವು ಉಂಟಾಗುತ್ತದೆ ಎಂಬ ಲೆಕ್ಕಾಚಾರ. ಕಲಿಕೆಯಲ್ಲಿ ಹಿಂದೆ ಉಳಿದವರಿಗೆ ವಿಶೇಷ ತರಗತಿಗಳಿವೆ. ಅಂಕಗಳ ಬೆನ್ನತ್ತುವುದೇ ಜೀವನ ಅಲ್ಲ ಆದರೆ ಅಂಕಗಳಿಕೆಯೂ ಅನಿವಾರ್ಯ ಎಂಬ ದೃಷ್ಟಿಯಿಂದ ಇದನ್ನು ಮಾಡಲಾಗಿದೆ. ಇದನ್ನು ಎಲ್ಲ ತರಗತಿಗಳಿಗೂ ವಿಸ್ತರಿಸುವ ಯೋಜನೆಯಿದೆ.
ಈಗಾಗಲೇ ಆಂಗ್ಲ ಮಾಧ್ಯಮ
6, 7ನೇ ತರಗತಿಗೆ ಆಂಗ್ಲಮಾಧ್ಯಮ ಅಳವಡಿಸಲಾಗಿದೆ. ಈ ಬಾರಿ ಎಲ್ಕೆಜಿಗೆ 45 ವಿದ್ಯಾರ್ಥಿಗಳ ದಾಖಲಾತಿಯಾಗಿದ್ದು 30ಕ್ಕಷ್ಟೇ ಅವಕಾಶವಿದೆ. ಯುಕೆಜಿಗೆ ಅರ್ಜಿ ಸ್ವೀಕರಿಸಿದ್ದರೂ ಯುಕೆಜಿ ಆರಂಭಿಸಲು ಅವಕಾಶ ಇಲ್ಲ. 1ನೇ ತರಗತಿಗೆ 18 ವಿದ್ಯಾರ್ಥಿಗಳು ಶಾಲಾರಂಭಕ್ಕೆ ಮುನ್ನವೇ ದಾಖಲಾಗಿದ್ದಾರೆ. ಈ ವರ್ಷ 1ನೇ ತರಗತಿ ಇಂಗ್ಲಿಷ್ ಮಾಧ್ಯಮ, ಬರುವ ವರ್ಷ 1, 2ನೇ ಹೀಗೆ ಆಂಗ್ಲಮಾಧ್ಯಮ ಶಿಕ್ಷಣ ಸರಕಾರದ ಮೂಲಕ ಮುಂದುವರಿಯಲಿದೆ. ಈ ಮೂಲಕ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಲು ಸಜ್ಜಾಗಿದೆ.